ADVERTISEMENT

ಬೆಳಗಾವಿ: ಸಸಿಗಳ ಪಾಲನೆಗೆ ಶ್ರಮದಾನ; ಕಸನಾಳ ಯುವಕರ ಮಾದರಿ ಕಾರ್ಯ

ಸುಧಾಕರ ಎಸ್.ತಳವಾರ, ಬೆಂಗಳೂರು
Published 4 ಜೂನ್ 2021, 19:30 IST
Last Updated 4 ಜೂನ್ 2021, 19:30 IST
ನಿಪ್ಪಾಣಿ ತಾಲ್ಲೂಕಿನ ಕಸನಾಳ ಗ್ರಾಮದ ಯುವ ಕಾರ್ಯಕರ್ತರು ಸಸಿಗಳ ಪೋಷಣೆಯಲ್ಲಿ ತೊಡಗಿದ್ದಾರೆ
ನಿಪ್ಪಾಣಿ ತಾಲ್ಲೂಕಿನ ಕಸನಾಳ ಗ್ರಾಮದ ಯುವ ಕಾರ್ಯಕರ್ತರು ಸಸಿಗಳ ಪೋಷಣೆಯಲ್ಲಿ ತೊಡಗಿದ್ದಾರೆ   

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ರಸ್ತೆ ಬದಿಯಲ್ಲಿ ಅರಣ್ಯ ಇಲಾಖೆ ನೆಟ್ಟಿದ್ದ ಸಸಿಗಳನ್ನು ಶ್ರಮದಾನದ ಮೂಲಕ ಪೋಷಣೆ ಮಾಡುವ ಮೂಲಕ ಯುವ ಕಾರ್ಯಕರ್ತರು ಪರಿಸರ ಕಾಳಜಿಯನ್ನು ತೋರುತ್ತಿದ್ದಾರೆ.

ನಿಪ್ಪಾಣಿ ತಾಲ್ಲೂಕಿನ ಮಾಣಕಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸನಾಳ ಗ್ರಾಮದ ಜನಸೇವಾ ಸಮಿತಿ ಮತ್ತು ವೀರ ಹನುಮಾನ ಸ್ವಯಂಸೇವಕ ಶಾಖೆಯ ಸದಸ್ಯರು ಸುಮಾರು 800 ಸಸಿಗಳನ್ನು ಪೋಷಣೆ ಮಾಡುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಕಸನಾಳ-ಹುಪರಿ ರಸ್ತೆಯ ಬದಿಯಲ್ಲಿ ಅರಣ್ಯ ಇಲಾಖೆಯು ಸಾವಿರಾರು ಸಸಿಗಳನ್ನು ನೆಟ್ಟಿದೆ. ಸಂಘಟನೆಗಳ ಯುವ ಕಾರ್ಯಕರ್ತರು ತಮ್ಮ ಬಿಡುವಿನ ವೇಳೆಯಲ್ಲಿ ಸಸಿಗಳ ಸುತ್ತ ನೀರು ಸಂಗ್ರಹವಾಗುವಂತೆ ಗುಂಡಿ ತೋಡುವುದು, ಸಸಿಗಳಿಗೆ ಆಧಾರವಾಗಿ ಕಟ್ಟಿಗೆಯನ್ನು ನಿಲ್ಲಿಸುವುದು, ನೆಲಕ್ಕೆ ತಾಗಿರುವ ಸಸಿಗಳನ್ನು ಎತ್ತಿ ಕಟ್ಟಿಗೆಗೆ ಕಟ್ಟುವುದು ಮೊದಲಾದ ಕಾರ್ಯಗಳನ್ನು ಮಾಡುತ್ತಾರೆ. ಇದೀಗ ಮಳೆಗಾಲ ಆರಂಭಗೊಂಡಿರುವುದರಿಂದ ಸಸಿಗಳು ನಳನಳಿಸುತ್ತಿವೆ.

ADVERTISEMENT

ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಯುವಕರು ಸ್ವಯಂಪ್ರೇರಣೆಯಿಂದ ಶ್ರಮದಾನ ಮಾಡುತ್ತಿದ್ದಾರೆ. ಜನಸೇವಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಸುನಿಲ ಸುತಾರ, ಪಿಂಟು ಸುತಾರ, ದೀಪಕ ನಾಯಿಕ, ಶ್ರೀಧರ ಸುತಾರ, ಸಚಿನ ನಾಯಿಕ, ಪೋಪಟ ನಾಯಿಕ, ಸಂದೀಪ ಕಾಂಬಳೆ, ಸತೀಶ ಕಾಂಬಳೆ, ಜ್ಞಾನೇಶ್ವರ ವಾಸಕರ, ದಿಗಂಬರ ನಾಯಿಕ, ಹರೀಶ ಶಿತೋಳೆ, ಜ್ಞಾನೇಶ್ವರ, ಪ್ರಸಾದ ಸುತಾರ ಮೊದಲಾದ ಯುವಕರು ಶ್ರಮದಾನದಲ್ಲಿ ಪಾಲ್ಗೊಳ್ಳುತ್ತಾರೆ. ತಮ್ಮ ಈ ಸೇವಾ ಕಾರ್ಯಕ್ಕೆ ಗ್ರಾಮ ಪಂಚಾಯಿತಿಯಿಂದಲೂ ಸಹಕಾರವನ್ನು ಅವರು ಆಪೇಕ್ಷಿಸುತ್ತಾರೆ.

ಸದ್ಯ ಕೋವಿಡ್‌ ಸಂದಿಗ್ದ ಪರಿಸ್ಥಿತಿಯಲ್ಲಿ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಶ್ರಮದಾನ ಮಾಡಲು ಯುವಕರಿಗೆ ಹೆಚ್ಚಿನ ಸಮಯ ದೊರಕುತ್ತಿದೆ. ಕೋವಿಡ್ ನಿಯಮಾವಳಿಗಳನ್ನು ಪಾಲಿಸುತ್ತಾ ಸಸಿಗಳ ಸಂರಕ್ಷಣೆಯ ಕೆಲಸ ಮಾಡುತ್ತಿದ್ದಾರೆ.

‘ಗಡಿ ಭಾಗದಲ್ಲಿರುವ ನಮ್ಮ ಗ್ರಾಮಗಳಲ್ಲಿ ಹಸಿರೀಕರಣ ಮಾಡುವ ನಿಟ್ಟಿನಲ್ಲಿ ಶ್ರಮದಾನದ ಮೂಲಕ ಸಸಿಗಳನ್ನು ಪೋಷಣೆ ಮಾಡುತ್ತಿದ್ದೇವೆ. ಪ್ರತಿಯೊಬ್ಬರೂ ಪರಿಸರ ಉಳಿಸಿ–ಬೆಳೆಸುವ ನಿಟ್ಟಿನಲ್ಲಿ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುವ ಅಗತ್ಯವಿದೆ. ಈ ಭಾಗದಲ್ಲಿ ಹಸಿರು ಸಿರಿ ಸೃಷ್ಟಿಸಲು ಪ್ರತಿಯೊಬ್ಬರೂ ಸಹಭಾಗಿತ್ವ ಹೊಂದಬೇಕು’ ಎನ್ನುತ್ತಾರೆ ಜನಸೇವಾ ಸಮಿತಿ ಸಂಸ್ಥಾಪಕ ಸುನಿಲ ಸುತಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.