ADVERTISEMENT

ಅಂತರರಾಷ್ಟ್ರೀಯ ಛಾಯಾಗ್ರಾಹಕರ ದಿನಾಚರಣೆ: ಅವಿಸ್ಮರಣೀಯ ಕ್ಷಣಗಳು ಸೆರೆ...

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 2:36 IST
Last Updated 19 ಆಗಸ್ಟ್ 2025, 2:36 IST
   

ಚಿಕ್ಕೋಡಿ: ತಾಲ್ಲೂಕಿನ ಜನವಾಡ ಗ್ರಾಮದಲ್ಲಿ ಜ್ಯೋತಿರಾಮ ಮಗದುಮ್ಮ ಹವ್ಯಾಸಿ ಛಾಯಾಗ್ರಾಹಕರಾಗಿ ಗಮನ ಸೆಳೆಯುವಂಥ ಸಹಸ್ರಾರು ಫೋಟೊಗಳನ್ನು ಕ್ಲಿಕ್ಕಿಸಿದ್ದಾರೆ. ನಿಸರ್ಗ ಹಾಗೂ ಸಾಮಾಜಿಕ ಸಂಗತಿಗಳನ್ನು ಒಳಗೊಂಡ ಅವರ ಚಿತ್ರಗಳಲ್ಲಿ ಅವಿಸ್ಮರಣೀಯ ಕ್ಷಣಗಳು ದಾಖಲಾಗಿವೆ.

ಬಿ.ಇಡಿ ಓದಿರುವ ಜ್ಯೋತಿರಾಮ ಅವರಿಗೆ ಎಲ್ಲಿಯೂ ಉದ್ಯೋಗ ದೊರೆಯದ್ದರಿಂದ ಹೊಟ್ಟೆಪಾಡಿಗಾಗಿ ಕ್ಯಾಮೆರಾ ಖರೀದಿಸಿ ಸ್ವಗ್ರಾಮದಲ್ಲಿ ಸಣ್ಣ ಸ್ಟುಡಿಯೊ ತೆರೆದರು. ಹಲವಾರು ಹೆಸರಾಂತ ಛಾಯಾಗ್ರಹಕರ ಕ್ಯಾಮೆರಾ ಮೋಡಿಯ ಸೆಳೆತಕ್ಕೊಳಗಾದ ಜ್ಯೋತಿರಾಮ ತಮ್ಮ ಕೈಚಳಕದಿಂದ ಹಲವು ವಿಭಿನ್ನವಾಗಿರುವ ಫೋಟೊಗಳನ್ನು ಕ್ಲಿಕ್ಕಿಸಲು ಶುರು ಮಾಡಿದರು. ಆಗ ಅವರಲ್ಲಿದ್ದ ಕಲಾವಿದ ಬೆಳಕಿಗೆ ಬಂದ.

ಪತ್ನಿ ಸೋನಾಲಿ, ಪುತ್ರಿಯರಾದ ಜಾಹ್ನವಿ, ಖುಷಿ ಅವರ ವಿಭಿನ್ನ ಫೋಟೊಗಳನ್ನು ಕ್ಲಿಕ್ಕಿಸುವ ಮೂಲಕ ಮಾಡೆಲಿಂಗ್ ಫೋಟೊಗ್ರಫಿಯಲ್ಲಿ ಪಳಗಿದರು. ಎತ್ತಿನಗಾಡಿ ಶರ್ಯತ್ತು, ಗಡಿಭಾಗದ ವಿವಿಧ ಆಚರಣೆಗಳು, ಮಳೆಗಾಲದ ನೋಟ, ಖಡ್ಗ– ಮೃಗಗಳ ಹಲವು ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ. ಹೀಗಾಗಿಯೇ ಹತ್ತಾರು ಕಡೆಗೆ ಇವರು ಕ್ಲಿಕ್ಕಿಸದ ಛಾಯಾಚಿತ್ರಗಳು ಪ್ರೇಕ್ಷಕರ ಮನಸೂರೆಗೊಂಡಿವೆ.

ADVERTISEMENT

2016ರಲ್ಲಿ ಉತ್ತಮ ಛಾಯಾಗ್ರಹಕ ಪ್ರಶಸ್ತಿ, 2017ರಲ್ಲಿ ಇವರ ಹಾರುವ ನವಿಲಿನ ಛಾಯಾಚಿತ್ರವು ಕರ್ನಾಟಕ ಛಾಯಾಗ್ರಹಕ ಸಂಘಟನೆಯವರು ನಡೆಸುವ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. 2023ರಲ್ಲಿ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದ ಮೊಸರು ಗಡಿಗೆ ಒಡೆಯುವ ಸ್ಪರ್ಧೆಯ ಛಾಯಾಚಿತ್ರಕ್ಕೆ ಪ್ರಶಸ್ತಿ ಲಭಿಸಿದೆ. ಬೆಳಗಾವಿ, ನಿಪ್ಪಾಣಿ, ಕೊಲ್ಹಾಪುರ, ಪುಣೆ ಮುಂತಾದ ಕಡೆಗೆ ನಡೆದ ಛಾಯಾಚಿತ್ರ ಪ್ರದರ್ಶನದಲ್ಲೂ ಭಾಗವಹಿಸಿದ್ದಾರೆ.

ಜ್ಯೋತಿರಾಮ ಅವರಿಗೆ ‍ಪ್ರಶಸ್ತಿ ತಂದುಕೊಟ್ಟ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಮೊಸರು ಗಡಿಗೆ ಒಡೆಯುವ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.