ADVERTISEMENT

ಈಜು ಕಲಿತರು, ನೋವು ಮರೆತರು, ಬದುಕಿನ ದಡ ಸೇರಿದರು

ಡಿ.3 ವಿಶ್ವ ಅಂಗವಿಕಲರ ದಿನದ ವಿಶೇಷ

ಇಮಾಮ್‌ಹುಸೇನ್‌ ಗೂಡುನವರ
Published 1 ಡಿಸೆಂಬರ್ 2024, 2:23 IST
Last Updated 1 ಡಿಸೆಂಬರ್ 2024, 2:23 IST
<div class="paragraphs"><p>ಮೋಯಿನ್‌ ಜುನ್ನೇದಿ&nbsp;&nbsp;</p></div>

ಮೋಯಿನ್‌ ಜುನ್ನೇದಿ  

   

ಚಿತ್ರಗಳು: ಏಕನಾಥ ಅಗಸಿಮನಿ

ಬೆಳಗಾವಿಯ ಉಮೇಶ ಕಲಘಟಗಿ ಅವರಿಂದ ಈಜು ತರಬೇತಿ ಪಡೆದ 9 ಅಂಗವಿಕಲರು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ 60 ‍ಪದಕ ಗೆದ್ದಿದ್ದಾರೆ. ರಾಷ್ಟ್ರೀಯ ಟೂರ್ನಿಗಳಲ್ಲಿ 100ಕ್ಕೂ ಅಧಿಕ ಅಂಗವಿಕಲರು ಸಾವಿರಕ್ಕೂ ಹೆಚ್ಚು ಪದಕಗಳ ಗೌರವಕ್ಕೆ ಪಾತ್ರವಾಗಿದ್ದಾರೆ. ಇವರ ಯಶೋಗಾಥೆ ಡಿ.3 ವಿಶ್ವ ಅಂಗವಿಕಲರ ದಿನದ ವಿಶೇಷ.

ADVERTISEMENT

ಅದು 2009. ಹನ್ನೊಂದು ವರ್ಷದ ಆ ಬಾಲಕನನ್ನು ಸೇರಿಸಿಕೊಳ್ಳಲು ಶಾಲೆಗಳು ನಿರಾಕರಿಸಿದ್ದವು. ಅದೇ ಸಮಯಕ್ಕೆ ಬೆಳಗಾವಿಗೆ ಮುಖ್ಯಮಂತ್ರಿ ಬಂದಿದ್ದರು. ತಮ್ಮ ಮಗನ ಶಿಕ್ಷಣದ ಅಹವಾಲು ಹೊತ್ತು ಅವರ ಭೇಟಿಗೆ ತಾಯಿ ಮುಂದಾದರು. ಆದರೆ ಅವಕಾಶ ನೀಡಲಿಲ್ಲ. ಗಡಿಬಿಡಿಯಲ್ಲಿ‌ ಮುಖ್ಯಮಂತ್ರಿ ಹೊರಟು ಹೋದರು. ಆಸೆಗಳ ಮೂಟೆ ಹೊತ್ತು ಬಂದಿದ್ದ ತಾಯಿ ತನ್ನ ಮಗನ ಬದುಕಿಗೆ ಕವಿಯಬಹುದಾದ ಕಾರ್ಮೋಡ ನೆನೆದು ಅಸಹಾಯಕರಾಗಿ ನಿಂತೇ ಇದ್ದರು.

ಅಷ್ಟಕ್ಕೂ ಆ ತಾಯಿಯ ಮಗನನ್ನು ಶಾಲೆಯವರು ಸೇರಿಸಿಕೊಳ್ಳದಿರಲು ಕಾರಣವೇನು ಗೊತ್ತೇ? ಆತನ ಶರೀರದಲ್ಲಿ 200ಕ್ಕೂ ಅಧಿಕ‌ ಮೂಳೆಗಳ ಮುರಿತ!. ಸ್ವತಃ ಏಳಲು, ನಿಲ್ಲಲು, ನಡೆಯಲು ಬಿಡಿ, ಊಟ ಮಾಡಲೂ ಆಗದಂಥ ಸ್ಥಿತಿ. ಇಂಥ ಮಗನ ಭವಿಷ್ಯದ ಬಗೆಗೆ ಚಿಂತಿತರಾಗಿದ್ದ ತಾಯಿಗೆ ಮುಖ್ಯಮಂತ್ರಿ ಸಿಗಲಿಲ್ಲ‌. ಆದರೆ, ಅಲ್ಲೇ ಉಮೇಶ ಕಲಘಟಗಿ ಅವರ ಭೇಟಿಯಾಯಿತು. ಅವರೊಬ್ಬ ನುರಿತ ಈಜು ತರಬೇತುದಾರ.

‘ನಿಮ್ಮ ಮಗ ಅಂಗವಿಕಲನೇ, ಇದಕ್ಕೆ ಬೇಸರಪಟ್ಟುಕೊಳ್ಳಬೇಡಿ. ಪ್ರತಿದಿನ ಈಜುಕೊಳಕ್ಕೆ ಕಳುಹಿಸಿ. ನಾನು ಈಜು ಕಲಿಸುತ್ತೇನೆ’ ಎಂದು ಸಲಹೆ ನೀಡಿದರು. ಮಗ ಹುಟ್ಟಿನಿಂದಲೂ ಪರಾವಲಂಬಿ. ಕ್ಯಾಲ್ಸಿಯಂ ಕೊರತೆಯಿಂದ ಬಳಲುತ್ತಿದ್ದ ಆತನಿಗೆ ಯಾರಾದರೂ ಗಟ್ಟಿಯಾಗಿ ಕೈಹಿಡಿದು ಹಸ್ತಲಾಘವ ಮಾಡಿದರೂ ಮೂಳೆ ಮುರಿಯುವ ಸ್ಥಿತಿ. ಇಂಥ ಮಗನನ್ನು ಈಜಲು ಕಳುಹಿಸುವುದಾದರೂ ಹೇಗೆ ಎಂಬುದು ಪಾಲಕರ ಆತಂಕ.

ಆದರೆ, ಹೆತ್ತವರ ಆತಂಕ ದೂರಮಾಡಿ ಈಜು ಕಲಿಕೆ ಆರಂಭವಾಯಿತು. ಬದುಕಿಗೆ ಆವರಿಸಿದ್ದ ಕಾರ್ಮೋಡವೂ ಕರಗಿತು. ಅಭ್ಯಾಸ ಆರಂಭಿಸಿದ ಹದಿನೆಂಟನೇ ದಿನಕ್ಕೆ ಅವರು ಈ‌ಜು ಕಲಿತರು. ಕ್ರಮೇಣ ‘ಸ್ವಿಮ್ಮಿಂಗ್‌’ ಕರಗತ ಮಾಡಿಕೊಂಡರು. ಅದೇ ವರ್ಷ ಕೋಲ್ಕತ್ತದಲ್ಲಿ ನಡೆದ ರಾಷ್ಟ್ರಮಟ್ಟದ ಈಜು ಟೂರ್ನಿಯಲ್ಲಿ ಎರಡು ಚಿನ್ನದ ಪದಕ ಪಡೆದರು. ಆ ಕ್ಷಣದಿಂದಲೇ ನಿರಾಸೆ ಮತ್ತು ಸೋಲಿಗೆ ಎದುರಾಗಿ ಈಜುತ್ತಲೇ ಇದ್ದಾರೆ. ಇಂಥ ಅಪ್ರತಿಮ ಸಾಧಕನ ಹೆಸರು ಮೋಯಿನ್ ಜುನ್ನೇದಿ.

26 ವಯಸ್ಸಿನವರಾದ ಮೋಯಿನ್‌ ಪದವಿ ಮುಗಿಸಿದ್ದು, ಅಂತರರಾಷ್ಟ್ರೀಯ ಅಂಗವಿಕಲ ಈಜುಪಟುವಾಗಿ ಹೊರಹೊಮ್ಮಿದ್ದಾರೆ. ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಒಂದು ಪದಕ, ರಾಷ್ಟ್ರಮಟ್ಟದಲ್ಲಿ 22 ಪದಕ ಗೆದ್ದಿದ್ದಾರೆ. ಜತೆಗೆ, ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ ಅವರಿಂದ ‘ವಂಡರ್‌ ಬಾಯ್‌ ಆಫ್‌ ಇಂಡಿಯಾ’ ಎಂಬ ಬಿರುದು ಪಡೆದ ಹೆಗ್ಗಳಿಕೆ.

ರಾಘವೇಂದ್ರ ಅಣ್ವೇಕರ್‌

‘ಈಜಿನಿಂದ ಇಷ್ಟೆಲ್ಲ ಗುರುತಿಸಿಕೊಂಡೆ. ಆರೋಗ್ಯವೂ ಸುಧಾರಿಸಿತು. ಆರಂಭದಲ್ಲಿ ಶಾಲೆಗೆ ಸೇರಿಸಿಕೊಳ್ಳಲು ನಿರಾಕರಿಸಿದವರೇ ಪ್ರವೇಶ ನೀಡಲು ಮುಗಿಬಿದ್ದರು. ಇನ್ನೇನಿದ್ದರೂ ಒಲಿಂಪಿಕ್‌ನಲ್ಲಿ ಭಾರತಕ್ಕೆ ಪದಕ ತಂದುಕೊಡುವುದೇ ನನ್ನ ಗುರಿ’ ಎನ್ನುತ್ತ, ಚಳಿಯಲ್ಲೂ ನೀರಿಗಿಳಿದು ಅಭ್ಯಾಸ ಆರಂಭಿಸಿದರು ಮೋಯಿನ್‌ ಜುನ್ನೇದಿ.

ರಾಘವೇಂದ್ರ ಅಣ್ವೇಕರ್‌ ಪೋಲಿಯೊಗೆ ಒಳಗಾಗಿ ಎರಡೂ ಕಾಲು ಕಳೆದುಕೊಂಡರು. ಮೊಣಕಾಲುಗಳ ಮೂಲಕವೇ ನಿತ್ಯದ ನಡಿಗೆ. 15 ವರ್ಷದ ಬಾಲಕನಿದ್ದಾಗ ಅವರಿಗೂ ಈಜು ಕಲಿಸಲು ಉಮೇಶ ಮುಂದಾದರು. ‘ಕಾಲುಗಳೇ ಇಲ್ಲದ ಮಗ ನೀರಲ್ಲಿ ಮುಳುಗಿದರೆ ಹೇಗೆ’ ಎಂಬುದು ಪಾಲಕರ ಚಿಂತೆ. ಆದರೂ ಕೈಗಳಿಂದಲೇ ಪ್ರಯಾಸಪಟ್ಟು ಈಜು ಕಲಿತರು. ಈ ಮಧ್ಯೆ, ಮನೆಯಲ್ಲಿ ಆರ್ಥಿಕ ಸಂಕಷ್ಟ. ಓದಬೇಕೋ? ಈಜು ಕಲಿಯಬೇಕೋ? ಅಥವಾ ಪಾರ್ಟ್‌ಟೈಮ್‌ ಕೆಲಸ ಮಾಡಬೇಕೋ? ಎಂಬ ಸಾಲು ಸಾಲು ಪ್ರಶ್ನೆಗಳು. 

ಇದರಿಂದ ಧೃತಿಗೆಡದ ರಾಘವೇಂದ್ರ ಕಲಿಕೆ ಮುಂದುವರಿಸಿದರು. ಈಜುಕೊಳಕ್ಕೆ ಧುಮುಕಿ ಅಭ್ಯಾಸ ಮಾಡಿದರು. ಜತೆಗೆ, ವಾರಕ್ಕೆ ₹200 ಕೂಲಿಗಾಗಿ ಮತ್ತೊಬ್ಬರ ಬಳಿ ಎಳನೀರು ಮಾರಿ ಕುಟುಂಬಕ್ಕೂ ನೆರವಾದರು. ಕೆಲವೇ ವರ್ಷಗಳಲ್ಲಿ ಇನ್ನೊಬ್ಬರಿಗೆ ಈಜು ಕಲಿಸುವಷ್ಟು ಪರಿಣತಿ ಗಳಿಸಿದರು. ಈಗ ಏಷ್ಯನ್‌ ಪದಕವೀರ ಆಗಿರುವ ಅವರು, ಈಜಿನಲ್ಲಿ 120ಕ್ಕೂ ಪದಕಗಳ ಬೇಟೆಯಾಡಿದ್ದಾರೆ. ಅದರಲ್ಲಿ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಸಿಕ್ಕ ಪದಕಗಳೇ 28!. 

ಇವರಿಬ್ಬರೂ ಅಂಗವಿಕಲ ಈಜುಪಟುಗಳ ಉದಾಹರಣೆಯಷ್ಟೇ. ಇವರಂತೆ ಹಲವು ಅಂಗವಿಕಲರು ಉಮೇಶ ಕಲಘಟಗಿ ಅವರ ಬಳಿ ಪಳಗಿ, ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಈಜು ಟೂರ್ನಿಗಳಲ್ಲಿ ಸಾಧನೆ ಮೆರೆಯುತ್ತಿದ್ದಾರೆ. ಎರಡೂ ಕಾಲುಗಳಿಲ್ಲದವರು, ಒಂದೇ ಕೈ ಹೊಂದಿರುವವರು, ಮಾತು ಬಾರದವರು, ಕಿವಿ ಕೇಳದವರು, ಬುದ್ಧಿಮಾಂದ್ಯರು, ಅಂಧರೂ ಇಂಥವರಲ್ಲಿ ಇದ್ದಾರೆ.

ರಾಜೇಶ ಶಿಂಧೆ

ಬದುಕಿನ ಪಥವೇ ಬದಲಾಯಿತು

‘ನಾನು ಈಜು ಕಲಿಯದಿದ್ದರೆ ಗೂಡಂಗಡಿ ತೆರೆದು ಬಾಳಬಂಡಿ ದೂಡಬೇಕಾಗುತ್ತಿತ್ತು. ಆದರೆ, ಈಜಿನಿಂದ ಸ್ಥಾನಮಾನ ಸಿಕ್ಕಿತು. ಬದುಕಿನ ಪಥವೇ ಬದಲಾಯಿತು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಪ್ರಥಮ ದರ್ಜೆ ಸಹಾಯಕ ಹುದ್ದೆಯನ್ನೂ ಪಡೆದೆ. ನನಗೆ ಅನ್ನ ದಯಪಾಲಿಸಿದ ಈಜಿಗೆ ಸದಾ ಕೃತಜ್ಞ’ ಎಂದು ರಾಘವೇಂದ್ರ ಅಣ್ವೇಕರ್‌ ಹೇಳುವಾಗ ಭಾವುಕರಾದರು.  

ಕರ್ನಾಟಕ ರಾಜ್ಯೋತ್ಸವ, ಏಕಲವ್ಯದಂಥ ಪ‍್ರಶಸ್ತಿಗೂ ಭಾಜನರಾದ ಅವರು, ಬೆಳಗಾವಿಯಲ್ಲಿ ನಾಲ್ಕು ಚುನಾವಣೆಗಳಲ್ಲಿ ‘ಸ್ವೀಪ್‌’ ರಾಯಭಾರಿಯಾಗಿಯೂ ಕೆಲಸ ಮಾಡಿದ್ದಾರೆ.

ಇಂಗ್ಲಿಷ್‌ ಚಾನಲ್‌ ಕ್ರಾಸ್‌ ಮಾಡಿದ ಬೆಳಗಾವಿಯ ಅಂಗವಿಕಲ ಈಜುಪಟು ರಾಜೇಶ ಶಿಂಧೆ

ಒಂದೇ ಕೈಯಲ್ಲಿ ಸ್ವಿಮ್ಮಿಂಗ್‌

‘ಆರನೇ ವಯಸ್ಸಿನಲ್ಲಿದ್ದಾಗ ಅಪಘಾತಕ್ಕೀಡಾಗಿ ಒಂದು ಕೈ ತುಂಡಾಯಿತು. ಒಂದು ದಿನ ಸ್ವಿಮ್ಮಿಂಗ್‌ ಪೂಲ್‌ಗೆ ಹೋದಾಗ, ‘ಈಜು ಕಲಿಯುತ್ತೀಯಾ’ ಎಂದು ತರಬೇತುದಾರ ಉಮೇಶ ಕೇಳಿದರು. ಆದರೆ, ಹೆತ್ತವರು ಕೂಲಿಕಾರರು. ತರಬೇತಿಗೆ ಭರಿಸಲು ಹಣ ಇರಲಿಲ್ಲ. ‘ನನಗೆ ಹಣ ಬೇಕಿಲ್ಲ, ನಿನ್ನಲ್ಲಿ ಛಲವಿದ್ದರೆ ಸಾಕು’ ಎಂದು ಹೇಳಿ, ನೀರಿಗೆ ತಳ್ಳಿಯೇ ಬಿಟ್ಟರು. ಒಂದೇ ಕೈಯಲ್ಲಿ ಈಜುವುದನ್ನು ಕಲಿಸಿದರು’ ಎಂದು ತಮ್ಮ ಕತೆ ಬಿಚ್ಚಿಟ್ಟರು ಶ್ರೀಧರ ಮಾಳಗಿ.

ಸೌದಿ ಅರೇಬಿಯಾ, ಜರ್ಮನಿ, ಇಂಡೋನೆಷ್ಯಾ, ಪೊಲ್ಯಾಂಡ್‌ ಮತ್ತಿತರ ದೇಶಗಳಲ್ಲಿ ನಡೆದ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ 19 ಪದಕ ಗೆದ್ದಿರುವ ಅವರು, ರಾಷ್ಟ್ರೀಯ ಟೂರ್ನಿಗಳಲ್ಲೂ 52 ಪದಕಗಳನ್ನು ಬಾಚಿಕೊಂಡಿದ್ದಾರೆ. ಕ್ರೀಡಾ ಕೋಟಾದಡಿ ಕೇಂದ್ರ ಸರ್ಕಾರಿ ನೌಕರಿ ಸಿಕ್ಕಿದೆ. 2025ರ ಫೆಬ್ರುವರಿಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟೂರ್ನಿಗಾಗಿ ಬೆಂಗಳೂರಿನಲ್ಲಿ ತಯಾರಿ ನಡೆಸಿದ್ದಾರೆ.

‘ನನ್ನ ಎತ್ತರ ಮೂರೇ ಅಡಿ. ಶರೀರದ ಮೂಳೆಗಳಂತೂ ದುರ್ಬಲವಾಗಿದ್ದವು. ಕುಬ್ಜೆಯಾದ ನನ್ನನ್ನು ಕೆಲವರು ಗೇಲಿ ಮಾಡುತ್ತಿದ್ದರು. ಆದರೆ, ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಮೂರು, ರಾಷ್ಟ್ರಮಟ್ಟದಲ್ಲಿ 26 ಪದಕ ಗೆದ್ದ ನಂತರ ಎಲ್ಲರೂ ಗೌರವಿಸುತ್ತಿದ್ದಾರೆ. ಇದಕ್ಕಿಂತ ಖುಷಿ ಮತ್ತೇನು ಬೇಕು’ ಎಂದು ನಗೆಬೀರಿದರು 22ರ ಹರೆಯದ ಸಿಮ್ರಾನ್‌ ಗೌಂಡಲಕರ್‌.

‘ನನ್ನ ಅವಳಿ ಮಕ್ಕಳಾದ ಪೃಥ್ವಿ ಮತ್ತು ಪ್ರಜ್ವಲ್‌ ಹುಟ್ಟಿನಿಂದಲೇ ಅಂಧರು (ಎಸ್‌–12 ಕೆಟಗರಿ). ಮಕ್ಕಳ ಸ್ಥಿತಿ ನೋಡಿ ನಾನು, ಪತ್ನಿ ಮರಗುತ್ತಿದ್ದೆವು, ಅಸಹಾಯಕಾರಗಿದ್ದೆವು. ಆದರೆ, ಇವರಿಬ್ಬರೂ ರಾಷ್ಟ್ರೀಯ ಈಜು ಟೂರ್ನಿಗಳಲ್ಲಿ ಈಗ 24 ಪದಕ ಗೆದ್ದಿರುವುದು ನಮ್ಮ ನೋವನ್ನೆಲ್ಲ ಮರೆಸಿದೆ’ ಎಂದು ಪೊಲೀಸ್‌ ಹೆಡ್‌ ಕಾನ್‌ಸ್ಟೆಬಲ್‌ ಆಗಿರುವ ಯಲ್ಲಪ್ಪ ನಾರಳೇಕರ ಹೆಮ್ಮೆಯಿಂದಲೇ ಹೇಳಿದರು.

ಈಜಿನಲ್ಲಿ ಸಾಧನೆ ಮೆರೆದ ಅವಳಿ ಅಂಧ ಸಹೋದರರಾದ ಪೃಥ್ವಿ ಮತ್ತು ಪ್ರಜ್ವಲ್‌ ಚಿತ್ರಗಳು: ಏಕನಾಥ ಅಗಸಿಮನಿ

ಇಂಗ್ಲಿಷ್‌ ಚಾನಲ್‌ ಈಜಿದರು!

ಪೋಲಿಯೊದಿಂದ ಒಂದು ಕಾಲಿನಲ್ಲಿ ಸ್ವಾಧೀನ ಕಳೆದುಕೊಂಡಿದ್ದ ರಾಜೇಶ ಶಿಂಧೆ, 2008ರ ಜುಲೈ 27ರಂದು ಇಂಗ್ಲೆಂಡ್‌
ನಿಂದ ಫ್ರಾನ್ಸ್‌ವರೆಗಿನ ಇಂಗ್ಲಿಷ್‌ ಚಾನಲ್‌ ಅನ್ನು 14 ತಾಸು, 46 ನಿಮಿಷದಲ್ಲಿ ಈಜಿ ಗುರಿ ಮುಟ್ಟಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ 11 ಮತ್ತು ರಾಷ್ಟ್ರಮಟ್ಟದಲ್ಲಿ 60 ಪದಕ ಗೆದ್ದಿದ್ದಾರೆ.

‘ಸಾಮಾನ್ಯ ವ್ಯಕ್ತಿಗಳಿಗೂ ಇಂಗ್ಲಿಷ್‌ ಚಾನಲ್‌ ಕ್ರಾಸ್‌ ಮಾಡುವುದು ಕಷ್ಟ. ನೀರು ಬಹಳಷ್ಟು ತಂಪಿರುತ್ತದೆ. ಆದರೆ, ಸತತ ಅಭ್ಯಾಸದ ಮೂಲಕ ನಾನು ಗುರಿ ಮುಟ್ಟಿದೆ. ಇಂಗ್ಲಿಷ್‌ ಚಾನಲ್‌ ಕ್ರಾಸ್‌ ಮಾಡಿದ ದಕ್ಷಿಣ ಭಾರತದ ಮೊದಲ ಅಂಗವಿಕಲ ಈಜುಪಟು ನಾನು’ ಎಂದು ಸಂಭ್ರಮಿಸಿದರು ರಾಜೇಶ ಶಿಂಧೆ.

ಅಂಗವೈಕಲ್ಯ ದೇಹಕ್ಕೇ ಹೊರತು ಮನಸ್ಸಿಗಲ್ಲ. ಗುರಿ ಮುಟ್ಟಿಸಲು ಗುರುವಿದ್ದರೆ ಎಲ್ಲ ಊನಗಳನ್ನು ಮರೆತು ಸವಾಲುಗಳ ಸಾಗರದಲ್ಲಿ ಈಜಿ ಬದುಕಿನ ದಡ ಸೇರಬಹುದು. ಇದಕ್ಕೆ ಇಲ್ಲಿನ ಈಜುಪಟುಗಳೇ ಸಾಕ್ಷಿ.

ಸಿಮ್ರಾನ್‌ ಗೌಂಡಲಕರ್‌

ಅಂಗವಿಕಲರಿಗಾಗಿ ಫೆಬ್ರುವರಿಯಲ್ಲಿ ಶಿಬಿರ

‘ಅಂಗವಿಕಲರಿಗಾಗಿ ಏನಾದರೂ ಮಾಡಬೇಕೆಂದು ಅನಿಸಿತು. 1993ರಲ್ಲಿ ನಾನೇ ಅಂಗವಿಕಲರ ಮನೆಮನೆಗೆ ಅಲೆದೆ. ಆದರೆ, ಸ್ಪಂದನೆ ಸಿಗಲಿಲ್ಲ. 2001ರಲ್ಲಿ ಮಕ್ಕಳಿಗೆ ಈಜು ಕಲಿಸುತ್ತಿದ್ದಾಗ, ಆರು ಅಂಗವಿಕಲರು ಈಜು ಕಲಿಯಲು ಉತ್ಸಾಹ ತೋರಿದರು. ಅವರು ಸಾಧನೆ ಮಾಡಿದ ನಂತರ, ಉಳಿದ ಅಂಗವಿಕಲರು ಬರಲು ಆರಂಭಿಸಿದರು. ಅಂಗವಿಕಲರಿಗಾಗಿಯೇ ಪ್ರತಿವರ್ಷ ಫೆಬ್ರುವರಿಯಲ್ಲಿ 21 ದಿನಗಳ ಕಾಲ ವಿಶೇಷ ತರಬೇತಿ ಶಿಬಿರ ನಡೆಸುತ್ತೇವೆ’ ಎಂದು ಉಮೇಶ ಕಲಘಟಗಿ ಹೇಳಿದರು.

ಮೊದಲು ರೋಟರಿ ಕಾರ್ಪೋರೇಷನ್‌ ಈಜುಕೊಳದಲ್ಲಿ (25 ಮೀಟರ್‌ ಉದ್ದ, 10 ಮೀಟರ್‌ ಅಗಲ) ಅಂಗವಿಕಲರಿಗೆ ಈಜು ತರಬೇತಿ ನೀಡಲಾಗುತ್ತಿತ್ತು. ಈಗ ಅದರೊಂದಿಗೆ ಕೆಎಲ್‌ಇ ಸಂಸ್ಥೆಯ ಸುವರ್ಣ ಜೆಎನ್‌ಎಂಸಿ ಈಜುಕೊಳದಲ್ಲೂ (50 ಮೀಟರ್‌ ಉದ್ದ, 25 ಮೀಟರ್‌ ಅಗಲ) ತರಬೇತಿ ನೀಡಲಾಗುತ್ತದೆ. ಇದಕ್ಕೆ ಸಂಘ–ಸಂಸ್ಥೆಯವರು, ದಾನಿಗಳು ನೆರವಾಗುತ್ತಿದ್ದಾರೆ. 

ಮೋಯಿನ್‌ ಜುನ್ನೇದಿ ಅವರನ್ನು ಈಜುಕೊಳದಲ್ಲಿ ಇಳಿಸಲು ಎತ್ತಿಕೊಂಡು ಹೋಗುತ್ತಿರುವುದು
ತಂಡದ ಪರಿಶ್ರಮದಿಂದಾಗಿ ಸಾಧನೆ ಮಾಡಲು ಸಾಧ್ಯವಾಗಿದೆ. ವಿವಿಧ ದೈಹಿಕ ನ್ಯೂನತೆ ಹೊಂದಿದವರು ಅನಾಥರು ಬುಡಕಟ್ಟು ಜನರ ಮಕ್ಕಳಿಗೆ ಉಚಿತವಾಗಿಯೇ ತರಬೇತಿ ಕೊಡುತ್ತೇವೆ. 23 ವರ್ಷಗಳಲ್ಲಿ 5 ಸಾವಿರಕ್ಕೂ ಅಧಿಕ ಮಕ್ಕಳಿಗೆ ಈಜು ಕಲಿಸಿದ್ದೇವೆ
ಉಮೇಶ ಕಲಘಟಗಿ, ಈಜು ತರಬೇತುದಾರ

ಬೆಳಗಾವಿಯ ಈಜುಕೊಳದಲ್ಲಿ ಮೋಯಿನ್‌ ಜುನ್ನೇದಿ ಈಜುತ್ತಿರುವುದು     

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.