ಬೆಳಗಾವಿ: ‘ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗ ನಡೆಸಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ವೀರಶೈವ ಲಿಂಗಾಯತ ಜನಾಂಗದವರು ಧರ್ಮದ ಕಾಲಂನಲ್ಲಿ ‘ಹಿಂದೂ’, ಜಾತಿ ಕಾಲಂನಲ್ಲಿ ‘ವೀರಶೈವ ಲಿಂಗಾಯತ’ ಎಂದೇ ಬರೆಯಿಸಬೇಕು. ಇದರೊಂದಿಗೆ ತಮ್ಮ ಉಪಜಾತಿ ನಮೂದಿಸಬೇಕು’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.
ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದಾವಣಗೆರೆಯಲ್ಲಿ ಈಚೆಗೆ ನಡೆದ ಸಭೆಯಲ್ಲಿ ವೀರಶೈವ ಮತ್ತು ಲಿಂಗಾಯತ ಒಂದೇ ಎಂದು ಅಖಿಲ ಭಾರತ ವೀರಶೈವ ಮಹಾಸಭೆ ಘೋಷಿಸಿದೆ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಏಕತಾ ಸಮಾವೇಶದಲ್ಲೂ ಧರ್ಮದ ಕಾಲಂನಲ್ಲಿ ಏನನ್ನು ನಮೂದಿಸಬೇಕು ಎಂಬುದು ಅವರವರ ವಿವೇಚನೆಗೆ ಬಿಟ್ಟ ನಿರ್ಧಾರ ಎಂಬ ನಿರ್ಣಯ ತೆಗೆದುಕೊಳ್ಳಲಾಗಿದೆ’ ಎಂದರು.
‘ಇವೆರಡೂ ನಿರ್ಣಯಗಳನ್ನು ಆಧಾರದಲ್ಲಿ ಕಾನೂನು ಪರಿಣಿತರ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಹಾಗಾಗಿ ವೀರಶೈವ ಲಿಂಗಾಯತರು ಧರ್ಮದ ಕಾಲಂನಲ್ಲಿ ‘ಹಿಂದೂ’, ಜಾತಿ ಕಾಲಂನಲ್ಲಿ ‘ವೀರಶೈವ ಲಿಂಗಾಯತ’(ಕೋಡ್–ಎ1524) ಬರೆಯಿಸಿ, ತಮ್ಮ ಉಪಜಾತಿಗಳನ್ನು ನಮೂದಿಸಬೇಕು. ಇದರಿಂದ ವೀರಶೈವ-ಲಿಂಗಾಯತ ಅಡಿ ಮೀಸಲಾತಿ ಸೌಲಭ್ಯ ಪಡೆಯುತ್ತಿರುವ ಹಿಂದೂ ಧರ್ಮದ ಉಪಜಾತಿಗಳು ಅವುಗಳಿಂದ ವಂಚಿತರಾಗುವುದಿಲ್ಲ’ ಎಂದರು.
‘ವೀರಶೈವ ಮತ್ತು ಲಿಂಗಾಯತ ಸಮನಾರ್ಥಕ ಪದಗಳಾಗಿವೆ. ವೀರಶೈವ ಲಿಂಗಾಯತ ರಾಜ್ಯದ ಪ್ರಮುಖ ಜನಾಂಗವಾಗಿದೆ. ಕಾನೂನು ಪ್ರಕಾರ ಹಿಂದೂ ಧರ್ಮದ ಭಾಗವಾಗಿದೆ. ವೀರಶೈವ ಲಿಂಗಾಯತ ಜನಾಂಗವು ಹಿಂದೂ ಧರ್ಮದಲ್ಲಿರುವ ವಿವಿಧ ವೃತ್ತಿ ಮಾಡುವ ಜಾತಿಗಳನ್ನು ಒಳಗೊಂಡಿದೆ’ ಎಂದರು.
ಬಿಜೆಪಿ ವಕ್ತಾರ ಎಂ.ಬಿ.ಝಿರಲಿ, ‘ಈಗ ಮಾಡುತ್ತಿರುವ ಸಮೀಕ್ಷೆಯಲ್ಲಿ ಯಾರ ಹೇಳಿಕೆ ಆಧರಿಸಿ, ಕ್ರೈಸ್ತ ಪದವನ್ನು ಹಿಂದೂ ಉಪಜಾತಿಗಳೊಂದಿಗೆ ಸೇರಿಸಲಾಯಿತು ಎಂಬುದನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಸ್ಪಷ್ಟಪಡಿಸಬೇಕು. ರಾಜ್ಯ ಸರ್ಕಾರವು ಕಾಂತರಾಜ್ ಆಯೋಗದ ವರದಿಯನ್ನು ಸ್ವೀಕರಿಸಿಲ್ಲ, ತಿರಸ್ಕರಿಸಿಯೂ ಇಲ್ಲ. ಹಾಗಾಗಿ ಆ ವರದಿ ಬಿಡುಗಡೆಗೊಳಿಸಿ, ದತ್ತಾಂಶ ಬಹಿರಂಗಪಡಿಸಬೇಕು. ವರದಿಯಲ್ಲಿನ ನ್ಯೂನತೆಗಳನ್ನು ಸರಿಪಡಿಸಬೇಕು’ ಅವರು ಒತ್ತಾಯಿಸಿದರು.
ಶಾಸಕಿ ಶಶಿಕಲಾ ಜೊಲ್ಲೆ, ಮಾಜಿ ಸಂಸದೆ ಮಂಗಲ ಅಂಗಡಿ, ಮಾಜಿ ಶಾಸಕರಾದ ಡಾ.ವಿಶ್ವನಾಥ ಪಾಟೀಲ, ಮಹೇಶ ಕುಮಠಳ್ಳಿ, ಮಹಾಂತೇಶ ದೊಡ್ಡಗೌಡರ, ಸಂಜಯ ಪಾಟೀಲ, ಬಿಜೆಪಿ ಬೆಳಗಾವಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಪಾಟೀಲ, ಮಹಾನಗರ ಘಟಕದ ಅಧ್ಯಕ್ಷೆ ಗೀತಾ ಸುತಾರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.