ಸವದತ್ತಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ಯಲ್ಲಮ್ಮ ದೇವಸ್ಥಾನಕ್ಕೆ ಸಾಸ್ಕಿ ಯೋಜನೆಯಡಿ ₹100 ಕೋಟಿ, ಪ್ರಸಾದ ಯೋಜನೆಗೆ ₹18 ಕೋಟಿ, ಪ್ರಾಧಿಕಾರ ನಿಧಿಗೆ ₹97 ಕೋಟಿ ಹಾಗೂ ಪ್ರವಾಸೋದ್ಯಮ ಮಂಡಳಿ ನಿಧಿಗೆ ₹15 ಕೋಟಿ ಸೇರಿ ಒಟ್ಟು ₹215.37 ಕೋಟಿ ಅನುದಾನ ನೀಡಿದೆ’ ಎಂದು ಶಾಸಕ ವಿಶ್ವಾಸ್ ವೈದ್ಯ ಹೇಳಿದರು.
ಇಲ್ಲಿನ ಎಪಿಎಂಸಿ ಆವರಣದಲ್ಲಿ ಹಮಾಲರ ಸಂಘದ ಕಟ್ಟಡಕ್ಕೆ ಟ್ರಸ್ (ತಗಡಿನ ಶೀಟ್) ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ಜನೋಪಯೋಗಿ ಗ್ಯಾರಂಟಿ ಯೋಜನೆಗಳ ಜೊತೆಗೆ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಮೀಸಲಿರಿಸಿ ಚುನಾವಣೆ ಪೂರ್ವದಲ್ಲಿ ನೀಡಿದ ಆಶ್ವಾಸನೆಗಳನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ. ನಗರ ಸೇರಿ ಪ್ರತಿ ಗ್ರಾಮಗಳಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು ಹಾಗೂ ಇತರೆ ಸೌಕರ್ಯ ಒದಗಿಸಲು ಆದ್ಯತೆ ನೀಡಲಾಗಿದೆ. ಜೊತೆಗೆ ರೈತರ ಹಿತಕ್ಕಾಗಿ ಏತ ನೀರಾವರಿಗಳ ನವೀಕರಣಗೊಳಿಸಲು ರೇಣುಕಾ ಏತ ನೀರಾವರಿಗೆ ₹20 ಕೋಟಿ ಹಾಗೂ ಯರಗಟ್ಟಿ ಏತ ನೀರಾವರಿಗೆ ₹25 ಕೋಟಿ ಅನುದಾನದ ಕಾಮಗಾರಿಗೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ’ ಎಂದರು.
‘ಪ್ರಸಕ್ತ ಸಾಲಿನ ಶಾಸಕರ ನಿಧಿಯಲ್ಲಿ ₹10 ಲಕ್ಷ ವೆಚ್ಚವನ್ನು ಹಮಾಲರ ಸಂಘದ ಕಟ್ಟಡದ ಟ್ರಸ್ ನಿರ್ಮಿಸಲು ಮೀಸಲಿರಿಸಿದೆ. ಜೊತೆಗೆ ಬೆಟಸೂರ ಗ್ರಾಮದ ಪ್ರೌಢಶಾಲೆಯಲ್ಲಿ ₹82 ಲಕ್ಷ ವೆಚ್ಚದಲ್ಲಿ ವಿವೇಕ ಯೋಜನೆಯಡಿ 5 ಹೆಚ್ಚುವರಿ ಕೊಠಡಿ, ಬೆಟಸೂರ ಮತ್ತು ಹೀರೆಕುಂಬಿ ಗ್ರಾಮಗಳಲ್ಲಿ ತಲಾ ₹13 ಲಕ್ಷ ವೆಚ್ಚದ ಅಂಗನವಾಡಿ ಕಟ್ಟಡ ಉದ್ಘಾಟಿಸಲಾಗಿದೆ. ಬೆಟಸೂರ ಗ್ರಾಮದಲ್ಲಿ ₹22 ಲಕ್ಷ ಅನುದಾನದ ಸಿಸಿ ರಸ್ತೆ ಹಾಗೂ ಯಡ್ರಾಂವಿ ಗ್ರಾಮದಲ್ಲಿ ₹80 ಲಕ್ಷ ಅನುದಾನದಲ್ಲಿ ಸಿಸಿ ಚರಂಡಿ ಕಾಮಗಾರಿಗೆ ಚಾಲನೆ ನೀಡಲಾಗಿದೆ’ ಎಂದು ತಿಳಿಸಿದರು.
ಮಾರುತಿ ಶಿಂಧೆ, ಗದಿಗೆಪ್ಪ ಕುರಿ, ಶ್ರೀಕಾಂತ ನಾಯ್ಕ, ಪ್ರವೀಣ ರಾಮಪ್ಪನವರ, ಎಫ್.ವೈ. ಗಾಜಿ, ಮಹೇಶ ಹನಸಿ ಹಾಗೂ ಹಮಾಲರ ಸಂಘದ ಪದಾಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.