ADVERTISEMENT

ಉಚ್ಚಾಟನೆ ಬಳಿಕ ಯತ್ನಾಳ ವರ್ಚಸ್ಸು ವೃದ್ಧಿ: ಶಾಸಕ ರಮೇಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 4:24 IST
Last Updated 4 ನವೆಂಬರ್ 2025, 4:24 IST
ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ   

ಬೆಳಗಾವಿ: ‘ಉಚ್ಚಾಟನೆಯಾದ ಬಳಿಕ ರಾಜ್ಯದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ವರ್ಚಸ್ಸೇ ದೊಡ್ಡದಾಗಿ ಬೆಳೆಯುತ್ತಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಇವರ ಮುಂದೆ ಮಂಕಾಗಿದ್ದಾರೆ. ಇದು ಯತ್ನಾಲ್‌ ವರ್ಚಸ್ಸಿಗೆ ಇರುವ ತಾಕತ್ತು’ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಯತ್ನಾಳ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ ದಿನದಂದಲೂ ನಾವು ಮರಳಿ ತರುವ ಪ್ರಯತ್ನದಲ್ಲಿದ್ದೇವೆ. ಹೈಕಮಾಂಡ್‌ ಬಿಹಾರ ಚುನಾವಣೆ, ಆರ್‌ಎಸ್‌ಎಸ್ ಸೇರಿ ಬೇರೆ ಬೇರೆ ವಿಷಯದಲ್ಲಿ ಕ್ರಿಯಾಶೀಲವಾಗಿದೆ. ಇದೆಲ್ಲ ಮುಗಿದ ಮೇಲೆ ಯತ್ನಾಳ ಪರವಾಗಿ ಮಾತನಾಡುತ್ತೇವೆ’ ಎಂದರು.

‘ಯತ್ನಾಳ– ವಿಜಯೇಂದ್ರ ಮಧ್ಯೆ ತುಲನೆ ಮಾಡಿ ನೋಡಿದರೆ ಯತ್ನಾಳ ಲಿಂಗಾಯತ ಮತ್ತು ಹಿಂದೂ ನಾಯಕರಾಗಿ ವರ್ಚಸ್ಸು ಹೆಚ್ಚು ಬೆಳೆಸಿಕೊಂಡಿದ್ದಾರೆ. ವಿಜಯೇಂದ್ರ ವರ್ಚಸ್ಸು ಬಹಳ ಕುಗ್ಗಿದೆ. ಯತ್ನಾಳ ಬೇರೆ ಪಕ್ಷ ಸೇರಿದರೆ ಹಿಂದೂ ಮತಗಳು ನಮ್ಮ ಕೈ ಬಿಡುವ ಸಾಧ್ಯತೆ ಇದೆ. ಇದರಿಂದ ಬಿಜೆಪಿಗೆ ಹಾನಿ. ಹೀಗಾಗಿ ನಾವು ಯತ್ನಾಳ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ’ ಎಂದರು.

ADVERTISEMENT

ನವೆಂಬರ್‌ನಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಕ್ರಾಂತಿ ನಡೆಯುತ್ತದೆಯೇ, ಇಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್‌ ಸರ್ಕಾರಕ್ಕೆ ಇನ್ನೂ ಎರಡೂವರೆ ವರ್ಷ ಅವಕಾಶವಿದೆ. ನಮ್ಮವರು ವಿನಾಕಾರಣ ಈ ವಿಷಯ ಮಾತನಾಡುತ್ತಿದ್ದಾರೆ. ಇದು ಅಸಹ್ಯಕರ. ಆ ಪಕ್ಷದಲ್ಲಿ ಯಾರು ಮುಖ್ಯಮಂತ್ರಿ ಆದರೇನು, ಬಿಟ್ಟರೇನು? ಅದರಿಂದ ನಮಗೇನೂ ಪ್ರಯೋಜನವಿಲ್ಲ. ನಮ್ಮಲ್ಲಿ ಸಂಘಟನೆಗೆ ಮಾಡಬೇಕಾದ ಕೆಲಸಗಳು ಸಾಕಷ್ಟಿವೆ’ ಎಂದರು.

‘ಅಥಣಿಯಲ್ಲಿ ನಡೆದ ಸಕ್ಕರೆ ಕಾರ್ಖನೆಯ ಚುನಾವಣೆಯನ್ನು ನಾನು ಗಂಭೀರವಾಗಿ ಪರಿಗಣಿಸಿಲ್ಲ. ಮುಂದಿನ ಚುನಾವಣೆಯಲ್ಲಿ ಲಕ್ಷ್ಮಣ ಸವದಿಯನ್ನು ಸೋಲಿಸುವುದೇ ನನ್ನ ಗುರಿ’ ಎಂದೂ ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಆರ್‌ಎಸ್‌ಎಸ್ ಎಲ್ಲ ಕಡೆಯೂ ಪಥ ಸಂಚಲನ ನಡೆಸುತ್ತದೆ. ಜೇವರ್ಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮಾತ್ರ ತಕರಾರು ಮಾಡಿಕೊಂಡಿದ್ದಾರೆ. ಈ ವಿಷಯವನ್ನು ಅವರು ಏಕೆ ಇಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೋ ಗೊತ್ತಿಲ್ಲ. ಇದರಿಂದ ಅವರಿಗೇ ಹಾನಿ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.