ADVERTISEMENT

ಬನದ ಹುಣ್ಣಿಮೆ ಜಾತ್ರೆಗೆ ಯಲ್ಲಮ್ಮನಗುಡ್ಡ ಸಜ್ಜು

ಭದ್ರತೆಗಾಗಿ 300 ಪೊಲೀಸರ ನಿಯೋಜನೆ: 68 ಸಿಸಿಟಿವಿ ಕ್ಯಾಮೆರಾ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 2:20 IST
Last Updated 30 ಡಿಸೆಂಬರ್ 2025, 2:20 IST
<div class="paragraphs"><p>ಬನದ ಹುಣ್ಣಿಮೆ ಜಾತ್ರೆ ಅಂಗವಾಗಿ ಯಲ್ಲಮ್ಮನಗುಡ್ಡದಲ್ಲಿ ಅಂಗಡಿಗಳು ಸಿಂಗಾರಗೊಂಡಿರುವುದು</p></div>

ಬನದ ಹುಣ್ಣಿಮೆ ಜಾತ್ರೆ ಅಂಗವಾಗಿ ಯಲ್ಲಮ್ಮನಗುಡ್ಡದಲ್ಲಿ ಅಂಗಡಿಗಳು ಸಿಂಗಾರಗೊಂಡಿರುವುದು

   

ಉಗರಗೋಳ: ಹೊಸ ವರ್ಷದ ಆರಂಭದಲ್ಲಿ ಬನದ ಹುಣ್ಣಿಮೆ ಪ್ರಯುಕ್ತ ನಡೆಯಲಿರುವ ಬೃಹತ್ ಜಾತ್ರೆಗೆ ಯಲ್ಲಮ್ಮನಗುಡ್ಡ ಸಜ್ಜಾಗುತ್ತಿದೆ.

ಬನದ ಹುಣ್ಣಿಮೆ ಅಂಗವಾಗಿ ಜನವರಿ 3ರಂದು ಜಾತ್ರೆ ನಡೆಯಲಿದೆ. ದೇಶದ ನಾನಾ ಭಾಗಗಳಿಂದ ಲಕ್ಷಾಂತರ ಪಾಲ್ಗೊಳ್ಳುವರು. ಆದರೆ, ಜಾತ್ರೆಗೂ ಎರಡು ದಿನ ಮುಂಚೆಯಿಂದಲೇ ಜನವರಿ 1ರಿಂದ ಯಲ್ಲಮ್ಮನ ಸನ್ನಿಧಿಯತ್ತ ಭಕ್ತರ ರಾಶಿ ಹರಿರುಬರಲಿದೆ.

ADVERTISEMENT

ಜಾತ್ರೆಗೆ ಪೂರ್ವಭಾವಿಯಾಗಿ ಜಿಲ್ಲಾಡಳಿತ, ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದವರು ಸಭೆ ಮಾಡಿ, ಕೈಗೊಳ್ಳಬೇಕಿರುವ ಸಿದ್ಧತೆ ಬಗ್ಗೆ ಚರ್ಚಿಸಿದ್ದಾರೆ. ಈಗ ಅಂತಿಮ ಹಂತದ ಸಿದ್ಧತೆ ಭರದಿಂದ ಸಾಗಿವೆ. ಜಾತ್ರೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ನಿಗಾ ವಹಿಸಲಾಗಿದ್ದು, ನಾಲ್ಕು ಓವರ್‌ಹೆಡ್ ಟ್ಯಾಂಕ್ ಮತ್ತು 39 ಕುಡಿಯುವ ನೀರಿನ ತೊಟ್ಟಿಗಳ ವ್ಯವಸ್ಥೆ ಮಾಡಲಾಗಿದೆ.

ಏಕಕಾಲಕ್ಕೆ ಲಕ್ಷಾಂತರ ಭಕ್ತರು ಬರುವುದರಿಂದ ವಸತಿ ವ್ಯವಸ್ಥೆ ಮಾಡುವುದು ಕಷ್ಟ. ಇದಕ್ಕಾಗಿ ವಸತಿ ಸಂಕೀರ್ಣ ಮತ್ತು ಪರಶುರಾಮ ವಸತಿ ನಿಲಯದಲ್ಲಿ 300ಕ್ಕೂ ಅಧಿಕ ಕೊಠಡಿ ಕಾಯ್ದಿರಿಸಲಾಗಿದೆ. ಗುಡ್ಡದ ಪರಿಸರದಲ್ಲಿ ಇರುವ ಸಾಮೂಹಿಕ ಶೌಚಗೃಹಗಳನ್ನು ದುರಸ್ತಿಗೊಳಿಸಿ, ಬಳಕೆಗೆ ಸಿದ್ಧಗೊಳಿಸಿ ಇರಿಸಲಾಗಿದೆ. ಭಕ್ತರಿಗೆ ಸುಲಭವಾಗಿ ದರ್ಶನ ಪಡೆಯಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ.

ಜಾತ್ರೆಗೆ ಇನ್ನೂ ಆರು ದಿನಗಳಷ್ಟೆ ಬಾಕಿ ಇದ್ದು, ವಿವಿಧ ಕಡೆಗಳಿಂದ ವ್ಯಾಪಾರಿಗಳು ಈಗಾಗಲೇ ಗುಡ್ಡಕ್ಕೆ ಲಗ್ಗೆ ಇಟ್ಟಿದ್ದಾರೆ. ತೆಂಗಿನಕಾಯಿ, ಕರ್ಪೂರ, ಬಾಳೆಹಣ್ಣು, ಅರಿಶಿನ–ಕುಂಕುಮ, ಆಟಿಕೆಗಳು, ಮಿಠಾಯಿ ಮತ್ತಿತರ ವಸ್ತುಗಳ ಮಾರಾಟಕ್ಕೆ ಅಂಗಡಿಗಳನ್ನು ಹಾಕುತ್ತಿದ್ದಾರೆ.

‘ಜಾತ್ರೆಯಲ್ಲಿ ಭಕ್ತರ ಆರೋಗ್ಯ ದೃಷ್ಟಿಯಿಂದಲೂ ಕ್ರಮ ವಹಿಸಿದ್ದು, ಕೌಂಟರ್ ಸಂಖ್ಯೆ 1ರ ಬಳಿ ನಮ್ಮ ಕ್ಲಿನಿಕ್ ತೆರೆಯಲಾಗಿದೆ. ಇದಲ್ಲದೆ, ಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಮೂರು ಪ್ರಥಮ ಚಿಕಿತ್ಸೆ ಘಟಕ ತೆರೆಯಲಾಗುತ್ತಿದೆ. ಮುನ್ನೆಚ್ಚರಿಕೆ ದೃಷ್ಟಿಯಿಂದ ಆಂಬುಲೆನ್ಸ್ ಮತ್ತು ಅಗ್ನಿಶಾಮಕ ವಾಹನ ಕಾಯ್ದಿರಿಸಿದ್ದೇವೆ. ಜಾತ್ರೆಯಲ್ಲಿ ಪ್ರಮುಖ ಬದಲಾವಣೆ ಬಗ್ಗೆ ಭಕ್ತರಿಗೆ ತ್ವರಿತ ಮಾಹಿತಿ ನೀಡಲು ಸೆಂಟ್ರಲ್ ಮೈಕ್ ಸಿಸ್ಟಮ್ ಮಾಡಲಾಗಿದೆ’ ಎಂದು ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಿದ್ದು ಹುಲ್ಲೋಳ್ಳಿ ಹೇಳಿದರು.

ಬೆಳಗಾವಿಯಿಂದ ಯಲ್ಲಮ್ಮನಗುಡ್ಡಕ್ಕೆ 25 ಬಸ್ ಬಿಡುತ್ತಿದ್ದು, ಭಕ್ತರ ದಟ್ಟಣೆ ಹೆಚ್ಚಿದಂತೆ ಬಸ್‍ಗಳ ಸಂಖ್ಯೆ ಹೆಚ್ಚಿಸುವುದಾಗಿ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಎಲ್.ಗುಡೆನ್ನವರ ಹೇಳಿದರು.

ಈ ಬಾರಿ ಜಾತ್ರೆಯಲ್ಲಿ ಭದ್ರತೆಗೆ ಒತ್ತು ಕೊಟ್ಟಿದ್ದು, 300 ಪೊಲೀಸರನ್ನು ನಿಯೋಜಿಸಿದ್ದೇವೆ. 400 ಗೃಹರಕ್ಷಕ ದಳ ಸಿಬ್ಬಂದಿಯೂ ಇರಲಿದ್ದಾರೆ. ನಾಲ್ಕು ವಾಚ್ ಟವರ್ ನಿರ್ಮಿಸಿದ್ದೇವೆ ಎಂದು ರಾಮದುರ್ಗ ಡಿವೈಎಸ್‍ಪಿ ಚಿದಂಬರ ಮಡಿವಾಳರ ತಿಳಿಸಿದರು.

ಗುಡ್ಡದಲ್ಲಿ 120 ಮಂದಿ ನಿಯಮಿತವಾಗಿ ಕೆಲಸ ಮಾಡುತ್ತಾರೆ. 45 ಸ್ವಚ್ಛತಾ ಕಾರ್ಮಿಕರಿದ್ದಾರೆ. ಇದಲ್ಲದೆ ಬೇಡಿಕೆ ಅನುಸಾರವಾಗಿ ಹಂಗಾಮಿ ಸಿಬ್ಬಂದಿ ಬಳಸಿಕೊಳ್ಳಲು ಯೋಜಿಸಿದ್ದಾರೆ.

ದೇವಸ್ಥಾನ, ದೇವಸ್ಥಾನದ ಪ್ರಾಂಗಣ, ಟಿಕೆಟ್ ಕೌಂಟರ್ ಆಯಕಟ್ಟಿನ ಸ್ಥಳಗಳಲ್ಲಿ 68 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.