ADVERTISEMENT

‘ರೈತರ ನೆರವಿಗಾಗಿ ಸಹಕಾರಿ ಕ್ಷೇತ್ರ ಸಿದ್ಧ’

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 3:15 IST
Last Updated 18 ಜನವರಿ 2026, 3:15 IST
ಹಿರೇಕುಂಬಿ ಪಿಕೆಪಿಎಸ್‌ನಲ್ಲಿ ಡಿಸಿಸಿ ನಿರ್ದೇಶಕ ವಿ.ಕೆ. ಮಾಮನಿ ರೈತರಿಗೆ ಸಾಲ ವಿತರಣಾ ಪತ್ರ ನೀಡಿದರು
ಹಿರೇಕುಂಬಿ ಪಿಕೆಪಿಎಸ್‌ನಲ್ಲಿ ಡಿಸಿಸಿ ನಿರ್ದೇಶಕ ವಿ.ಕೆ. ಮಾಮನಿ ರೈತರಿಗೆ ಸಾಲ ವಿತರಣಾ ಪತ್ರ ನೀಡಿದರು   

ಸವದತ್ತಿ: ಡಿಸಿಸಿ ಬ್ಯಾಂಕ್‌ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ. ರೈತರ ನೆರವಿಗಾಗಿ ಸಹಕಾರಿ ಕ್ಷೇತ್ರ ಸದಾ ಸನ್ನದ್ಧವಾಗಿರುತ್ತದೆ. ಇದರ ಪ್ರಯೋಜನವನ್ನು ರೈತರು ಪಡೆದುಕೊಳ್ಳಬೇಕು ಎಂದು ಬಿಡಿಸಿಸಿ ನಿರ್ದೇಶಕ ವಿರುಪಾಕ್ಷ ಮಾಮನಿ ಹೇಳಿದರು.

ತಾಲ್ಲೂಕಿನ ಹಿರೇಕುಂಬಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ಶನಿವಾರ ಸಾಲ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮುಂದಿನ ಹಣಕಾಸು ವರ್ಷದಿಂದ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ₹5 ಲಕ್ಷ ವರೆಗೂ ಬೆಳೆ ಸಾಲ ನೀಡಲಾಗುವದು. ಈ ಪಿಕೆಪಿಎಸ್ ನ ಹೊಸ 902 ರೈತರಿಗೆ ಸುಮಾರು ₹3.24 ಕೋಟಿ ಸಾಲ ವಿತರಿಸಲಾಗಿದೆ. ಜೊತೆಗೆ ಟ್ರ್ಯಾಕ್ಟರ್ ಸಾಲವಾಗಿ ಶೇ. 3 ರ ಬಡ್ಡಿ ದರದಲ್ಲಿ ₹10 ಲಕ್ಷ ವರೆಗೂ ನೀಡಲಾಗುವದು. ಪ್ರತಿ ವರ್ಷ ಷೇರುದಾರರಿಗೆ ಡಿವಿಡೆಂಡ ಕೊಡಲಾಗುವದು ಎಂದರು.

ADVERTISEMENT

ರಾಜ್ಯದಲ್ಲಿ ರಾಷ್ಟ್ರೀಕೃತ ಹಾಗೂ ಇತರ ಬ್ಯಾಂಕುಗಳಲ್ಲಿ ಶೂನ್ಯ ಬಡ್ಡಿ ದರದಲ್ಲಿ ಸಾಲ ಸಿಗದು. ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು ನೆರವಾಗಲು ಸಹಕಾರಿ ಕ್ಷೇತ್ರದ ಜಿಲ್ಲಾ ಮದ್ಯವರ್ತಿ ಬ್ಯಾಂಕ್ ನೆರವಾಗುತ್ತಿದೆ. ಜೊತೆಗೆ ಮುಂಬರುವ ದಿನಗಳಲ್ಲೂ ಈ ಭಾಗದ ಇನ್ನುಳಿದ ರೈತರಿಗೆ ಹೆಚ್ಚಿನ ಸಾಲ ಕೊಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಕೃಷಿ ಪತ್ತಿನ ಸಹಕಾರಿ ಸಂಘಗಳು ಮತ್ತು ಜಿಲ್ಲಾ ಬ್ಯಾಂಕ್‌ ಮದ್ಯವರ್ತಿಗಳಾಗಿ ಕಾರ್ಯನಿರ್ವಹಿಸಿ ಸ್ವಂತ ಬಂಡವಾಳ ಸೃಷ್ಟಿಸುವತ್ತ ಹೆಚ್ಚಿನ ಗಮನ ಹರಿಸಬೇಕಿದೆ. ಸಹಕಾರಿ ಕ್ಷೇತ್ರ ಬೆಳೆದಲ್ಲಿ ಪ್ರತಿಯೊಬ್ಬರಿಗೂ ಅನುಕೂಲವಾಗಲಿದೆ. ಇದು ಕುಂಠಿತವಾದರೆ ರೈತ ಸಂಕಷ್ಟ ಎದುರಿಸಬಹುದು. ರೈತರೂ ಸಹ ಸಕಾಲಕ್ಕೆ ಸಾಲ ಮರುಪಾವತಿ ಮಾಡಿ ಸಹಕರಿಸಬೇಕೆಂದರು.

ಅಧ್ಯಕ್ಷ ಫಕ್ಕೀರಪ್ಪ ನವಲಗುಂದ, ಉಪಾಧ್ಯಕ್ಷ ಉಮರಸಾಬ ಮುಲ್ಲಾ, ತಾಲೂಕಾ ನಿಯಂತ್ರಣಾಧಿಕಾರಿ ಚಂದ್ರಶೇಖರ ಕೋರಿ, ವೈ.ಎಂ. ಪಾಟೀಲ, ರೈತ ಪ್ರಮುಖರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.