ರಾಮದುರ್ಗ: ಜಿಲ್ಲಾ ಪಂಚಾಯ್ತಿ ಗೊಡಚಿ ಕ್ಷೇತ್ರದ ಸದಸ್ಯರ ಅಧಿಕಾರವಧಿ ಮುಗಿದು ನಾಲ್ಕು ವರ್ಷವಾಗಿದೆ. ಮುಂದಿನ ಅವಧಿಯ ಚುನಾವಣೆಗಾಗಿ ಈ ಕ್ಷೇತ್ರಕ್ಕೆ ಇನ್ನೂ ಮೀಸಲಾತಿ ನಿಗದಿಯಾಗಿಲ್ಲ. ಆದರೆ, ಕಾಂಗ್ರೆಸ್‌ನಿಂದ ಟಿಕೆಟ್ ಗಿಟ್ಟಿಸಲು ಮೂವರು ಆಕಾಂಕ್ಷಿಗಳ ಮಧ್ಯೆ ಈಗಿನಿಂದಲೇ ಪೈಪೋಟಿ ಶುರುವಾಗಿದೆ.
ಕಳೆದ ಬಾರಿ ಹಿಂದುಳಿದ ‘ಅ’ ವರ್ಗಕ್ಕೆ ಮೀಸಲಿದ್ದ ಗೊಡಚಿ ಕ್ಷೇತ್ರದಲ್ಲಿ ಜಹೂರ್ ಹಾಜಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು. ಈಗ ಮರುಆಯ್ಕೆ ಬಯಸಿ ಮತದಾರರನ್ನು ಸೆಳೆಯಲು ಕಸರತ್ತು ನಡೆಸಿರುವ ಅವರು, ‘ಕೈ’ ಟಿಕೆಟ್‌ನ ಪ್ರಬಲ ಆಕಾಂಕ್ಷಿ.
ಅವರೊಂದಿಗೆ ತೊರಗಲ್ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಬಾಬು ಹುದ್ದಾರ, ಬಟ್ಟೆ ವ್ಯಾಪಾರಿ ಮುನ್ನಾ ಖತೀಬ ಅವರು ಕಾಂಗ್ರೆಸ್‌ನಿಂದ ಸ್ಪರ್ಧೆಗಿಳಿಯಲು ಈಗಿನಿಂದಲೇ ತಾಲೀಮು ನಡೆಸಿದ್ದಾರೆ.
ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳ ಮರು ವಿಂಗಡಣೆ ಹಾಗೂ ಮೀಸಲಾತಿ ನಿಗದಿಗೆ ಸರ್ಕಾರ ಇನ್ನೂ ಕ್ರಮ ವಹಿಸಿಲ್ಲ. ಆದರೆ, ಆಕಾಂಕ್ಷಿಗಳು ಗೆಲುವಿಗಾಗಿ ಈಗಿನಿಂದಲೇ ತಯಾರಿ ನಡೆಸಿದ್ದಾರೆ. ಗೊಡಚಿ ಕ್ಷೇತ್ರಕ್ಕೆ ಸರ್ಕಾರದಿಂದ ಹಿಂದುಳಿದ ‘ಅ’ ವರ್ಗದ ಮೀಸಲಾತಿ ನಿಗದಿಗೆ ತೆರೆಮರೆ ಕಸರತ್ತು ನಡೆಸಿದ್ದಾರೆ.
ಜಹೂರ್ ಹಾಜಿ ಅವರು ಕ್ಷೇತ್ರದಲ್ಲಿನ ಪ್ರಮುಖರನ್ನು ಭೇಟಿಯಾಗಿ, ‘ನನಗೆ ಈ ಬಾರಿಯೂ ಬೆಂಬಲ ನೀಡಬೇಕು’ ಎಂದು ಕೋರುತ್ತಿದ್ದಾರೆ. ‘ಅವರಿಗೆ ಶಾಸಕ ಅಶೋಕ ಪಟ್ಟಣ ಬೆಂಬಲ ಸೂಚಿಸಲಿದ್ದಾರೆ’ ಎಂದು ಹೇಳಲಾಗುತ್ತಿದೆ.
ಇನ್ನೂ ಮುನ್ನಾ ಖತೀಬ ಅವರು, ಶಾಸಕರ ಸಹೋದರ ಪ್ರದೀಪ ಪಟ್ಟಣ ಬೆಂಬಲ ಪಡೆದು ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದಾರೆ. ಕ್ಷೇತ್ರದ ಮುಖಂಡರನ್ನೆಲ್ಲ ಒಂದೆಡೆ ಸೇರಿಸಿ, ತಮಗೆ ಬೆಂಬಲ ನೀಡುವಂತೆ ಬಾಬು ಹುದ್ದಾರ ವಿನಂತಿಸುತ್ತಿದ್ದಾರೆ. ಮೂವರು ಆಕಾಂಕ್ಷಿಗಳು ಅಲ್ಲಲ್ಲಿ ಸಭೆ ನಡೆಸುತ್ತಿದ್ದಾರೆ. ಕಾರ್ಯಕರ್ತರಿಗೆ ಬಾಡೂಟದ ವ್ಯವಸ್ಥೆ ಮಾಡುತ್ತಿದ್ದಾರೆ.
‘ಜಹೂರ್ ಮತ್ತು ಮುನ್ನಾ ಅವರು, ಟಿಕೆಟ್ ಖಾತ್ರಿಗಾಗಿ ಶಾಸಕ ಮತ್ತು ಅವರ ಸಹೋದರನ ಹಿಂದೆ ಓಡಾಡುತ್ತಿದ್ದಾರೆ. ಬಾಬು ಹುದ್ದಾರ ಅವರು ಕ್ಷೇತ್ರದ ಜನರ ಮೂಲಕ ತಮಗೆ ಅವಕಾಶ ನೀಡಬೇಕೆಂದು ಶಾಸಕರ ಮೇಲೆ ಒತ್ತಡ ತರುತ್ತಿದ್ದಾರೆ’ ಎಂದು ಮೂಲಗಳು ಖಚಿತಪಡಿಸಿವೆ.
ಗೊಡಚಿ ಕ್ಷೇತ್ರಕ್ಕೆ ಮೀಸಲಾತಿ ನಿಗದಿಯಾಗದ ಕಾರಣ, ಬಿಜೆಪಿಯವರು ಇತ್ತ ಗಮನಹರಿಸಿಲ್ಲ. ಆದರೆ, ಒಂದೇ ಗ್ರಾಮದ ಮೂವರು ಆಕಾಂಕ್ಷಿಗಳು, ಒಂದೇ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದಲೇ ಸ್ಪರ್ಧಿಸಲು ಪ್ರಚಾರ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಆದರೆ, ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೆ ಎಂಬುದರ ಮೇಲೆ ಚುನಾವಣೆ ಕಣ ರಂಗೇರಲಿದೆ.
ಅಧಿಕಾರ ಇಲ್ಲದಿದ್ದರೂ ನಾಲ್ಕು ವರ್ಷಗಳಿಂದ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತ ಬಂದಿದ್ದೇನೆ. ಪಕ್ಷಕ್ಕಾಗಿ ದುಡಿದಿದ್ದೇನೆ. ಈ ಬಾರಿ ನನಗೇ ಟಿಕೆಟ್ ಸಿಗುತ್ತದೆಂಬ ವಿಶ್ವಾಸವಿದೆ.-ಜಹೂರ್ ಹಾಜಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ
ತೊರಗಲ್ ಗ್ರಾಮ ಪಂಚಾಯಿತಿಯಲ್ಲಿ ನಾನು ಕೈಗೊಂಡ ಅಭಿವೃದ್ಧಿ ಕೆಲಸಗಳು ಜನರ ಬೆಂಬಲವು ನನಗೆ ಕಾಂಗ್ರೆಸ್ ಟಿಕೆಟ್ ಪಡೆಯಲು ಸಹಕಾರಿಯಾಗಲಿದೆ-ಬಾಬು ಹುದ್ದಾರ, ಮಾಜಿ ಅಧ್ಯಕ್ಷ ತೊರಗಲ್ ಗ್ರಾಮ ಪಂಚಾಯಿತಿ
ಕಳೆದ ಐದು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ. ಹಿರಿಯರು ಬೆಂಬಲಿಗರ ಆಶೀರ್ವಾದ ಇದೆ. ನನಗೇ ಟಿಕೆಟ್ ಸಿಗುತ್ತದೆ-ಮುನ್ನಾ ಖತೀಬ, ವ್ಯಾಪಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.