ಬೆಳಗಾವಿ: ‘ಆಧಾರ ರಹಿತವಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಬಗ್ಗೆ ಮಾಡುತ್ತಿರುವ ಆರೋಪದಿಂದ ದೇಶದ ಏಕಾಗ್ರತೆಗೆ ಧಕ್ಕೆ ಬಂದಿದೆ. ನಿಮ್ಮ ತಪ್ಪು ಗ್ರಹಿಕೆ ದೂರವಾಗಬೇಕಾದರೆ, ನೀವು ಎಂಟು ದಿನ ಆರ್‌ಎಸ್‌ಎಸ್ ಬರಬೇಕು’ ಎಂದು ಬಿಜೆಪಿ ವಕ್ತಾರ ಎಂ.ಬಿ.ಝಿರಲಿ ತಿರುಗೇಟು ನೀಡಿದರು.
ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾಂಸ್ಕೃತಿಕವಾಗಿ ಭಾರತ ನಿರ್ಮಾಣಕ್ಕೆ ಆರ್‌ಎಸ್‌ಎಸ್ ಅಪಾರ ಕೊಡುಗೆ ಕೊಟ್ಟಿದೆ. ಆದರೆ, ವಾಸ್ತವಾಂಶ ಅರಿಯದೆ ದೂರ ನಿಂತು ಅವರು ಆರೋಪಿಸುತ್ತಿದ್ದಾರೆ’ ಎಂದು ದೂರಿದರು.
‘ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿಗೆ ಬರೆದ ಸಂವಿಧಾನದ ಬಗ್ಗೆ ಪ್ರಸ್ತಾಪಿಸುತ್ತ, ಆರ್ಟಿಕಲ್ 19 ಉಲ್ಲಂಘಿಸಿದ್ದಾರೆ. ಸಂವಿಧಾನವು ಆರ್ಟಿಕಲ್ 19ರಡಿ ಸಂಘವನ್ನು ಕಟ್ಟಿಕೊಳ್ಳುವ ಸ್ವಾತಂತ್ರ್ಯ ನೀಡುತ್ತದೆ. ಮುಕ್ತವಾಗಿ ಸಭೆ ಸೇರುವ ಸ್ವಾತಂತ್ರ್ಯವನ್ನೂ ನೀಡುತ್ತದೆ. ಇದನ್ನು ಗಮನಿಸಿದರೆ ಪ್ರಿಯಾಂಕ್ ಖರ್ಗೆ ಅವರು, ಸಂವಿಧಾನಕ್ಕೆ ವಿರುದ್ಧ ಸಿ.ಎಂಗೆ ಪತ್ರ ಬರೆದಂತಾಗಿದೆ’ ಎಂದರು.
‘ಆರ್‌ಎಸ್‌ನಲ್ಲಿ ಜಾತಿ ಇಲ್ಲ, ಸ್ವಾರ್ಥ ಇಲ್ಲ. ಆದರೆ, ದೇಶದ ಏಕತೆ ಮತ್ತು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಆರ್‌ಎಸ್‌ಎಸ್‌ನಿಂದ ಜನರಿಗೆ ನಕಾರಾತ್ಮಕ ಆಲೋಚನೆ ತುಂಬಲಾಗುತ್ತಿದೆ ಎಂದು ತಿಳಿಸಿದ್ದಾರೆ. ಹಾಗಾದರೆ ಯಾವ ರೀತಿಯ ನಕಾರಾತ್ಮಕ ಆಲೋಚನೆ ತುಂಬಲಾಗಿದೆ ಎಂದು ಅವರು ಸಾಬೀತುಪಡಿಸಬೇಕು. ಇಲ್ಲದಿದ್ದರೆ ತಕ್ಷಣವೇ ಸಂಪುಟದಿಂದ ಅವರನ್ನು ವಜಾಗೊಳಿಸಬೇಕು’ ಎಂದು ಆಗ್ರಹಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಸಂಜಯ ಪಾಟೀಲ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.