ADVERTISEMENT

‘ಅಡಿಗರದ್ದು ಪ್ರೌಢ ಅನುಭವಗಳ ಕಾವ್ಯ’

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2017, 19:30 IST
Last Updated 11 ಅಕ್ಟೋಬರ್ 2017, 19:30 IST
ಪ್ರೊ.ಬಿ.ವಿ.ಕೆದಿಲಾಯ (ಎಡದಿಂದ ಮೂರನೆಯವರು) ಹಾಗೂ ವಿಜಯ ಕಾಲೇಜಿನ ಡೀನ್‌ ಪ್ರೊ.ಆರ್.ವಿ.ಪ್ರಭಾಕರ ಮಾತುಕತೆ ನಡೆಸಿದರು. ರಮೇಶ್ ವೈದ್ಯ, ಕವಿ ಗೋಪಾಲಕೃಷ್ಣ ಅಡಿಗ ಪ್ರತಿಷ್ಠಾನದ ನಿರ್ದೇಶಕ ಜಯರಾಮ ಅಡಿಗ ಇದ್ದಾರೆ –ಪ್ರಜಾವಾಣಿ ಚಿತ್ರ
ಪ್ರೊ.ಬಿ.ವಿ.ಕೆದಿಲಾಯ (ಎಡದಿಂದ ಮೂರನೆಯವರು) ಹಾಗೂ ವಿಜಯ ಕಾಲೇಜಿನ ಡೀನ್‌ ಪ್ರೊ.ಆರ್.ವಿ.ಪ್ರಭಾಕರ ಮಾತುಕತೆ ನಡೆಸಿದರು. ರಮೇಶ್ ವೈದ್ಯ, ಕವಿ ಗೋಪಾಲಕೃಷ್ಣ ಅಡಿಗ ಪ್ರತಿಷ್ಠಾನದ ನಿರ್ದೇಶಕ ಜಯರಾಮ ಅಡಿಗ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಯುಗ ಪ್ರವರ್ತಕ ಕವಿ ಎಂ.ಗೋಪಾಲಕೃಷ್ಣ ಅಡಿಗರದ್ದು ಪ್ರೌಢ ಅನುಭವಗಳ ಕಾವ್ಯ’ ಎಂದು ಲೇಖಕ ಪ್ರೊ. ಬಿ.ವಿ.ಕೆದಿಲಾಯ ಬಣ್ಣಿಸಿದರು.

ಜಯನಗರದ ವಿಜಯ ಕಾಲೇಜು ಹಾಗೂ ಮೊಗೇರಿಯ ಮೂಗೋಶ್ರೀ ವೇದಿಕೆಯ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ನವ್ಯಕವಿ ಗೋಪಾಲಕೃಷ್ಣ ಅಡಿಗ ಜನ್ಮಶತಾಬ್ದಿ ಆಚರಣೆ’ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಬದಲಾದ ಯುಗಕ್ಕೆ ತಕ್ಕಂತೆ ಲಯ ಮತ್ತು ಭಾಷೆಯನ್ನು ಬಳಸಬೇಕು. ಅಂತಹ ಪ್ರಜ್ಞೆ ಅಡಿಗರಲ್ಲಿ ಇತ್ತು. ಹೊಸ ವಸ್ತು, ಅಭಿವ್ಯಕ್ತಿ, ಶೈಲಿ ಅವರ ಕಾವ್ಯದಲ್ಲಿ ಅಡಗಿತ್ತು. ಈ ಕಾರಣಕ್ಕೆ ಅವರು ಬೇರೆಲ್ಲಾ ಕವಿಗಳಿಗಿಂತ ಭಿನ್ನವಾಗಿ ನಿಲ್ಲುತ್ತಾರೆ’ ಎಂದರು.

ADVERTISEMENT

‘ಸಾಹಿತ್ಯದಿಂದ ಪರಿಪೂರ್ಣತೆ ಸಿಗುತ್ತದೆ. ಕಲೆ, ಸಂಗೀತದ ಪ್ರಜ್ಞೆಯೂ ಮನುಷ್ಯನಿಗೆ ಮುಖ್ಯ. ಕವಿಯು ಕಾವ್ಯದ ಮೂಲಕ ಓದುಗರಿಗೆ ಆನಂದವನ್ನು ಮಾತ್ರ ನೀಡುವುದಿಲ್ಲ. ವೈಚಾರಿಕತೆಯ ಪ್ರಜ್ಞೆ ನಮ್ಮೊಳಗೆ ಮೂಡುವಂತೆ ಮಾಡುತ್ತಾನೆ’ ಎಂದು ಹೇಳಿದರು.

‘ಭಾಷೆಯ ಸೂಕ್ಷ್ಮ ಜ್ಞಾನ ಇಲ್ಲದೆ ಕಾವ್ಯದ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಅಡಿಗರ ಕಾವ್ಯವನ್ನು ಅರ್ಥ ಮಾಡಿಕೊಳ್ಳಲು ಅಂತಹ ಸೂಕ್ಷ್ಮತೆ ಓದುಗರಿಗೆ ಅಗತ್ಯ’ ಎಂದರು.

ಮೂಗೋಶ್ರೀ ವೇದಿಕೆಯ ಸಂಯೋಜಕ ರಮೇಶ್‌ ವೈದ್ಯ, ‘ಅಡಿಗರು ಹುಟ್ಟು ಮಾನವತಾವಾದಿ. ಜಾತಿ ಭೇದವನ್ನು ಬಾಲ್ಯದಲ್ಲೇ ಪ್ರಶ್ನಿಸಿದ್ದರು. ಅವರು ನಂಬಿದ್ದ ತತ್ವವನ್ನು ಎಂದೂ ಬಿಟ್ಟುಕೊಟ್ಟವರಲ್ಲ. ಪ್ರಭುತ್ವದ ವಿರುದ್ಧ ನಿರ್ಭೀತಿಯಿಂದ ಮಾತನಾಡುತ್ತಿದ್ದರು. ಸಮಾಜದ ಡೊಂಕುಗಳನ್ನು ತಿದ್ದಿದ ಮಹಾನ್‌ ಕವಿ’ ಎಂದು ಬಣ್ಣಿಸಿದರು.

ಅಡಿಗರ ಕುರಿತು ಏರ್ಪಡಿಸಿದ್ದ ಲೇಖನ ಸ್ಪರ್ಧೆಯಲ್ಲಿ ರಾಮನಗರದ ಪ್ರಥಮದರ್ಜೆ ಕಾಲೇಜಿನ ದ್ವಿತೀಯ ಬಿ.ಎ. ವಿದ್ಯಾರ್ಥಿನಿ ಎಸ್‌.ಮಂಜುಳಾ ಪ್ರಥಮ ಬಹುಮಾನ ಹಾಗೂ ಪ್ರಥಮ ಬಿ.ಎ. ವಿದ್ಯಾರ್ಥಿನಿ ಪುಣ್ಯ ದ್ವಿತೀಯ, ವಿಜಯನಗರದ ಆದಿಚುಂಚನಗಿರಿ ಕಾಲೇಜಿನ ದ್ವಿತೀಯ ಬಿ.ಕಾಂ. ವಿದ್ಯಾರ್ಥಿ ರಾಜೇಶ್ವರಿ ತೃತೀಯ ಬಹುಮಾನ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.