ADVERTISEMENT

ಅತೀಂದ್ರಿಯ ಶಕ್ತಿಗಾಗಿ ಪರರ ಮಗು ಬಲಿ ಕೊಡಲು ಯತ್ನಿಸಿದ ಭೂಪ

​ಪ್ರಜಾವಾಣಿ ವಾರ್ತೆ
Published 12 ಜುಲೈ 2012, 19:20 IST
Last Updated 12 ಜುಲೈ 2012, 19:20 IST

ಬೆಂಗಳೂರು: ಎರಡು ವರ್ಷದ ಗಂಡು ಮಗುವನ್ನು ಬಲಿ ಕೊಡಲು ಯತ್ನಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಕುಮಾರಸ್ವಾಮಿ ಲೇಔಟ್‌ನಲ್ಲಿ ಗುರುವಾರ ನಡೆದಿದೆ.

ಚಂದ್ರನಗರದ ಹನ್ನೊಂದನೇ ಅಡ್ಡರಸ್ತೆ ನಿವಾಸಿಗಳಾದ ವಿಶ್ವ ಮತ್ತು ನಾಗರತ್ನ ದಂಪತಿಯ ಗಂಡು ಮಗು ವಿನಯ್‌ನನ್ನು, ಅಲ್ಲಿನ ನಿವಾಸಿ ಸುಮತೀಂದ್ರ ರಾವ್ (54)  ಬಲಿ ಕೊಡಲು ಯತ್ನಿಸಿದ ಎಂದು ಮಗುವಿನ ಪೋಷಕರು ಆರೋಪಿಸಿದ್ದಾರೆ.

ಮೂಲತಃ ಚನ್ನಗಿರಿಯವನಾದ ಸುಮತೀಂದ್ರ ತನ್ನ ಮೊದಲ ಪತ್ನಿ ವಸಂತಲಕ್ಷ್ಮಿ ಅವರಿಂದ ದೂರವಾಗಿದ್ದ. ನಂತರ ತಿಪಟೂರಿನ ಜಯಲಕ್ಷ್ಮಿ ಎಂಬುವರನ್ನು ಎರಡನೇ ವಿವಾಹವಾಗಿ ಚಂದ್ರನಗರದಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದಾರೆ.

`ಬೆಳಿಗ್ಗೆ ಹತ್ತು ಗಂಟೆ ಸುಮಾರಿಗೆ ವಿನಯ್ ನನ್ನ ಜತೆ ಆಟವಾಡುತ್ತಿದ್ದ. ಆ ವೇಳೆ ನನ್ನ ಬಳಿ ಬಂದ ಸುಮತೀಂದ್ರ ಈ ಮಗುವನ್ನು ಬಲಿ ಕೊಟ್ಟರೆ ನನಗೆ ಅತೀಂದ್ರಿಯ ಶಕ್ತಿ ಬರುತ್ತದೆ ಎಂದು ಆಂಜನೇಯ ಸ್ವಾಮಿ ಹೇಳಿದ್ದಾನೆ.

ಇದರಿಂದ ನಿಮಗೂ ಒಳ್ಳೆಯದಾಗುತ್ತದೆ. ಮಗುವನ್ನು ಬಲಿ ಕೊಟ್ಟರೆ ನಿಮಗೆ ಎಷ್ಟು ಹಣ ಬೇಕಾದರೂ ಕೊಡುತ್ತೇನೆ ಎಂದು ಹೇಳಿದ. ಇದರಿಂದ ಆತಂಕಗೊಂಡು ಮಗುವನ್ನು ಎತ್ತಿಕೊಂಡೆ. ಆಗ ಮಗುವನ್ನು ನನ್ನಿಂದ ಕಿತ್ತುಕೊಂಡು ತನ್ನ ಮನೆಗೆ ಹೋದ ಆತ ಬಾಗಿಲು ಹಾಕಿಕೊಂಡ. ಕೆಲವೇ ಕ್ಷಣದಲ್ಲಿ ಮಗು ಜೋರಾಗಿ ಅಳತೊಡಗಿತು. ನಾನು ಕೂಗಿಕೊಂಡು ಸ್ಥಳೀಯರ ಸಹಾಯದಿಂದ ಬಾಗಿಲು ಹೊಡೆದು  ಮಗುವನ್ನು ರಕ್ಷಿಸಿದೆವು~ ಎಂದು ಮಗುವಿನ ಅಜ್ಜಿ ರಾಜಮ್ಮ ತಿಳಿಸಿದರು.

`ಮನೆಯೊಳಗೆ ಆಂಜನೇಯ ಸ್ವಾಮಿಯ ಭಾವಚಿತ್ರ ಇಟ್ಟುಕೊಂಡು, ಕುಂಕುಮ, ಹೂವು, ನಿಂಬೆಹಣ್ಣು ಸೇರಿದಂತೆ ಮಗುವನ್ನು ಬಲಿ ಕೊಡಲು ಸಿದ್ಧತೆ ಮಾಡಿಕೊಂಡಿದ್ದ. ಬಾಗಿಲು ಒಡೆದು ನೋಡಿದಾಗ ಕೆಂಪು ವಸ್ತ್ರದಿಂದ ಮಗುವಿನ ಕುತ್ತಿಗೆ ಬಿಗಿದಿದ್ದ~ ಎಂದು ರಾಜಮ್ಮ ಆರೋಪಿಸಿದರು.

`ಮೂರ‌್ನಾಲ್ಕು ವರ್ಷಗಳಿಂದ ಇದೇ ಬಡಾವಣೆಯಲ್ಲಿ ವಾಸವಾಗಿದ್ದಾನೆ. ಇಲ್ಲಿನ ಮಕ್ಕಳಿಗೆ ಪ್ರತಿದಿನ ತಿಂಡಿ ಕೊಡಿಸುತ್ತಿದ್ದ ಆತ ಮಕ್ಕಳೊಂದಿಗೆ ಆಟವಾಡುತ್ತಿದ್ದ. ಬೆಳಿಗ್ಗೆ ನಾನು ಕೆಲಸದ ನಿಮಿತ್ತ ಹೊರ ಹೋಗಿದ್ದೆ. ಕಾರು ಚಾಲಕರಾದ ಪತಿ ಕೂಡ ಕೆಲಸಕ್ಕೆ ಹೋಗಿದ್ದರು. ಮಾಹಿತಿ ಕೇಳಿ ಆಘಾತವಾಯಿತು. ನೆರೆಹೊರೆಯವರು ಯಾರೂ ಇರದಿದ್ದರೆ ಇಂದು ನಾನು ಮಗನನ್ನು ಕಳೆದುಕೊಳ್ಳಬೇಕಾಗುತ್ತಿತ್ತು~ ಎಂದು ನಾಗರತ್ನ ಹೇಳಿದರು.

`ನಾನು ಸ್ಥಳೀಯ ಕಾಲೇಜುವೊಂದರಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತೇನೆ. ಆರು ತಿಂಗಳ ಹಿಂದೆ ನನ್ನನ್ನು ವಿವಾಹವಾದ ಪತಿ ನಂತರ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಮದ್ಯವ್ಯಸನಿಯಾಗಿದ್ದ ಅವರು ಪ್ರತಿದಿನ ಕುಡಿದು ಬಂದು ಹಿಂಸೆ ನೀಡುತ್ತಿದ್ದರು. ಮೊದಲ ಪತ್ನಿಯನ್ನು ನೆನಪಿಸಿಕೊಂಡು ಕೊರಗುತ್ತಿದ್ದರು. ಕೆಲವೊಮ್ಮೆ ರಾತ್ರಿಯಿಡೀ ಬೆತ್ತಲೆಯಾಗಿ ಕುಳಿತುಕೊಂಡು ಶ್ರೀರಾಮ, ಆಂಜನೇಯ ಸ್ವಾಮಿ ದೇವರ ಭಾವಚಿತ್ರ ಇಟ್ಟುಕೊಂಡು ಏನೇನೊ ಮಂತ್ರ ಹೇಳುತ್ತಿದ್ದರು. ಇಂದು ಘಟನೆ ನಡೆದಾಗ ನಾನು ಕೆಲಸಕ್ಕೆ ಹೋಗಿದ್ದೆ. ಮನೆಗೆ ಬಂದಾಗಲೇ ಪ್ರಕರಣ ಗೊತ್ತಾಗಿದ್ದು~ ಎಂದು ಸುಮತೀಂದ್ರನ ಪತ್ನಿ ಜಯಲಕ್ಷ್ಮಿ `ಪ್ರಜಾವಾಣಿ~ಗೆ ತಿಳಿಸಿದರು.

 `ಸ್ಥಳೀಯರು ಚೆನ್ನಾಗಿ ಥಳಿಸಿರುವುದರಿಂದ ಆರೋಪಿ ತೀವ್ರ ಗಾಯಗೊಂಡಿದ್ದಾನೆ. ಆಸ್ಪತ್ರೆಗೆ ದಾಖಲಿಸಿ ಆತನಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಗುವನ್ನು ವೈದ್ಯಕೀಯ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಲಾಗಿದೆ. ಆತನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ~ ಎಂದು ಕುಮಾರಸ್ವಾಮಿ ಲೇಔಟ್ ಪೊಲೀಸರು ತಿಳಿಸಿದರು. ಇತ್ತೀಚೆಗೆ ಚಿಕ್ಕಜಾಲ ಸಮೀಪದ ಹುಣಸೇಮಾರನಹಳ್ಳಿಯಲ್ಲಿ ನಡೆದ ಮೂರು ವರ್ಷದ ಹೆಣ್ಣು ಮಗು ಹರ್ಷಿತಾಳನ್ನು ಕೊಲೆ ಪ್ರಕರಣವನ್ನು ನೆನೆಯಬಹುದು. ಅದು ಕೂಡ ವಾಮಾಚಾರಕ್ಕಾಗಿ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಮಾಜಿ ಸಿಎಂ ಕಾರು ಚಾಲಕ?
`ಆರೋಪಿ ವಿಚಾರಣೆ ವೇಳೆ ಗಂಟೆಗೊಂದು ಹೇಳಿಕೆ ನೀಡುತ್ತಿದ್ದಾನೆ. ತಾನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾರು ಚಾಲಕನಾಗಿದ್ದೆ ಎಂದು ಆತ ಹೇಳಿದ್ದಾನೆ. ಆತ ಮಾನಸಿಕ ಅಸ್ವಸ್ಥ ಎಂದು ಸ್ಥಳೀಯರು ಆರೋಪಿಸಿರುವುದರಿಂದ ಅವನ ಮಾತನ್ನು ನಂಬುವುದು ಕಷ್ಟ. ಹಾಗೆಂದು ಅದನ್ನು ತಳ್ಳಿ ಹಾಕಲು ಸಾಧ್ಯವಿಲ್ಲ. ಆತ ಮಾಜಿ ಸಿಎಂ ಕಾರು ಚಾಲಕನಾಗಿದ್ದನೊ ಇಲ್ಲವೊ ಎಂಬುದು ವಿಚಾರಣೆಯಿಂದ ತಿಳಿಯಲಿದೆ~ ಎಂದು ಪೊಲೀಸರು ತಿಳಿಸಿದರು. 
 

`ಆಯೋಗಕ್ಕೆ ಹೆಚ್ಚಿನ ಬಲ ಬೇಕು~
`ಮಕ್ಕಳನ್ನು ವಾಮಾಚಾರಕ್ಕಾಗಿ ಬಳಸಿಕೊಳ್ಳುವುದು ಹೇಯ ಕೃತ್ಯ. ಮಕ್ಕಳ ಅಸಹಾಯಕತೆಯನ್ನೇ ದುಷ್ಕರ್ಮಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ರಸ್ತೆಯಲ್ಲಿ ಮಕ್ಕಳು ನಿರ್ಭೀತಿಯಿಂದ ಓಡಾಡುವುದೇ ಕಷ್ಟ ಎಂಬಂಥ ಪರಿಸ್ಥಿತಿ ನಗರಗಳಲ್ಲಿ ನಿರ್ಮಾಣವಾಗುತ್ತಿದೆ. ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಮೊದಲು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಹೆಚ್ಚಿನ ಬಲ ನೀಡಬೇಕು~ ಎಂದು ಭಾರತ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯ `ಮಗು ಮತ್ತು ಕಾನೂನು ಕೇಂದ್ರ~ದ ಫೆಲೊ ವಿ.ಪಿ.ನಿರಂಜನಾರಾಧ್ಯ ಹೇಳಿದರು.
`ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಯಲು ಅನೇಕ ಕಾನೂನುಗಳಿದ್ದರೂ ಅವು ಸಮರ್ಪಕವಾಗಿ ಜಾರಿಗೆ ಬರುತ್ತಿಲ್ಲ. ರಾಜ್ಯದಲ್ಲಿ ಮಕ್ಕಳಿಗಾಗಿಯೇ ವಿಶೇಷ ಮಕ್ಕಳ ನೀತಿಯನ್ನು ಸರ್ಕಾರ ಜಾರಿಗೆ ತರಬೇಕು. ಆಯೋಗಕ್ಕೆ ಹೆಚ್ಚಿನ ಅಧಿಕಾರ ನೀಡುವ ಮೂಲಕ ಆಯೋಗದ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಬೇಕು. ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಆಯೋಗವೇ ನಿರ್ಧರಿಸುವಂತಾಗಬೇಕು~ ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.