ADVERTISEMENT

ಅದಾಲತ್ ರದ್ದು: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2013, 20:26 IST
Last Updated 5 ಜುಲೈ 2013, 20:26 IST

ಕೃಷ್ಣರಾಜಪುರ: ದೂರವಾಣಿ ನಗರ ಜಲಮಂಡಳಿಯ ಪೂರ್ವ-3ರ ಉಪವಿಭಾಗದಲ್ಲಿ ನಡೆಯಬೇಕಿದ್ದ ನೀರಿನ ಅದಾಲತ್ ಅನ್ನು ಕೊನೆಯ ಕ್ಷಣದಲ್ಲಿ ರದ್ದುಪಡಿಸಿದ್ದನ್ನು ವಿರೋಧಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಜಲಮಂಡಳಿಯ ಎದುರು ಈಚೆಗೆ ಪ್ರತಿಭಟನೆ ನಡೆಸಿದರು.

`ವಾರ್ಡ್ 26 ಸೇರಿದಂತೆ ಬಹುತೇಕ ಕಡೆ ಶೇ 50ರಷ್ಟು ಭಾಗಕ್ಕೂ ನೀರು ಪೂರೈಕೆ ಮಾಡಲು ಜಲಮಂಡಳಿಗೆ ಸಾಧ್ಯವಾಗಿಲ್ಲ. ಹಲವು ಕಡೆಗಳಲ್ಲಿ ನೀರು ಪೋಲಾಗುತ್ತಿದೆ. ಮೀಟರ್ ಇದ್ದವರಿಗೆ ಅರ್ಧ ಇಂಚು ಕೊಳವೆಯ ಮೂಲಕ ನೀರು ಪೂರೈಕೆಯಾಗುತ್ತಿದೆ. ಮೀಟರ್ ಇಲ್ಲದವರಿಗೆ ಮುಕ್ಕಾಲು ಇಂಚು ಕೊಳವೆಯ ಮುಖಾಂತರ ನೀರು ಒದಗಿಸಲಾಗುತ್ತಿದೆ. ಈ ಬಗ್ಗೆ ಅಹವಾಲುಗಳನ್ನು ಸ್ವೀಕರಿಸಲು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹಾಜರಾಗಿಲ್ಲ' ಎಂದು ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಆಂಜನಪ್ಪ ದೂರಿದರು.

ಕೆಲವು ಬಡಾವಣೆಗಳಲ್ಲಿ ನೀರು ಚರಂಡಿಗೆ ಹೋಗುತ್ತಿದೆ. ಆದರೆ, ನಮ್ಮ ಬಡಾವಣೆಗಳಿಗೆ ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿಲ್ಲ' ಎಂದು ವಿಜನಾಪುರ, ಕೆ.ಆರ್.ಪುರ ರೈಲು ನಿಲ್ದಾಣ, ಭವಾನಿ ಬಡಾವಣೆ, ಪಾಪಯ್ಯ ರೆಡ್ಡಿ ಬಡಾವಣೆ ಹಾಗೂ ಇತರ ಸಂಘಟನೆಗಳ ಪದಾಧಿಕಾರಿಗಳು ದೂರಿದರು.

ಎಇಇ ರಘುಕುಮಾರ್ ಪ್ರತಿಕ್ರಿಯಿಸಿ, `ಮುಖ್ಯ ಎಂಜಿನಿಯರ್‌ಗಳ ತುರ್ತು ಸಭೆಯಲ್ಲಿ ಭಾಗವಹಿಸಬೇಕಾಗಿದ್ದ ಹಿನ್ನೆಲೆಯಲ್ಲಿ ಅದಾಲತ್‌ನಲ್ಲಿ ಭಾಗಹಿಸಲು ಸಾಧ್ಯವಾಗಲಿಲ್ಲ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.