ADVERTISEMENT

ಅಧಿಕಾರಿಗೂ ವಂಚಿಸಿದ ‘ಎಂಎಲ್‌ಸಿ’!

₹ 2.40 ಕೋಟಿ ಪಡೆದು ಪರಾರಿಯಾಗಿದ್ದ ಆರೋಪಿ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2018, 20:11 IST
Last Updated 4 ಏಪ್ರಿಲ್ 2018, 20:11 IST
ಎಲ್‌.ಸೋಮಣ್ಣ ಅಲಿಯಾಸ್
ಎಲ್‌.ಸೋಮಣ್ಣ ಅಲಿಯಾಸ್   

ಬೆಂಗಳೂರು: ಸಾಮೂಹಿಕ ವಿವಾಹ ಏರ್ಪಡಿಸಿರುವ ನೆಪದಲ್ಲಿ ಬಟ್ಟೆ ವ್ಯಾಪಾರಿಯೊಬ್ಬರಿಂದ 187 ಚಿನ್ನದ ತಾಳಿಗಳನ್ನು ಪಡೆದು ವಂಚಿಸಿದ್ದ ಎಲ್‌.ಸೋಮಣ್ಣ ಅಲಿಯಾಸ್ ‘ಎಂಎಲ್‌ಸಿ’, ಬ್ಯಾಂಕ್ ಅಧಿಕಾರಿಯೊಬ್ಬರಿಗೂ ₹ 2.40 ಕೋಟಿ ವಂಚನೆ ಮಾಡಿದ್ದಾನೆ.

ಕರ್ನಾಟಕ ಬ್ಯಾಂಕ್‌ನ ನೃಪತುಂಗ ರಸ್ತೆ ಶಾಖೆಯ ವ್ಯವಸ್ಥಾಪಕ ದೊರೆಸ್ವಾಮಿ ಹಣ ಕಳೆದುಕೊಂಡವರು. ಅವರು ಮಾರ್ಚ್ 30ರಂದು ವೈಯಾಲಿಕಾವಲ್ ಠಾಣೆಗೆ ದೂರು ಕೊಟ್ಟಿದ್ದಾರೆ.

2017ರ ಸೆಪ್ಟಂಬರ್‌ನಲ್ಲಿ ಬ್ಯಾಂಕ್‌ಗೆ ಹೋಗಿ ದೊರೆಸ್ವಾಮಿ ಅವರನ್ನು ಭೇಟಿಯಾಗಿದ್ದ ಆರೋಪಿ, ತನ್ನನ್ನು ರಾಜಕೀಯ ಮುಖಂಡ ಹಾಗೂ ದೊಡ್ಡ ಫೈನಾನ್ಶಿಯರ್ ಎಂದು ಪರಿಚಯಿಸಿಕೊಂಡಿದ್ದ. ಅಲ್ಲದೆ, ತನ್ನ ಹೆಸರಿನಲ್ಲಿ ಹೊಸ ಖಾತೆ ತೆರೆದುಕೊಟ್ಟರೆ, ಹೆಚ್ಚಿನ ವಹಿವಾಟು ನಡೆಸುವುದಾಗಿ ಹೇಳಿದ್ದ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಅವರು ಖಾತೆ ತೆರೆದು ಕೊಟ್ಟ ಬಳಿಕ, ‘ನಾನು ಮೊಳಕಾಲ್ಮೂರು ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಪೂರ್ವಭಾವಿಯಾಗಿ ₹100 ಹಾಗೂ ₹200 ಮುಖಬೆಲೆಯ ನೋಟುಗಳು ಬೇಕು’ ಎಂದು ಸುಳ್ಳು ಹೇಳಿ, ₹20 ಲಕ್ಷದ ವಹಿವಾಟು ನಡೆಸಿದ್ದ. ಆ ನಂತರ ಪರಸ್ಪರರು ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದರು.

2017ರ ಡಿ.4ರಂದು ಪುನಃ ಬ್ಯಾಂಕ್‌ಗೆ ತೆರಳಿದ್ದ ಆರೋಪಿ, ‘ಊರಿನಲ್ಲಿರುವ ಗುತ್ತಿಗೆದಾರರಿಗೆ ತುರ್ತಾಗಿ ₹2.40 ಕೋಟಿ ಕೊಡಬೇಕಿದೆ. ನೀವು ಸಾಲದ ರೂಪದಲ್ಲಿ ಹಣ ಕೊಟ್ಟರೆ, ಆದಷ್ಟು ಬೇಗ ಮರಳಿಸುತ್ತೇನೆ’‍ ಎಂದಿದ್ದ.

ಆತನ ಮಾತನ್ನು ನಂಬಿದ ದೊರೆಸ್ವಾಮಿ, ಗ್ರಾಹಕರ ₹2.40 ಕೋಟಿ ನಗದನ್ನು ತೆಗೆದುಕೊಂಡು ವೈಯಾಲಿಕಾವಲ್ ಸಮೀಪದ ಶೆಲ್ ಪೆಟ್ರೋಲ್ ಬಂಕ್ ಬಳಿ ತೆರಳಿದ್ದರು. ಸ್ವಲ್ಪ ಸಮಯದಲ್ಲೇ ಸಹಚರನೊಂದಿಗೆ ಅಲ್ಲಿಗೆ ಬಂದಿದ್ದ ಸೋಮಣ್ಣ, ಹಣ ಪಡೆದು ಹೋಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮರುದಿನದಿಂದಲೇ ಆತನ ಮೊಬೈಲ್ ಸ್ವಿಚ್ಡ್‌ಆಫ್ ಆಯಿತು. ಇದರಿಂದ ಅನುಮಾನಗೊಂಡ ದೊರೆಸ್ವಾಮಿ, ಸ್ನೇಹಿತರೊಂದಿಗೆ ಸೇರಿ ಆತನಿಗಾಗಿ ಹುಡುಕಾಟ ನಡೆಸಿದ್ದರು. ಎಷ್ಟೇ ಪ್ರಯತ್ನಪಟ್ಟರೂ ಸೋಮಣ್ಣ ಸಂಪರ್ಕಕ್ಕೆ ಸಿಗದಿದ್ದಾಗ, ಮಾರ್ಚ್ 30ರಂದು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು.

ಸಾಣೆಗೊರವನಹಳ್ಳಿಯ ಬಟ್ಟೆ ವ್ಯಾಪಾರಿ ಸೂರಜ್ ಎಂಬುವರಿಂದ 2.5 ಕೆ.ಜಿ ಚಿನ್ನ ಪಡೆದು ವಂಚಿಸಿದ ಆರೋಪದಡಿ ಸೋಮಣ್ಣ ಹಾಗೂ ಆತನ ಸಹಚರ ಅಂಥೋನಿಯನ್ನು ಬಸವೇಶ್ವರ ನಗರ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಇದೀಗ ಈ ಪ್ರಕರಣವನ್ನೂ ಅದೇ ಠಾಣೆಗೆ ವರ್ಗಾಯಿಸುವುದಾಗಿ ವೈಯಾಲಿಕಾವಲ್ ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.