ADVERTISEMENT

ಅನುವಾದ ಸಾಹಿತ್ಯಕ್ಕೆ ಆದ್ಯತೆ ನೀಡಿ: ವೈದ್ಯ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2014, 20:28 IST
Last Updated 12 ಮಾರ್ಚ್ 2014, 20:28 IST

ಬೆಂಗಳೂರು: ‘ಕೇಂದ್ರ ಸಾಹಿತ್ಯ ಅಕಾಡೆಮಿಯು ಭಾಷೆ–ಭಾಷೆಗಳ ನಡುವೆ ಬಾಂಧವ್ಯ ಬೆಸೆಯಲು ಅನುವಾದ ಕೃತಿಗಳ ಪ್ರಕಟಣೆಗೆ ಹೆಚ್ಚಿನ ಗಮನ ನೀಡಬೇಕು’ ಎಂದು ಕಥೆಗಾರ ಶ್ರೀನಿವಾಸ ವೈದ್ಯ ಸಲಹೆ ನೀಡಿದರು.ಸಾಹಿತ್ಯ ಅಕಾಡೆಮಿಯ ಸಂಸ್ಥಾಪನಾ ದಿನದ ಅಂಗ­ವಾಗಿ ಬುಧವಾರ ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರ­ಮ­ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಭಾಷೆ– ಭಾಷೆಗಳ ಮಧ್ಯೆ ವೈರುಧ್ಯಗಳು ಹೆಚ್ಚಿದ್ದು, ಇದೇ ಕಾರಣಕ್ಕೆ ಜಗಳಕ್ಕೆ ನಿಲ್ಲುವಂತಹ ಪ್ರವೃತ್ತಿಯೂ ಬೆಳೆದಿದೆ. ಭಾಷಾಂತರ ಸಾಹಿತ್ಯದ ಮೂಲಕ ಅಂತಹ ಅಸಹನೆಯನ್ನು ಹೋಗಲಾಡಿಸಿ ದೇಶ ಕಟ್ಟುವ ಕೆಲಸದಲ್ಲಿ ಅಕಾಡೆಮಿ ತನ್ನ ಕಾಣಿಕೆ ಸಲ್ಲಿಸಬೇಕು’ ಎಂದು ಆಶಿಸಿದರು.

ಅನುವಾದಕ ಮಾಹೇರ್‌ ಮನ್ಸೂರ್‌, ‘ನಾನು ಮೊಟ್ಟಮೊದಲು ಅನುವಾದ ಮಾಡಿದ ಕೃತಿ ‘ಚೋಮನ ದುಡಿ’. ವಿದ್ಯಾರ್ಥಿಯಾಗಿದ್ದ ನನಗೆ ಅದನ್ನು ಉರ್ದು ಭಾಷೆಗೆ ಅನುವಾದ ಮಾಡಲು ಅವಕಾಶ ಮಾಡಿಕೊಡುವ ಮೂಲಕ ಶಿವರಾಮ ಕಾರಂತರು ನನ್ನನ್ನು ಪ್ರೋತ್ಸಾಹಿಸಿದರು’ ಎಂದು ಭಾವುಕರಾಗಿ ನೆನೆದರು.

ವಿಮರ್ಶಕ ಡಾ.ಎಚ್‌.ಎಸ್‌. ರಾಘವೇಂದ್ರ ರಾವ್‌, ‘ನಮ್ಮನ್ನು ನಾವು ಕನ್ನಡಕ್ಕೇ ಸಂಕುಚಿತಗೊಳಿಸುವ ಪ್ರವೃತ್ತಿ ಸಲ್ಲ. ಬೇರೆ ಭಾಷೆಗಳ ಸಾಹಿತ್ಯವನ್ನೂ ಪ್ರೀತಿಯಿಂದ ಓದಬೇಕು. ಅದರಿಂದ ನಮ್ಮ ಜ್ಞಾನದ ಹರವು ದೊಡ್ಡದಾಗುತ್ತದೆ’ ಎಂದು ಹೇಳಿದರು.

‘ಅನುವಾದಿತ ಕೃತಿಗಳು ಸುಲಭವಾಗಿ ಖರೀದಿಗೆ ಸಿಗುವಂತಹ ವ್ಯವಸ್ಥೆ ರೂಪಿಸಬೇಕು’ ಎಂದು ಕಥೆಗಾರ ಗೋಪಾಲಕೃಷ್ಣ ಪೈ ಸಲಹೆ ನೀಡಿದರು. ವಿಶೇಷ ಉಪನ್ಯಾಸ ನೀಡಬೇಕಿದ್ದ ಹಿರಿಯ ಸಾಹಿತಿ ಡಾ. ಯು.ಆರ್‌. ಅನಂತಮೂರ್ತಿ ಅನಾರೋಗ್ಯದ ಕಾರಣ ಬಾರದ್ದರಿಂದ ಈ ನಾಲ್ವರು ಲೇಖಕರು ಕಾರ್ಯಕ್ರಮ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.