ADVERTISEMENT

ಅಮೃತ್‌ ಯೋಜನೆಯಲ್ಲಿ ₹978 ಕೋಟಿ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 25 ಜೂನ್ 2016, 19:36 IST
Last Updated 25 ಜೂನ್ 2016, 19:36 IST

ಬೆಂಗಳೂರು: ಕೇಂದ್ರ ಸರ್ಕಾರದ ‘ಅಮೃತ್‌’ ಯೋಜನೆಯಡಿ ಜಲಮಂಡಳಿಗೆ 11 ಯೋಜನೆಗಳು ಮಂಜೂರಾಗಿವೆ. ಈ ಎಲ್ಲ ಯೋಜನೆಗಳ ಒಟ್ಟು ಮೊತ್ತ ₹978.40 ಕೋಟಿ. ಅದರ ಶೇಕಡಾ 80ರಷ್ಟನ್ನು ಯೋಜನಾ ವೆಚ್ಚವೆಂದು ಪರಿಗಣಿಸಲಾಗಿದೆ. ಅಂದರೆ ₹782.72 ಕೋಟಿ. ಈ ಮೊತ್ತದ ಶೇಕಡಾ 33 ಅಂದರೆ ₹258.30 ಕೋಟಿಯನ್ನು ಕೇಂದ್ರ ಸರ್ಕಾರವು ಭರಿಸಲಿದೆ. ಶೇಕಡಾ 20 ಅಂದರೆ ₹164.07 ಕೋಟಿಯನ್ನು ರಾಜ್ಯ ಸರ್ಕಾರವು ಭರಿಸುತ್ತದೆ. ಉಳಿದ ಶೇಕಡಾ 47 ಅಂದರೆ ₹367.88 ಕೋಟಿಯನ್ನು  ರೂಪಾಯಿಗಳನ್ನು ಜಲಮಂಡಳಿ ಭರಿಸಬೇಕಿದೆ.

ಕೈಗೆತ್ತಿಕೊಳ್ಳುವ ಕಾಮಗಾರಿಗಳು:
* 24 ಕೊಳೆಗೇರಿಗಳಲ್ಲಿ ನೀರಿನ ಸರಬರಾಜು ಮತ್ತು ಮೀಟರ್ ಅಳವಡಿಕೆ. ಇದರ ವೆಚ್ಚ ₹16.30 ಕೋಟಿ.

* ನಗರದ ಪಶ್ಚಿಮ ಭಾಗದಿಂದ ನೀರಿನ ಸರ್ಮಪಕ ವಿತರಣೆಗಾಗಿ ಪೂರ್ವ ಭಾಗಕ್ಕೆ ವರ್ಗಾಯಿಸುವ ಸಲುವಾಗಿ ಪೈಪ್ ಲೈನ್‌ ಅಳವಡಿಸುವ ಯೋಜನೆಯ ವೆಚ್ಚ ₹56.10 ಕೋಟಿ. ನಗರದ ಜಿಕೆವಿಕೆಯಿಂದ ಎಚ್‌ಬಿಆರ್‌ಗೆ ಕೊಳವೆ ಮಾರ್ಗವನ್ನು ಅಳವಡಿಸಲಾಗುತ್ತದೆ.

* ಬಿಬಿಎಂಪಿಗೆ ಸೇರ್ಪಡೆಯಾದ ರಾಜರಾಜೇಶ್ವರಿ ನಗರ ಮತ್ತು ಕೆಂಗೇರಿಯ ಪ್ರದೇಶಗಳಲ್ಲಿ ಒಳಚರಂಡಿ. ಇದರ ವೆಚ್ಚ ₹55 ಕೋಟಿ.

* ರಂಗನಾಥ ಕಾಲೊನಿಯಿಂದ ವೃಷಭಾವತಿ ಕಣಿವೆಯ ತ್ಯಾಜ್ಯ ನೀರಿನ ಶುದ್ಧೀಕರಣ ಘಟಕದವರೆಗೆ 2600 ಮಿ.ಮಿ ವ್ಯಾಸದ ಒಳಚರಂಡಿ ಕೊಳವೆ ಮಾರ್ಗದ ಅಳವಡಿಕೆ. ಇದರ ವೆಚ್ಚ ₹58 ಕೋಟಿ.

* ಪರಿಸರ ಕ್ರಿಯಾ ಯೋಜನೆಯ ಸಿ ಭಾಗವಾಗಿ ನಗರದ ಹೃದಯ ಭಾಗದ ಒಳಚರಂಡಿ ಮಾರ್ಗಗಳ ಬದಲು. ಈ ಯೋಜನೆಯಲ್ಲಿ ಹಳೆಯದಾದ 74 ಕಿ.ಮೀ. ಉದ್ದದ ಒಳಚರಂಡಿ ಕೊಳವೆ ಮಾರ್ಗದ ಪುನರುಜ್ಜೀವನ ಹಾಗೂ ಬದಲಾವಣೆ. ಇದರ ವೆಚ್ಚ ₹475 ಕೋಟಿ.

* ಬೆಳ್ಳಂದೂರು ಕೆರೆಗೆ ಕೊಳಚೆ ನೀರು ಸೇರದಂತೆ ತಡೆಯಲು ನಾಲ್ಕು ಕೆರೆಗಳ ಬಳಿ ತ್ಯಾಜ್ಯ ನೀರಿನ ಶುದ್ಧೀಕರಣ ಘಟಕಗಳ ಸ್ಥಾಪನೆ. ಅವುಗಳ ಪೈಕಿ ಹುಳಿಮಾವಿನ ಬಳಿ ಪ್ರತಿದಿನ 10 ಕೋಟಿ ಲೀಟರ್ ಸಾಮರ್ಥ್ಯದ ತ್ಯಾಜ್ಯ ನೀರಿನ ಶುದ್ಧೀಕರಣ ಘಟಕ ಆರಂಭ. ಇದರ ವೆಚ್ಚ ₹30 ಕೋಟಿ. ಬೇಗೂರು ಬಳಿ ದಿನಂಪ್ರತಿ 5 ಕೋಟಿ ಲೀಟರ್

ಸಾಮರ್ಥ್ಯದ ತ್ಯಾಜ್ಯ ನೀರಿನ ಶುದ್ಧೀಕರಣ ಘಟಕ ಸ್ಥಾಪನೆ. ಇದಕ್ಕೆ ತಗುಲುವ ವೆಚ್ಚ ₹15 ಕೋಟಿ. ಸಾರಕ್ಕಿ ಬಳಿ ₹15 ಕೋಟಿ ವೆಚ್ಚದಲ್ಲಿ ದಿನಂಪ್ರತಿ 5 ಕೋಟಿ ಲೀಟರ್ ಸಾಮರ್ಥ್ಯದ ತ್ಯಾಜ್ಯ ನೀರಿನ ಶುದ್ಧೀಕರಣ ಘಟಕ ಸ್ಥಾಪನೆ.

* ಕೆ.ಆರ್.ಪುರದಲ್ಲಿ ಕೆಎಂಆರ್‌ಪಿ ಯೋಜನೆಯಡಿ  ಒಳಚರಂಡಿ ವ್ಯವಸ್ಥೆಯ ಕಾಮಗಾರಿಗಳನ್ನು ಸಂಪೂರ್ಣಗೊಳಿಸಿದ ನಂತರ ಹಾಲಿ ಇರುವ ತ್ಯಾಜ್ಯ ನೀರಿನ ಶುದ್ಧೀಕರಣ ಘಟಕಕ್ಕೆ ತ್ಯಾಜ್ಯ ನೀರಿನ ಹರಿವು ಹೆಚ್ಚಾಗಿದೆ. ಅದಕ್ಕಾಗಿ ಕೆ.ಆರ್. ಪುರದ ಬಳಿ 20 ಕೋಟಿ ಲೀಟರ್ ಸಾಮರ್ಥ್ಯದ ತ್ಯಾಜ್ಯ ನೀರಿನ ಶುದ್ಧೀಕರಣ ಘಟಕ ಆರಂಭ. ಇದಕ್ಕೆ 33 ಕೋಟಿ  ವೆಚ್ಚ.

* ಕೋರಮಂಗಲ ಕಣಿವೆಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯ ನೀರನ್ನು ಕೋರಮಂಗಲ ಮತ್ತು ಚಲ್ಲಘಟ್ಟ ಕಣಿವೆ ತ್ಯಾಜ್ಯ ನೀರಿನ ಶುದ್ಧೀಕರಣ ಘಟಕಕ್ಕೆ ಪಂಪ್ ಮಾಡಬೇಕಾಗಿರುತ್ತದೆ. ಅದಕ್ಕಾಗಿ ಕ್ರೀಡಾ ಕಾಂಪ್ಲೆಕ್ಸ್‌ ಬಳಿ ಪಂಪ್ ಹೌಸ್ ನಿರ್ಮಾಣ ಮತ್ತು ಕೊಳವೆ ಮಾರ್ಗ ಅಳವಡಿಕೆ. ₹120 ಕೋಟಿ ಖರ್ಚು.

* ಅಗರ ಬಳಿ ದಿನಂಪ್ರತಿ 3.5 ಕೋಟಿ ಲೀಟರ್ ಸಾಮರ್ಥ್ಯದ ತ್ಯಾಜ್ಯ ನೀರಿನ ಶುದ್ಧೀಕರಣ ಘಟಕ ಆರಂಭ. ಇದಕ್ಕೆ ತಗುಲುವ ವೆಚ್ಚ ₹105 ಕೋಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.