ADVERTISEMENT

ಅರಣ್ಯ ಹಕ್ಕು: ಅಧಿವೇಶನದ ನಂತರ ಸಚಿವರು, ಅಧಿಕಾರಿಗಳೊಂದಿಗೆ ಸಭೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2012, 18:30 IST
Last Updated 2 ಆಗಸ್ಟ್ 2012, 18:30 IST

ಬೆಂಗಳೂರು: ಅರಣ್ಯ ಪ್ರದೇಶದಲ್ಲಿ ವಾಸಿಸುವ ಬುಡಕಟ್ಟು ಹಾಗೂ ಇತರ ಜನಸಮುದಾಯಕ್ಕೆ ಈಗಿರುವ ಕಾನೂನಿನ ಚೌಕಟ್ಟಿನಲ್ಲಿ ಹೆಚ್ಚಿನ ಅನುಕೂಲ ಕಲ್ಪಿಸಲು ಕಂದಾಯ, ಸಮಾಜ ಕಲ್ಯಾಣ ಮತ್ತು ಅರಣ್ಯ ಇಲಾಖೆಯ ಸಚಿವರು, ಅಧಿಕಾರಿಗಳ ಸಭೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನ ಪರಿಷತ್ತಿನ ಸಭಾನಾಯಕ ವಿ. ಸೋಮಣ್ಣ ತಿಳಿಸಿದರು.

ಅರಣ್ಯ ಹಕ್ಕು ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದು ವರ್ಷ ಕಳೆದಿದೆ. ಆದರೆ, ಅರಣ್ಯದ ಬಡ ಒತ್ತುವರಿದಾರರಿಗೆ ಭೂಮಿ ಮಂಜೂರು ಮಾಡಲು ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ. ಈ ಕುರಿತು ಸರ್ಕಾರ ಉತ್ತರ ನೀಡಬೇಕು ಎಂದು ಕಾಂಗ್ರೆಸ್‌ನ ಮೋಟಮ್ಮ ಅವರು ನಿಯಮ 330ರ ಅಡಿ ಪ್ರಸ್ತಾಪಿಸಿದ ವಿಷಯಕ್ಕೆ ಸಮಾಜ ಕಲ್ಯಾಣ ಸಚಿವ ಎ. ನಾರಾಯಣಸ್ವಾಮಿ ಪರವಾಗಿ ಸೋಮಣ್ಣ ಉತ್ತರಿಸಿದರು.

ಇದಕ್ಕೂ ಮೊದಲು ನಡೆದ ಚರ್ಚೆಯಲ್ಲಿ ಮಾತನಾಡಿದ ಬಿಜೆಪಿಯ ಆರ್.ಕೆ. ಸಿದ್ದರಾಮಣ್ಣ, `ಅರಣ್ಯ ಹಕ್ಕು ಪಡೆದುಕೊಳ್ಳಲು ಒತ್ತುವರಿದಾರರು ಮೂರು ತಲೆಮಾರಿನಿಂದ (75 ವರ್ಷ) ಅದೇ ಜಾಗದಲ್ಲಿ ವಾಸಿಸುತ್ತಿರಬೇಕು. ಮೂರು ತಲೆಮಾರಿನಿಂದ ಅಲ್ಲೇ ವಾಸಿಸುತ್ತಿದ್ದೇವೆ ಎಂದು ಸಾಬೀತು ಮಾಡಲು ಅರಣ್ಯ ಹಕ್ಕು ಕೋರುವವರು ದಾಖಲೆ ನೀಡಬೇಕು. ದಾಖಲೆ ನೀಡಲು ಸಾಧ್ಯವಾಗದ ಕಾರಣ, ಅರಣ್ಯ ಹಕ್ಕು ಕೋರಿ ಬರುವ ಹೆಚ್ಚಿನ ಅರ್ಜಿಗಳು ತಿರಸ್ಕೃತವಾಗುತ್ತಿವೆ~ ಎಂದು ವಿವರಿಸಿದರು.

ಮೂರು ತಲೆಮಾರಿನಿಂದ ಅದೇ ಸ್ಥಳದಲ್ಲಿ ವಾಸಿಸುತ್ತಿರುವ ಕುರಿತು ಸೂಕ್ತ ದಾಖಲೆ ಒದಗಿಸುವುದು ಬಡಜನರಿಗೆ ಕಷ್ಟದ ಕೆಲಸ. ಕಾಯ್ದೆಯಲ್ಲಿರುವ ಈ ಅಂಶಕ್ಕೆ ತಿದ್ದುಪಡಿ ತರಬೇಕು. ಕೇಂದ್ರ ಸರ್ಕಾರ ಜಾರಿಗೆ ತಂದ ಕಾಯ್ದೆ ಇದಾಗಿರುವ ಕಾರಣ, ಕೇಂದ್ರಕ್ಕೆ ರಾಜ್ಯ ಸರ್ಕಾರ ಪತ್ರ ಬರೆಯಬೇಕು. ಈ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳದಿದ್ದರೆ ನಕ್ಸಲ್ ಪಿಡುಗೂ ತೀವ್ರವಾಗಬಹುದು ಎಂದು ಸಿದ್ದರಾಮಣ್ಣ ಎಚ್ಚರಿಸಿದರು.

ಇದಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಡಿ.ಎನ್. ಜೀವರಾಜ್ ಕೂಡ ದನಿಗೂಡಿಸಿದರು.
ಕಾಯ್ದೆಗೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ನಿಯೋಗ ಕೊಂಡೊಯ್ಯಲಾಗುವುದು ಎಂದು ಸೋಮಣ್ಣ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.