ADVERTISEMENT

ಅರ್ಕಾವತಿ ನದಿ ಪುನಶ್ಚೇತನ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2011, 19:30 IST
Last Updated 27 ಅಕ್ಟೋಬರ್ 2011, 19:30 IST

ಯಲಹಂಕ:  ಅರ್ಕಾವತಿ ನದಿ ಪುನಶ್ಚೇತನ ಕಾಮಗಾರಿಗೆ 22.45 ಕೋಟಿ ಅನುದಾನ ಮಂಜೂರಾತಿಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಹೇಳಿದರು.

ಬಿಬಿಎಂಪಿ ಅನುದಾನದಡಿಯಲ್ಲಿ ಕೆಂಪೇಗೌಡ ವಾರ್ಡ್ ವ್ಯಾಪ್ತಿಯಲ್ಲಿ 2.50 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸುಗ್ಗಪ್ಪ ಬಡಾವಣೆಯಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಪ್ರಾರಂಭಿಕವಾಗಿ 22.45 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿರುವ ಸರ್ಕಾರ, ಮುಂದೆಯೂ ಕಾಮಗಾರಿಗೆ ಅಗತ್ಯವಿರುವ ಅನುದಾನ ಮಂಜೂರು ಮಾಡಲು ಸಿದ್ಧವಿದೆ ಎಂದು ತಿಳಿಸಿದರು.

ಯಲಹಂಕದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದರೂ ವಿಶೇಷವಾಗಿ ಒಳಚರಂಡಿ ಹಾಗೂ ಕುಡಿಯುವ ನೀರಿನ ಸಮಸ್ಯೆಯಿದೆ. ಈಗಾಗಲೇ ಒಳಚರಂಡಿ ನಿರ್ಮಾಣ ಕಾಮಗಾರಿಯನ್ನು 38 ಕೋಟಿ ರೂಪಾಯಿ ವೆಚ್ಚದಲ್ಲಿ ಆರಂಭಿಸಲಾಗಿದೆ. ಕಾವೇರಿ ನೀರಿನ ಪೂರೈಕೆಗಾಗಿ ನಾಗರಿಕರು ಸರ್ಕಾರಕ್ಕೆ ಮೀಟರ್ ದರವನ್ನು ಪಾವತಿಸಿದರೆ ಕಾವೇರಿ ಹಾಗೂ ಕೊಳವೆಬಾವಿ ನೀರನ್ನು ಪೂರೈಸಲು ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಬಿಬಿಎಂಪಿ ಸದಸ್ಯ ವೈ.ಎನ್.ಅಶ್ವಥ್, ಜೆಡಿ(ಎಸ್) ಮುಖಂಡ ದೇವರಾಜಪ್ಪ, ಸಿಂಗನಾಯಕನಹಳ್ಳಿ ಆರ್‌ಎಸ್‌ಎಸ್‌ಎನ್ ನಿರ್ದೇಶಕ ಮೂರ್ತಿ ಕೂರ್ಲಪ್ಪ, ಬಿಬಿಎಂಪಿ ಯಲಹಂಕ ಉಪವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರಂಗಯ್ಯ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸತೀಶ್ ಮೊದಲಾದವರು             ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.