ADVERTISEMENT

ಅವ್ಯವಹಾರ: ಅರಣ್ಯ ಸಂರಕ್ಷಣಾಧಿಕಾರಿ ಅಮಾನತು

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 20:00 IST
Last Updated 19 ಫೆಬ್ರುವರಿ 2011, 20:00 IST

ಬೆಂಗಳೂರು: ಸಸಿ ನೆಡುವಿಕೆ ಹಾಗೂ ಅವುಗಳ ನಿರ್ವಹಣೆಯಲ್ಲಿ ಸಾಕಷ್ಟು ಅವ್ಯವಹಾರ ನಡೆಸಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ವಲಯ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಕೆ. ಮರಿಸ್ವಾಮಿ ಅವರನ್ನು ಸೇವೆಯಿಂದ ಅಮಾನತುಪಡಿಸಿ ಬಿಬಿಎಂಪಿ ಆಯುಕ್ತ ಸಿದ್ದಯ್ಯ ಆದೇಶ ಹೊರಡಿಸಿದ್ದಾರೆ.

ಅರಣ್ಯ ಇಲಾಖೆಯಿಂದ ಎರವಲು ಸೇವೆಯ ಮೇಲೆ ಪಾಲಿಕೆಗೆ ನಿಯೋಜನೆಗೊಂಡಿದ್ದ ಮರಿಸ್ವಾಮಿ ಅವರು ಮಹದೇವಪುರ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.2010-11ನೇ ಸಾಲಿನಲ್ಲಿ ಮಹದೇವಪುರ ವಲಯದಲ್ಲಿ 21,100 ಸಸಿಗಳನ್ನು 36 ಸ್ಥಳಗಳಲ್ಲಿ ನೆಟ್ಟಿರುವ ಕುರಿತು ಅವರು ಸಲ್ಲಿಸಿದ ಕಡತಗಳಲ್ಲಿ ಸಾಕಷ್ಟು ಅಕ್ರಮ ನಡೆಸಿರುವುದು ಪತ್ತೆಯಾಗಿದೆ.

ಒಂದು ಸಸಿ ನೆಡಲು 380 ರೂಪಾಯಿ ವೆಚ್ಚ ಮಾಡಿರುವುದಾಗಿ ಮಾಹಿತಿ ನೀಡಲಾಗಿದೆ. ಇದಲ್ಲದೇ ಹಲವು ಅಂದಾಜು ಪಟ್ಟಿಗಳಲ್ಲಿ ಒಂದು ಸಸಿ ನೆಡಲು 450 ರೂಪಾಯಿ ದರ ನಿಗದಿಪಡಿಸಿರುವುದು ಪತ್ತೆಯಾಗಿದೆ. ಸಸಿ ನೆಡಲು ನಿರ್ದಿಷ್ಟ ಅಂತರ ಇಲ್ಲವೇ ಮಾನದಂಡ ಪರಿಗಣಿಸಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ನೆಟ್ಟ ಸಸಿಗಳ ಮಾಹಿತಿಯನ್ನು ದಾಖಲೆ ಪುಸ್ತಕದಲ್ಲಿ ನಮೂದಿಸಿಲ್ಲ. ಒಂದು ನಿರ್ದಿಷ್ಟ ಪ್ರದೇಶದಲ್ಲಿ ನೆಡಲಾದ ಸಸಿಗಳ ವಿವರ ಕೂಡ ಇಲ್ಲ. ಹಲವು ಅಂದಾಜು ಪಟ್ಟಿಗಳಲ್ಲಿರುವ ಕಾಮಗಾರಿಗಳಿಗೂ, ಕಾರ್ಯಾದೇಶ ನೀಡಿರುವ/ ಕರಾರು ಪತ್ರಗಳಲ್ಲಿನ ಕಾಮಗಾರಿಗಳ ಹೆಸರು, ಸ್ಥಳಗಳಲ್ಲಿ ವ್ಯತ್ಯಾಸಗಳು ಕಂಡುಬಂದಿವೆ.ಸರ್ಕಾರಿ ಸಂಸ್ಥೆಗಳಾಗಲಿ ಅಥವಾ ಪಾಲಿಕೆಯಲ್ಲಾಗಲಿ ನೋಂದಣಿಯಾಗದ ಗುತ್ತಿಗೆದಾರರಿಗೆ ಕಾಮಗಾರಿ ನೀಡಿರುವುದು ಪತ್ತೆಯಾಗಿದೆ.ಅಂದಾಜು ಪಟ್ಟಿ ಸಿದ್ಧಪಡಿಸಿ ಟೆಂಡರ್ ಕರೆಯದೇ ನೇರವಾಗಿ ಗುತ್ತಿಗೆ ನೀಡಿರುವುದು ಬಯಲಾಗಿದೆ. ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿರುವ ಆಯುಕ್ತರು, ಮರಿಸ್ವಾಮಿ ಅವರನ್ನು ಸೇವೆಯಿಂದ ಅಮಾನತುಪಡಿಸಿ ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.