ADVERTISEMENT

ಅಸ್ಸಾಂನ ಹತ್ತು ಬಾಲಕಿಯರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 20:09 IST
Last Updated 20 ಜುಲೈ 2013, 20:09 IST

ಬೆಂಗಳೂರು: ಸಿಐಡಿ ಮಾನವ ಸಾಗಣೆ ತಡೆ ಘಟಕ, ಬಚ್ಪನ್ ಬಚಾವೊ ಆಂದೋಲನ ಹಾಗೂ ಕೆಂಗೇರಿ ಪೊಲೀಸರು ಶನಿವಾರ ಜಂಟಿ ಕಾರ್ಯಾಚರಣೆ ನಡೆಸಿ ಪ್ರಭಾತ್ ಸರ್ಕಸ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಹತ್ತು ಬಾಲಕಿಯರನ್ನು ರಕ್ಷಿಸಿದ್ದಾರೆ.

ಈ ಸಂಬಂಧ ಸರ್ಕಸ್ ಕಂಪೆನಿ ಮಾಲೀಕ ಸಾಯಿಬಾಬಾ, ಆತನ ಪತ್ನಿ ಉಮಾ, ವ್ಯವಸ್ಥಾಪಕ ಬಸವರಾಜ್, ಮಕ್ಕಳನ್ನು ಕೆಲಸಕ್ಕೆ ಸೇರಿಸಿದ್ದ ಬೀರಾಸಿಂಗ್ ಹಾಗೂ ಜಯಾ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪೈಕಿ ಬಸವರಾಜ್ ಮತ್ತು ಜಯಾ ಅವರನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆ ಕಾರ್ಯ ಪ್ರಗತಿಯಲ್ಲಿದೆ. ಎಂದು ಕೆಂಗೇರಿ ಪೊಲೀಸರು ಹೇಳಿದ್ದಾರೆ.

`ಕೆಂಗೇರಿ ಬಸ್ ನಿಲ್ದಾಣ ಸಮೀಪದ ಪ್ರಭಾತ್ ಸರ್ಕಸ್ ಕಂಪೆನಿಯಲ್ಲಿ ಕಾನೂನು ಬಾಹಿರವಾಗಿ ಬಾಲಕಿಯರನ್ನು ದುಡಿಸಿಕೊಳ್ಳಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಬಂತು.ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಅಧಿಕಾರಿಗಳೊಂದಿಗೆ ಸರ್ಕಸ್ ಕಂಪೆನಿ ಮೇಲೆ ದಾಳಿ ನಡೆಸಿದಾಗ 10 ಬಾಲಕಿಯರು ಪತ್ತೆಯಾದರು.

ಅವರನ್ನು ರಕ್ಷಿಸಿದ ಬಳಿಕ ವೈದ್ಯಕೀಯ ತಪಾಸಣೆಗೊಳಪಡಿಸಿ, ಸಮಾಲೋಚನೆಗಾಗಿ ಅವರನ್ನು ಮಕ್ಕಳ ಕಲ್ಯಾಣ ಸಮಿತಿಗೆ (ಸಿಡಬ್ಲ್ಯುಸಿ) ಕಳುಹಿಸಲಾಗಿದೆ' ಎಂದು ಬಚ್ಪನ್ ಬಚಾವೊ ಸಮಿತಿ ಸದಸ್ಯೆ ವಾಣಿ ಕಂಟಿಲ್ ಹೇಳಿದರು.

`ಸರ್ಕಸ್ ಕಂಪೆನಿ ಮಾಲೀಕರು, ತಲಾ ರೂ3 ಸಾವಿರ ರೂಪಾಯಿ ವೇತನ ನೀಡುವುದಾಗಿ ಮಕ್ಕಳನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದರು. ಬೆಳಿಗ್ಗೆ 6ರಿಂದ ತಡರಾತ್ರಿವರೆಗೂ ಕಠಿಣ ಸನ್ನಿವೇಶಗಳಲ್ಲಿ ಬಾಲಕಿಯರು ದುಡಿಯುತ್ತಿದ್ದರು. ಸಮಾಲೋಚನೆ ಮುಗಿದ ನಂತರ ಮಕ್ಕಳನ್ನು ಪೋಷಕರಿಗೆ ಒಪ್ಪಿಸಲಾಗುವುದು' ಎಂದು ಅವರು ತಿಳಿಸಿದರು.

ಘಟನೆ ಸಂಬಂಧ ಜೀತಕ್ಕಾಗಿ ವ್ಯಕ್ತಿಯನ್ನು ಖರೀದಿಸುವುದು (ಐಪಿಸಿ 370), ಕಾನೂನು ಬಾಹಿರವಾಗಿ ದುಡಿಸಿಕೊಳ್ಳುವುದು (ಐಪಿಸಿ 374) ಹಾಗೂ ಬಾಲ ನ್ಯಾಯ ಕಾಯ್ದೆಯಡಿ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.