ADVERTISEMENT

ಆನೆ ದಾಳಿ: ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 1 ಜನವರಿ 2012, 19:30 IST
Last Updated 1 ಜನವರಿ 2012, 19:30 IST

ಕನಕಪುರ: ತಾಲ್ಲೂಕಿನ ತೊಪ್ಪಗನಹಳ್ಳಿ, ಚಂಪಾಲೆಗೌಡನ ದೊಡ್ಡಿ ಗ್ರಾಮದ ಹೊಲಗಳಿಗೆ ಕಾಡಾನೆಗಳು ನುಗ್ಗಿ ಬೆಳೆಯನ್ನೆಲ್ಲಾ ನಾಶ ಮಾಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

ಆನೆಗಳು ಹಿಂಡು ಬನ್ನೇರುಘಟ್ಟ-ಬಿಳಿಕಲ್ಲುಬೆಟ್ಟ ಅರಣ್ಯ ಪ್ರದೇಶ ದಾಟಿ ತೊಪ್ಪಗನಹಳ್ಳಿ ಗ್ರಾಮದ ಸುತ್ತಮುತ್ತಲ ಜಮೀನಿಗೆ ನುಗ್ಗಿವೆ. ಗದ್ದೆಯಲ್ಲಿ ಒಕ್ಕಣೆ ಮಾಡಿ ಮೆದೆ ಹಾಕಿದ್ದ  ರಾಗಿ, ಜೋಳವನ್ನು ಸಂಪೂರ್ಣ ನಾಶಗೊಳಿಸಿವೆ. ಭಾನುವಾರ ಮುಂಜಾನೆ ಹೊಲಗಳ ಕಡೆ ಹೋದ ರೈತರಿಗೆ ಮೆದೆ ಹುಲ್ಲು ಚೆಲ್ಲಾಡಿರುವುದನ್ನು ಕಂಡು ಇದು ಆನೆಗಳದ್ದೇ ಕೆಲಸ ಎಂದು ತೀರ್ಮಾನಿಸಿದ್ದಾರೆ. ನಂತರ ಅರಣ್ಯ ಇಲಾಖೆಯವರಿಗೆ ವಿಷಯ ಮುಟ್ಟಿಸಿದ್ದಾರೆ. 

ವಿಚಾರ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಜಮೀನಿನ ಸುತ್ತಲು ಬೀಡುಬಿಟ್ಟಿದ್ದ ಆನೆಗಳನ್ನು ಕಾಡಿಗೆ ಅಟ್ಟಿದ್ದಾರೆ. ಆನೆ ದಾಳಿಯಿಂದ ನಾಶವಾಗಿರುವ ಬೆಳೆಯ ಬಗ್ಗೆ ವರದಿ ಮಾಡಿ ಸರ್ಕಾರದಿಂದ ಶೀಘ್ರ ಪರಿಹಾರ ಕೊಡಿಸುವ ಭರವಸೆಯನ್ನು ಅಧಿಕಾರಿಗಳು ರೈತರಿಗೆ ನೀಡಿದ್ದಾರೆ.

ಶಾಶ್ವತ ತಡೆ ಆಗ್ರಹ : ಮರಳವಾಡಿ ಮತ್ತು ಹಾರೋಹಳ್ಳಿ ಹೋಬಳಿಯ ಬಹುತೇಕ ಗ್ರಾಮಗಳು ಬನ್ನೇರುಘಟ್ಟ ಮತ್ತು ಬಿಳಿಕಲ್ಲುಬೆಟ್ಟಕ್ಕೆ ಹೊಂದಿಕೊಂಡಂತಿವೆ. ಹೀಗಾಗಿ ಈ ಭಾಗದ ರೈತರಿಗೆ ಕಾಡಾನೆಗಳು ಹಾವಳಿ ನಿರಂತರವಾಗಿದೆ. ವರ್ಷವಿಡೀ ಬೆಳೆದ ಬೆಳೆಗಳನ್ನು ನಾಶಮಾಡುತ್ತಿರುವ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿಕೊಡಬೇಕೆಂದು ರೈತರು ಆಗ್ರಹಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.