ADVERTISEMENT

ಆರೋಗ್ಯದ ಮೂಲವಾಗಿ ಆಯುರ್ವೇದ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2012, 19:30 IST
Last Updated 17 ಆಗಸ್ಟ್ 2012, 19:30 IST
ಆರೋಗ್ಯದ ಮೂಲವಾಗಿ ಆಯುರ್ವೇದ
ಆರೋಗ್ಯದ ಮೂಲವಾಗಿ ಆಯುರ್ವೇದ   

ಬೆಂಗಳೂರು: `ಆರ್ಯುವೇದ ಎಂಬ ಪದವನ್ನು ಕೇವಲ ಮಸಾಜ್ ಎಂಬ ಪದಕ್ಕೆ ಸೀಮಿತಗೊಳಿಸದೇ, ಆರೋಗ್ಯದ ಮೂಲವಾಗಿ ಪರಿಗಣಿಸಬೇಕು~ ಎಂದು ಸಚಿವ ಎಸ್.ಸುರೇಶ್ ಕುಮಾರ್ ಸಲಹೆ ನೀಡಿದರು.

ವಿಜಯನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಪೆಂಟಾಕೇರ್ ಸ್ಪೆಷಾಲಿಟಿ ಆಯುರ್ವೇದ ಆಸ್ಪತ್ರೆಯನ್ನು ಈಚೆಗೆ ಉದ್ಘಾಟಿಸಿ ಮಾತನಾಡಿದ ಅವರು, `ಶುದ್ಧ ಆಯುರ್ವೇದ ಚಿಕಿತ್ಸೆ ಬಹಳಷ್ಟು ಪರಿಣಾಮಕಾರಿ. ಇದು ನನ್ನ ಸ್ವಂತ ಅನುಭವವಾಗಿದ್ದು, ಉತ್ತಮ ಚಿಕಿತ್ಸಾ ಪದ್ಧತಿಗಳು ಮುಂದಿನ ಪೀಳಿಗೆಗೂ ತಲುಪುವಂತಾಗಬೇಕು~ ಎಂದರು.

ಪರಿಸರವಾದಿ ಅ.ನ. ಯಲ್ಲಪ್ಪ ರೆಡ್ಡಿ ಮಾತನಾಡಿ, `ಆಯುರ್ವೇದ ಚಿಕಿತ್ಸೆಯೆಂದರೆ ವಾರಾಂತ್ಯಗಳಲ್ಲಿ ಮಸಾಜ್‌ನ ಮೊರೆ ಹೋಗುವುದು ಎಂಬಂತಾಗಿದೆ. ಆದರೆ ವೈದ್ಯರು ಶಿಫಾರಸ್ಸು ಮಾಡಿದ ಪಂಚಕರ್ಮ ಚಿಕಿತ್ಸೆಗೆ ಒಳಗಾಗುವವರು ತುಂಬಾ ಕಡಿಮೆ.  ಆರೋಗ್ಯ ಸಮಸ್ಯೆಗಳಾದ ಮಧುಮೇಹ, ಬೊಜ್ಜುತನ, ಬಂಜೆತನ, ಮಂದ ಬುದ್ದಿ ಸೇರಿದಂತೆ ಹಲವು ಸಮಸ್ಯೆಗಳಿಗೆ ಆಯುರ್ವೇದ ಚಿಕಿತ್ಸೆಯಿಂದ ಉತ್ತಮ ಫಲಿತಾಂಶ ಪಡೆಯಬಹುದು~ ಎಂದು ತಿಳಿಸಿದರು.

ಪೆಂಟಾಕೇರ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ನಿರಂಜನ್ ಮೂರ್ತಿ ಮಾತನಾಡಿ, `ಆಸ್ಪತ್ರೆಯಲ್ಲಿ ಬೇರೆ ಬೇರೆ ವಿಷಯಗಳ ಬಗ್ಗೆ ಆಳವಾದ ಅಧ್ಯಯನ ಮಾಡಿರುವ ತಜ್ಞ ವೈದ್ಯರ ತಂಡವನ್ನು ಹೊಂದಿದ್ದೇವೆ. ಗುಣಮಟ್ಟ, ಸುರಕ್ಷೆ ಹಾಗೂ ಏಕರೂಪ ಚಿಕಿತ್ಸಾ ಪದ್ಧತಿಯನ್ನು ನೀಡಲು ಆಸ್ಪತ್ರೆ ಬದ್ಧವಾಗಿದೆ~ ಎಂದು ತಿಳಿಸಿದರು.

ಬೆಂಗಳೂರಿನ ಸರ್ಕಾರಿ ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಬಿ.ಎಸ್ ಶೇಷಾದ್ರಿ ವಾಸನ್ ಅವರನ್ನು ಸನ್ಮಾನಿಸಲಾಯಿತು. ಎನ್‌ಹೆಚ್‌ಆರ್‌ಎಂ ಯೋಜನೆ ನಿರ್ದೇಶಕ ಎಸ್. ಸೆಲ್ವಕುಮಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.