ADVERTISEMENT

ಆರೋಪಿಗೆ ಸ್ಥಳೀಯರಿಂದ ಗೂಸಾ

ಬಾಲಕಿಯರಿಗೆ ಅಶ್ಲೀಲ ಎಸ್‌ಎಂಎಸ್ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 24 ಜೂನ್ 2013, 19:59 IST
Last Updated 24 ಜೂನ್ 2013, 19:59 IST

ಬೆಂಗಳೂರು: ಬಾಲಕಿಯರಿಗೆ ಮೊಬೈಲ್‌ನಲ್ಲಿ ಅಶ್ಲೀಲ ದೃಶ್ಯಗಳನ್ನು ತೋರಿಸುತ್ತಿದ್ದ ರಮೇಶ್ (50) ಎಂಬಾತನಿಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಕೆಂಗೇರಿ ಉಪನಗರ ಸಮೀಪದ ಕೆಎಚ್‌ಬಿ ಕಾಲೊನಿಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

ಕೆಎಚ್‌ಬಿ ಕಾಲೊನಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿರುವ ರಮೇಶ್, ಅಕ್ಕಪಕ್ಕದ ಫ್ಲಾಟ್‌ಗಳ ಬಾಲಕಿಯರಿಗೆ ಹಲವು ದಿನಗಳಿಂದ ಮೊಬೈಲ್‌ನಲ್ಲಿ ಅಶ್ಲೀಲ ದೃಶ್ಯಗಳನ್ನು ತೋರಿಸುತ್ತಿದ್ದ. ಬಾಲಕಿಯರು ಈ ಸಂಗತಿಯನ್ನು ಪೋಷಕರಿಗೆ ತಿಳಿಸಿದ್ದರು.

ಆತ ತನ್ನ ಪಕ್ಕದ ಫ್ಲಾಟ್‌ನ ಒಂಬತ್ತು ವರ್ಷದ ಬಾಲಕಿಗೆ ಮಧ್ಯಾಹ್ನ ಅಶ್ಲೀಲ ದೃಶ್ಯ ತೋರಿಸುತ್ತಿದ್ದ ವಿಷಯ ತಿಳಿದ ಬಾಲಕಿಯ ಪೋಷಕರು ಸ್ಥಳೀಯರ ಜತೆ ಸೇರಿ ಆತನಿಗೆ ಥಳಿಸಿದ್ದಾರೆ ಎಂದು ಕೆಂಗೇರಿ ಪೊಲೀಸರು ತಿಳಿಸಿದ್ದಾರೆ.
ರಮೇಶ್‌ನನ್ನು ಠಾಣೆಗೆ ಕರೆತಂದು ಮುಂದೆ ಈ ರೀತಿ ವರ್ತಿಸದಂತೆ ಎಚ್ಚರಿಕೆ ನೀಡಿಲಾಗಿದೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಆಟೊ ಚಾಲಕ ಆತ್ಮಹತ್ಯೆ
ಬೆಂಗಳೂರು:
  ಎಚ್‌ಎಎಲ್ ಸಮೀಪದ ಜ್ಯೋತಿನಗರದಲ್ಲಿ ಫ್ರಾನ್ಸಿಸ್ ಗ್ಸೇವಿಯರ್ (36) ಎಂಬುವರು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ನಾಗರಬಾವಿಯಲ್ಲಿ ಸತೀಶ್ (31) ಎಂಬ ಆಟೊ ಚಾಲಕ ನೇಣು ಹಾಕಿಕೊಂಡಿದ್ದಾನೆ.

ಸರಕು ಸಾಗಣೆ ಏಜೆನ್ಸಿಯೊಂದರಲ್ಲಿ ಉದ್ಯೋಗಿಯಾಗಿದ್ದ ಫ್ರಾನ್ಸಿಸ್ ಅವರು ಪತ್ನಿ ಮಾಲತಿ ಮತ್ತು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಜ್ಯೋತಿನಗರ ಒಂದನೇ ಅಡ್ಡರಸ್ತೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅವರು ಮನೆಯಲ್ಲಿ ರಾತ್ರಿ ಮದ್ಯಪಾನ ಮಾಡಿ ಕುಟುಂಬ ಸದಸ್ಯರೆಲ್ಲಾ ಮಲಗಿದ ನಂತರ ಕೊಠಡಿಯೊಂದರಲ್ಲಿ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದೂರು ದಾಖಲಿಸಿಕೊಳ್ಳಲಾಗಿದೆ.

ಮತ್ತೊಂದು ಪ್ರಕರಣ: ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಸತೀಶ್, ಬಸವೇಶ್ವರನಗರ ಸಮೀಪದ ಸಾಣೆಗುರವನಹಳ್ಳಿಯಲ್ಲಿರುವ ಅಕ್ಕನ ಮನೆಯಲ್ಲಿ ವಾಸವಾಗಿದ್ದರು.

ಮದ್ಯವ್ಯಸನಿಯಾಗಿದ್ದ ಸತೀಶ್, ಸರಿಯಾಗಿ ಮನೆಗೆ ಬರುತ್ತಿರಲಿಲ್ಲ. ರಾತ್ರಿ ಪಾನಮತ್ತನಾಗಿದ್ದ ಆತ ನಾಗರಬಾವಿ ವೃತ್ತದ ಬಳಿಯ ವಾಣಿಜ್ಯ ಸಂಕೀರ್ಣವೊಂದರಲ್ಲಿ ನೇಣು ಹಾಕಿಕೊಂಡಿದ್ದಾನೆ ಎಂದು ಜ್ಞಾನಭಾರತಿ ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.