ADVERTISEMENT

ಆರೋಪಿ ರಾಜೇಶ್‌ಗೆ ಜಾಮೀನು ತಿರಸ್ಕರಿಸಿದ ಹೈಕೋರ್ಟ್

ವಕೀಲ ಅಮಿತ್ ಕೇಶವಮೂರ್ತಿ ಶೂಟೌಟ್ ಪ್ರಕರಣ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 14:10 IST
Last Updated 18 ಜೂನ್ 2018, 14:10 IST
ಆರೋಪಿ ರಾಜೇಶ್‌ಗೆ ಜಾಮೀನು ತಿರಸ್ಕರಿಸಿದ ಹೈಕೋರ್ಟ್
ಆರೋಪಿ ರಾಜೇಶ್‌ಗೆ ಜಾಮೀನು ತಿರಸ್ಕರಿಸಿದ ಹೈಕೋರ್ಟ್   

ಬೆಂಗಳೂರು: ನಗರದ ವಕೀಲ ಅಮಿತ್ ಕೇಶವಮೂರ್ತಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ರಾಜೇಶ್ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.

ಈ ಕುರಿತಂತೆ ರಾಜೇಶ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಪ್ರಾಸಿಕ್ಯೂಷನ್ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸಿ.ಎಚ್.ಹನುಮಂತರಾಯ ಮಂಡಿಸಿದ ಈ ಎಲ್ಲ ಅಂಶಗಳನ್ನು ನ್ಯಾಯಪೀಠ ಮಾನ್ಯ ಮಾಡಿದೆ. 'ಆರೋಪಿ ಎಸಗಿರುವ ಅಪರಾಧ ಕೃತ್ಯಕ್ಕೆ ಮೇಲ್ನೋಟಕ್ಕೇ ಸಾಕಷ್ಟು ನಂಬಲರ್ಹ ಪುರಾವೆಗಳಿವೆ' ಎಂಬ ಅಭಿಪ್ರಾಯದೊಂದಿಗೆ ರಾಜೇಶ್‌ಗೆ ಜಾಮೀನು ನೀಡಲು ನ್ಯಾಯಪೀಠ ನಿರಾಕರಿಸಿದೆ.

ADVERTISEMENT

ರಾಜೇಶ್ ಪರ ಹಿರಿಯ ವಕೀಲ ರವಿ ಬಿ ನಾಯಕ್ ವಾದ ಮಂಡಿಸಿದರು.

ಏನಿದು ಘಟನೆ:‘2017ರ ಜನವರಿ 13ರಂದು ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಆಚಾರ್ಯ ಎಂಜಿನಿಯರಿಂಗ್ ಕಾಲೇಜು ಬಳಿ ಅಮಿತ್ ಮಧ್ಯಾಹ್ನ 3.15ರ ಸಮಯದಲ್ಲಿ ತಮ್ಮ ಸ್ವಿಫ್ಟ್ ಕಾರಿನಲ್ಲಿ ಕುಳಿತಿದ್ದರು‌. ಸಂಚಾರ ದಟ್ಟಣೆಯಿಂದ ಕೂಡಿದ ಈ ರಸ್ತೆಯಲ್ಲಿ ಕಾರು ನಿಲ್ಲಿಸಿಕೊಂಡು ಒಳಗೆ ಕುಳಿತು ರಾಜೇಶ್ ಪತ್ನಿ ಪಿಡಿಒ ಶ್ರುತಿಗೌಡ ಅವರೊಂದಿಗೆ ಚರ್ಚಿಸುತ್ತಿದ್ದರು. ಅಮಿತ್ ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದ ರಾಜೇಶ್, ದಿಢೀರನೆ ಬಂದ ರಾಜೇಶ್‌ ಇವರ ಕಾರಿನ ಬಾಗಿಲು ತೆರೆದು ಅಮಿತ್‌ ಮೇಲೆ ತಮ್ಮ ಬಳಿ ಇದ್ದ ಪಿಸ್ತೂಲಿನಿಂದ ಏಕಾಏಕಿ ಗುಂಡು ಹಾರಿಸಿ ಕೊಂದಿದ್ದರು’ ಎಂಬುದು ದೋಷಾರೋಪ ಪಟ್ಟಿಯಲ್ಲಿರುವ ಅಂಶ.

‘ಶ್ರುತಿ ಗೌಡ ಅವರ ನಡೆ ಮತ್ತು ಚಟುವಟಿಕೆಗಳ ಮೇಲೆ ಸದಾ ಸಂಶಯ ವ್ಯಕ್ತಪಡಿಸುತ್ತಿದ್ದ ರಾಜೇಶ್‌, ಅವರು ಬಳಸುವ ಕಾರಿಗೆ ಜಿಪಿಎಸ್‌ ಅಳವಡಿಸಿ ಅದರ ಮುಖಾಂತರ ಅವರಿದ್ದ ಸ್ಥಳಕ್ಕೆ ಹಿಂಬಾಲಿಸಿಕೊಂಡು ಬಂದಿದ್ದ’ ಎಂಬುದು ದೋಷಾರೋಪ ಪಟ್ಟಿಯಲ್ಲಿನ ಮತ್ತೊಂದು ಅಂಶ.ಅಮಿತ್ ಕೇಶವಮೂರ್ತಿ ಲಂಡನ್‌ನಲ್ಲಿ ಎಲ್ಎಲ್ಎಂ ಸ್ನಾತಕೋತ್ತರ ಪದವಿ ಪಡೆದಿದ್ದರು. ನಗರದಲ್ಲಿ ವಕೀಲಿಕೆ ನಡೆಸುತ್ತಿದ್ದರು. ಇವರ ತಂದೆ ಕೇಶವಮೂರ್ತಿ ನೆಲಮಂಗಲದಲ್ಲಿ ಖ್ಯಾತ ಹಿರಿಯ ವಕೀಲರು.

ಜಾಮೀನು ತಿರಸ್ಕರಿಸಲು ನ್ಯಾಯಪೀಠ ನೀಡಿದ ಕಾರಣಗಳು:

l ಪ್ರಕರಣದ ಒಂದನೇ ಆರೋಪಿ

ಯಾಗಿರುವ ರಾಜೇಶ್, ಅಮಿತ್ ಕೇಶವಮೂರ್ತಿಯವರನ್ನು ಕೊಂದ ಸಮಯದಲ್ಲಿ ಆ ಪ್ರದೇಶದಲ್ಲಿದ್ದುದಕ್ಕೆ ಸಪ್ತಗಿರಿ ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದ ದಾಖಲೆ ಇದೆ.

l ಶೂಟೌಟ್ ಮಾಡಲು ಬಂದಿದ್ದ ರಾಜೇಶ್ ಅವರ ಇನ್ನೊವಾ ಕಾರಿನ ಚಾಲಕನೇ ಘಟನೆಗೆ ಪ್ರತ್ಯಕ್ಷ ಸಾಕ್ಷಿ ಆಗಿದ್ದಾನೆ.

l ಕೃತ್ಯವನ್ನು ನಡೆಸಿದ ನಂತರ ರಾಜೇಶ್ ತಾವೇ ತಮ್ಮ ಮಾವನವರಿಗೆ ಫೋನ್ ಮಾಡಿ ಈ ವಿಷಯ ತಿಳಿಸಿದ್ದಾರೆ.

l ಘಟನೆ ನಡೆದ ಸಮಯದಲ್ಲಿ ಅಮಿತ್ ಜೊತೆ ರಾಜೇಶ್ ಪತ್ನಿ ಶ್ರುತಿಗೌಡ ಇದ್ದರು. ಅವರು ತಮ್ಮ ಮರಣಪೂರ್ವ ಹೇಳಿಕೆಯಲ್ಲಿ ಎಲ್ಲವನ್ನೂ ವಿವರ
ವಾಗಿ ತಿಳಿಸಿದ್ದಾರೆ.

l ಶೂಟೌಟ್ ನಡೆದ ಕೂಡಲೇ ಶ್ರುತಿ ಅಮಿತ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದಾರೆ.

l ನಂತರ ಆಕೆಯೂ ಹತ್ತಿರದಲ್ಲೇ ಇರುವ ‘ಹೋಟೆಲ್‌ ರಾಜ್ ವಿಸ್ಟಾ‘ದಲ್ಲಿ ಕೊಠಡಿ ಬಾಡಿಗೆ ಪಡೆದು ಅಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

l ಅಷ್ಟೇ ಅಲ್ಲ, ಘಟನೆಯ ಕುರಿತಂತೆ ತಮ್ಮ ಸಂಬಂಧಿ ಸಹೋದರಿ ಶ್ವೇತಾ ಸ್ವಾಮಿಗೌಡ ಅವರಿಗೆ ಫೋನ್ ಮುಖಾಂತರ ವಿಷಯ ತಿಳಿಸಿ, ನನ್ನ ಗಂಡ ಒಬ್ಬ ಅಮಾಯಕ ವಕೀಲರನ್ನು ಕೊಲೆಗೈದಿದ್ದಾನೆ ಎಂದು ತಿಳಿಸಿದ್ದಾರೆ.

l ಇದನ್ನು ಶ್ವೇತಾ ಸ್ವಾಮಿಗೌಡ ಪೊಲೀಸರೆದುರು ಹೇಳಿಕೆ ಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.