ADVERTISEMENT

ಆರ್ಥಿಕ ಉಳಿತಾಯ: ಮನೆಗಳಲ್ಲೇ ಚಾಲನೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2013, 19:56 IST
Last Updated 1 ಏಪ್ರಿಲ್ 2013, 19:56 IST

ಬೆಂಗಳೂರು: `ಆರ್ಥಿಕ ಉಳಿತಾಯದ ಪ್ರಕ್ರಿಯೆಗೆ ಗೃಹಗಳಲ್ಲಿ ಚಾಲನೆ ದೊರೆತರೆ ದೇಶವು ಆರ್ಥಿಕ ಭದ್ರತೆಯನ್ನು ಹೊಂದಲು ಸಾಧ್ಯವಿದೆ' ಎಂದು  ಕೇಂದ್ರ ಹಣಕಾಸು ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರ  ಡಾ.ರಘುರಾಂ ಜಿ.ರಾಜನ್ ಅಭಿಪ್ರಾಯಪಟ್ಟರು.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 38ನೇ ಘಟಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಹೆಚ್ಚಿನ ಬಂಡವಾಳ ಹೂಡಿಕೆ ಮತ್ತು ಅಧಿಕ ಉಳಿತಾಯಕ್ಕೆ ಆದ್ಯತೆ ನೀಡುವ ಮೂಲಕ ಕಡಿಮೆ ಅನುಭೋಗ ಸೂತ್ರವನ್ನು ಅನುಸರಿಸುವ ಅಗತ್ಯವಿದೆ. ಕೇವಲ ಸರ್ಕಾರ ಮಾತ್ರವಲ್ಲ ಪ್ರತಿ ಕುಟುಂಬ ಸದಸ್ಯರು ಖರ್ಚಿಗೆ ಕಡಿವಾಣ ಹಾಕಿ ಉಳಿತಾಯದ ಹಾದಿ ತುಳಿದಾಗ ಮಾತ್ರ  ಆರ್ಥಿಕ ಸ್ಥಿರತೆಯನ್ನು ಕಂಡುಕೊಳ್ಳಲು ಸಾಧ್ಯವಿದೆ' ಎಂದು ಹೇಳಿದರು.

`ಉದ್ಯಮಗಳನ್ನು ಸ್ಥಾಪಿಸಿ ನಡೆಸಲು ಶೈಕ್ಷಣಿಕ ಜ್ಞಾನದೊಂದಿಗೆ ಅಪಾರ ಆತ್ಮವಿಶ್ವಾಸದ ಅಗತ್ಯವಿರುತ್ತದೆ. ಅದನ್ನು ರೂಢಿಸಿಕೊಳ್ಳುವಲ್ಲಿ ವಿದ್ಯಾರ್ಥಿಗಳು ಮುಂದಾಗಬೇಕು. ಈ ಸ್ಪರ್ಧಾತ್ಮಕ ಯುಗದಲ್ಲಿ ವೃತ್ತಿ ಕೌಶಲದೊಂದಿಗೆ ವಿದ್ಯಾರ್ಥಿಗಳಿಗೆ ಸುಧಾರಿತ ಮೂಲಸೌಕರ್ಯವನ್ನು ಒದಗಿಸುವ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಮುಂದಾಗಬೇಕು' ಎಂದು ಸಲಹೆ ನೀಡಿದರು.

`ಪ್ರಜಾಪ್ರಭುತ್ವ ಹಾಗೂ ಮುಕ್ತ ಉದ್ಯಮದ ನಡುವೆ  ಒಂದು ಆರೋಗ್ಯಕರ ಭಾಂದವ್ಯ ರೂಪುಗೊಳ್ಳಬೇಕು. ಮುಕ್ತ ಆರ್ಥಿಕತೆ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಧಕ್ಕೆಯಾಗದ ರೀತಿಯಲ್ಲಿ ದೇಶದ ಅರ್ಥವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು' ಎಂದರು.

ಉದ್ಯಮಿ ಮುಕೇಶ್ ಅಂಬಾನಿ, `ವಿದ್ಯಾರ್ಥಿಗಳು ಪುಸ್ತಕದ ಹುಳುಗಳಾದೇ ಜೀವನವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಕಲಿತ ವಿದ್ಯೆಯನ್ನು ಉಪಯೋಗಿಸಿಕೊಳ್ಳಬೇಕು. ಹೊಸ ತಂತ್ರಜ್ಞಾನದ ಅಳವಡಿಕೆ, ವೃತ್ತಿನಿಪುಣತೆಯಿಂದ ಯಶಸ್ವಿ ಉದ್ಯಮದಾರರಾಗಲು ಸಾಧ್ಯವಿದೆ' ಎಂದು ಹೇಳಿದರು.

ಸಾಫ್ಟ್‌ವೇರ್ ಉದ್ಯಮ ನಿರ್ವಹಣಾ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಉತ್ತರ ಪ್ರದೇಶದ ಪ್ರಶಾಂತ್‌ಸಿಂಗ್ ಗಂಗ್ವಾರ್, `ಸತತವಾಗಿ ಅಧ್ಯಯನದಲ್ಲಿ ತೊಡಗಿಕೊಂಡಿದ್ದರಿಂದ  ಈ ಪದವಿ ಪಡೆಯಲು ಸಾಧ್ಯವಾಯಿತು. ಇದಕ್ಕಾಗಿ ಕಳೆದ ಎರಡು ವರ್ಷಗಳಿಂದ ಮನೆಯ ಸದಸ್ಯರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಕೊನೆಗೆ ಅಂದುಕೊಂಡಂತೆ ಚಿನ್ನದ ಪದಕವನ್ನು ಪಡೆದಿದ್ದೇನೆ' ಎಂದು ಹರ್ಷ ವ್ಯಕ್ತಪಡಿಸಿದರು.

ಸಾಫ್ಟ್‌ವೇರ್ ಉದ್ಯಮದ ಕಾರ್ಯನಿರ್ವಾಹಕ ವಿಭಾಗದಲ್ಲಿ ನಿರ್ಮಲ್ ಪುರೋಹಿತ್ ಸ್ವರ್ಣ ಪದಕ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.