ಆಲಮಟ್ಟಿ: ಆಲಮಟ್ಟಿ ಜಲಾಶಯದಿಂದ ನಾರಾಯಣಪುರ ಜಲಾಶಯಕ್ಕೆ ನೀರು ಬಿಟ್ಟಿರುವ ಪರಿಣಾಮ ಬುಧವಾರ ಮಧ್ಯಾಹ್ನದಿಂದ ಜಲಾಶಯದ ಬಲಭಾಗದ ವಿದ್ಯುತ್ ಘಟಕ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಆರಂಭಿಸಿದೆ.
ಜುಲೈ 1ರಿಂದ ಜಲಾಶಯದಿಂದ ಕೇವಲ 1,000 ಕ್ಯೂಸೆಕ್ ನೀರು ಬಿಡುತ್ತಿದ್ದ ಪರಿಣಾಮ ಕೇವಲ ಆರು ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿತ್ತು. ಬುಧವಾರ ಮಧ್ಯಾಹ್ನ ಜಲಾಶಯದಿಂದ 15,000 ಕ್ಯೂಸೆಕ್ ನೀರನ್ನು ಬಿಟ್ಟಿರುವುದರಿಂದ ಜಲಾಶಯದ ಆರು ಘಟಕಗಳ ಪೈಕಿ ನಾಲ್ಕು ಕಾರ್ಯಾರಂಭ ಮಾಡಿದ್ದು 90 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ.
ರಾತ್ರಿ ವೇಳೆಗೆ ಹೊರಹರಿವು 20,000 ಕ್ಯೂಸೆಕ್‌ಗೆ ಏರಲಿದ್ದು ವಿದ್ಯುತ್ ಉತ್ಪಾದನೆ ಕೂಡ 120 ಮೆಗಾವಾಟ್‌ಗೆ ಏರಲಿದೆ ಎಂದು ವಿದ್ಯುತ್ ನಿಗಮದ ಮೂಲಗಳು ತಿಳಿಸಿವೆ. ಇದರಿಂದ ಪ್ರತಿನಿತ್ಯ ಈಗ ಮೂರು ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಪ್ರಾರಂಭಗೊಳ್ಳಲಿದೆ. ಜಲಾಶಯಕ್ಕೆ 60,000 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 123 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯದಲ್ಲಿ 68 ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.