ಬೆಂಗಳೂರು: `ಖಾಸಗಿ ವಿಶ್ವವಿದ್ಯಾಲಯಗಳಿಗೆ ಸ್ಪಷ್ಟ ಮಾರ್ಗಸೂಚಿಗಳನ್ನು ಸರ್ಕಾರ ರಚಿಸಬೇಕು' ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಎನ್. ರವಿಕುಮಾರ್ ಆಗ್ರಹಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಸ್ಪಷ್ಟ ಮಾರ್ಗಸೂಚಿಗಳನ್ನು ರಚಿಸುವಂತೆ ಒತ್ತಾಯಿಸಿ ಬುಧವಾರದಂದು (ನ.28) ಆನಂದರಾವ್ ವೃತ್ತದ ಬಳಿ ಪ್ರತಿಭಟನೆಯನ್ನು ನಡೆಸಲಾಗುವುದು. ನಂತರ ರಾಜ್ಯದಾದ್ಯಂತ ಡಿ. 3 ರಂದು ಉಗ್ರ ಪ್ರತಿಭಟನೆ. ಡಿ. 6 ರಂದು ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನಕ್ಕೆ ಮುತ್ತಿಗೆ ಹಾಕಲಾಗುವುದು' ಎಂದರು.
`ಬೆಳಗಾವಿಯಲ್ಲಿ ಕರೆದಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ಹಲವು ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಯ ವಿಧೇಯಕ ಮಂಡನೆಯಾಗಲಿದೆ. ಅದಕ್ಕೂ ಮೊದಲು ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ರಚಿಸಿರುವ ಸ್ಪಷ್ಟ ಮಾರ್ಗಸೂಚಿಗಳೇನು ಎಂಬುದನ್ನು ಶಿಕ್ಷಣ ಸಚಿವರು ಪತ್ರಿಕಾಗೋಷ್ಠಿ ಕರೆದು ಬಹಿರಂಗ ಪಡಿಸಬೇಕು' ಎಂದು ಆಗ್ರಹಿಸಿದರು.
`ಸರ್ಕಾರದಿಂದ ಎಲ್‌ಕೆಜಿ ಮತ್ತು ಯುಕೆಜಿಗಳ ವ್ಯಾಪಾರೀಕರಣವನ್ನು ತಡೆಗಟ್ಟಲು ಸಾಧ್ಯವಾಗಿಲ್ಲ. ಉನ್ನತ ಶಿಕ್ಷಣದ ದೈತ್ಯಾಕಾರದ ಖಾಸಗಿ ವಿವಿಗಳ ವ್ಯಾಪಾರೀಕರಣವನ್ನು ತಡೆಗಟ್ಟಲು ಸರ್ಕಾರ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಇದರಿಂದ ಖಾಸಗಿ ವಿವಿಗಳಿಗೆ ಅನುಮತಿ ನೀಡುವ ಮುನ್ನ ಈಗಿನ ಸಿಇಟಿ ಮಾದರಿಯಂತೆ ಶುಲ್ಕ ನೀತಿಯನ್ನು ರೂಪಿಸಿ, ಪ್ರವೇಶ ನೀತಿ, ಪ್ರವೇಶ ಪರೀಕ್ಷೆಗಳನ್ನು ನಡೆಸಬೇಕು' ಎಂದು ಒತ್ತಾಯಿಸಿದರು.
`ಖಾಸಗಿ ವಿವಿಗಳ ಕುಲಪತಿ ಮತ್ತು ಕುಲಸಚಿವರ ನೇಮಕಾತಿಗಳಲ್ಲಿ ಶೇ 50 ರಷ್ಟು ಅಧಿಕಾರವು ಸರ್ಕಾರದ ಕೈಯ್ಯಲ್ಲಿಯೇ ಇರುವಂತೆ ಕಾಯ್ದೆಯನ್ನು ರೂಪಿಸಲಿ. ಅಲ್ಲಿರುವ ಸಿಂಡಿಕೇಟ್ ಸದಸ್ಯರಲ್ಲಿ ಶೇ 50 ಮಂದಿ ಸದಸ್ಯರನ್ನು ಸರ್ಕಾರವೇ ನೇಮಿಸುವ ಕಾನೂನು ರೂಪಿಸಬೇಕು. ಆ ನಂತರವಷ್ಟೇ ಖಾಸಗಿ ವಿವಿಗಳ ಸ್ಥಾಪನೆಗೆ ಅನುಮತಿ ನೀಡಬೇಕು' ಎಂದು ಆಗ್ರಹಿಸಿದರು.
`ಖಾಸಗಿ ವಿಶ್ವವಿದ್ಯಾಲಯಗಳಲ್ಲಿಯೂ ಮೀಸಲಾತಿಯನ್ನು ನೀಡಬೇಕು. ದೂರಶಿಕ್ಷಣ ಕೇಂದ್ರಗಳನ್ನು ಖಾಸಗಿ ವಿವಿಯಲ್ಲಿ ಸ್ಥಾಪಿಸಲು ಅನುಮತಿ ನೀಡಬಾರದು. ರಾಜ್ಯದಲ್ಲಿ ತಮ್ಮ ವ್ಯಾಪಾರೀ ಕೇಂದ್ರಗಳನ್ನು ತೆರೆಯಲು ಹೊರಟಿರುವ ಖಾಸಗಿ ವಿವಿಗಳನ್ನು ಸರ್ಕಾರವೇ ನಿಯಂತ್ರಣ ಮಾಡಬೇಕಾಗುತ್ತದೆ' ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.