ಬೆಂಗಳೂರು: ಬಡವರಿಗೆ ಕೈಗೆಟಕುವ ದರದಲ್ಲಿ ಮನೆಗಳನ್ನು ನಿರ್ಮಿಸಿಕೊಡುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಯೋಜನೆ ಮಂಗಳವಾರ ನನಸಾಗಲಿದೆ.
ನಂದಿನಿ ಬಡಾವಣೆಯಲ್ಲಿ ಬಡವರಿಗಾಗಿ ನಿರ್ಮಿಸಿರುವ ವಸತಿ ಸಮುಚ್ಚಯಗಳನ್ನು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹಂಚಿಕೆದಾರರಿಗೆ ಹಸ್ತಾಂತರಿಸುವರು. ಬಿಡಿಎ ವತಿಯಿಂದ ಬಡವರಿಗೆ 30 ಸಾವಿರ ಮನೆಗಳನ್ನು ನಿರ್ಮಿಸಲಾಗುವುದು ಎಂದು 2011-12ರ ಬಜೆಟ್‌ನಲ್ಲಿ ಘೋಷಿಸಲಾಗಿತ್ತು.
ಅದರಂತೆ, ಮೊದಲ ಹಂತದಲ್ಲಿ ನಂದಿನಿ ಬಡಾವಣೆ ಹಾಗೂ ವಲಗೇರಹಳ್ಳಿ ವಸತಿ ಸಮುಚ್ಚಯಗಳನ್ನು ನಿರ್ಮಿಸುವ ಯೋಜನೆ ಕಳೆದ ಜುಲೈನಲ್ಲಿ ಆರಂಭವಾಗಿತ್ತು.
ಒಂದು ಲಕ್ಷ ರೂಪಾಯಿ ವರಮಾನದ ಮಿತಿಯೊಳಗಿನ ನಗರವಾಸಿಗಳಿಗೆ 5.5 ಲಕ್ಷ ರೂಪಾಯಿ ವೆಚ್ಚದಲ್ಲಿ ಒಂದು ಕೊಠಡಿಯ ವಸತಿ ಘಟಕಗಳನ್ನು ನಿರ್ಮಿಸುವ ಯೋಜನೆ ಇದಾಗಿದೆ.
ಈ ಸಂದರ್ಭದಲ್ಲಿ ಬಿಡಿಎ ಶಿಲ್ಪಕಲಾ ಪ್ರದರ್ಶನಕ್ಕೆ ಮೀಸಲಾದ ಪ್ರತ್ಯೇಕ ಶಿಲ್ಪಕಲಾ ಉದ್ಯಾನವನ್ನು ಬನಶಂಕರಿ ಆರನೇ ಹಂತದ ಮೊದಲ ಬ್ಲಾಕ್‌ನಲ್ಲಿರುವ ಎಂಟು ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲು ಉದ್ದೇಶಿಸಿದ್ದು, ಉದ್ಯಾನ ನಿರ್ಮಾಣ ಕಾಮಗಾರಿಗೂ ಮುಖ್ಯಮಂತ್ರಿಗಳು ಚಾಲನೆ ನೀಡುವರು.
ಬಿಡಿಎ ಬಡವರಿಗೆ ಸೂರು ನಿರ್ಮಿಸುವ ಯೋಜನೆಯ ಮುಂದುವರಿದ ಭಾಗವಾಗಿ ಹಲಗೆವಡೇರಹಳ್ಳಿಯಲ್ಲಿ ಮತ್ತೊಂದು ಸಮುಚ್ಚಯವನ್ನು ನಿರ್ಮಿಸುವ ಕಾಮಗಾರಿಗೂ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ.
200 ವಸತಿ ಘಟಕಗಳ ಈ ಸಮುಚ್ಚಯದ ಪಕ್ಕದಲ್ಲಿಯೇ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸುವ ಉದ್ದೇಶವಿದೆ ಎಂದು ಬಿಡಿಎ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.