ADVERTISEMENT

ಇಲ್ಲಿದ್ದರೂ ನಮ್ಮನೆ, ತೆರಿಗೆ ತುಂಬಿಲ್ಲ ಸುಮ್ಮನೆ!

​ಪ್ರಜಾವಾಣಿ ವಾರ್ತೆ
Published 19 ಜೂನ್ 2013, 20:21 IST
Last Updated 19 ಜೂನ್ 2013, 20:21 IST

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ 25 ಲಕ್ಷ ವಸತಿ ಹಾಗೂ 3.5 ಲಕ್ಷ ವಾಣಿಜ್ಯ ಕಟ್ಟಡಗಳು ಇವೆ ಎಂಬುದು ಬಿಬಿಎಂಪಿಯೇ ನೇಮಕ ಮಾಡಿದ್ದ ಘನತ್ಯಾಜ್ಯ ನಿರ್ವಹಣೆ ತಜ್ಞರ ಸಮಿತಿ ಮಾಡಿರುವ ಅಂದಾಜು. ಆದರೆ, ಇದುವರೆಗೆ ಆಸ್ತಿ ತೆರಿಗೆ ಜಾಲಕ್ಕೆ ಒಳಪಟ್ಟಿರುವುದು 16.19 ಲಕ್ಷ ಆಸ್ತಿಗಳು (ವಸತಿ ಹಾಗೂ ವಾಣಿಜ್ಯ ಕಟ್ಟಡಗಳು ಸೇರಿ) ಮಾತ್ರ.

ವರ್ಷದಿಂದ ವರ್ಷಕ್ಕೆ ಬಿಬಿಎಂಪಿಯಿಂದ ಆಸ್ತಿ ತೆರಿಗೆ ಸಂಗ್ರಹ ಹೆಚ್ಚುತ್ತಲೇ ಹೊರಟಿದೆ. 2006-07ರಲ್ಲಿರೂ 360 ಕೋಟಿಯಷ್ಟು ಸಂಗ್ರಹವಾಗುತ್ತಿದ್ದ ತೆರಿಗೆ 2012-13ರ ವೇಳೆಗೆ ರೂ 1,358 ಕೋಟಿಗೆ ಏರಿದೆ. ಆದರೆ, `ನಗರದಲ್ಲಿ ಇರುವ ಆಸ್ತಿಗಳ ಸಂಖ್ಯೆಗೆ ಹೋಲಿಸಿದರೆ ಬರುತ್ತಿರುವ ತೆರಿಗೆ ಪ್ರಮಾಣ ಅತ್ಯಲ್ಪವಾಗಿದೆ' ಎಂಬುದು ಬಿಬಿಎಂಪಿ ಸದಸ್ಯರ ಸಾಮಾನ್ಯವಾದ ದೂರಾಗಿದೆ.

`800 ಚದರ ಕಿ.ಮೀ. ಪ್ರದೇಶ ವ್ಯಾಪಿಸಿರುವ ಪಾಲಿಕೆ ಸರಹದ್ದಿನ ಎಲ್ಲ ಆಸ್ತಿಗಳನ್ನು ತೆರಿಗೆ ಜಾಲಕ್ಕೆ ತಂದರೆ ಈಗಿರುವ ವರಮಾನ ದುಪ್ಪಟ್ಟು ಆಗಲಿದೆ' ಎಂಬುದು ಕಂದಾಯ ವಿಭಾಗ ನೀಡುವ ಸಮಜಾಯಿಷಿ ಆಗಿದೆ. ಆಸ್ತಿಗಳ ವಿವರ ಸಂಗ್ರಹಿಸಲು ಕಂದಾಯ ವಿಭಾಗಕ್ಕೆ ಹಲವು ಅಡಚಣೆಗಳು ಎದುರಾಗಿವೆ.

2007ರ ಜನವರಿ 1ರಂದು 574 ಚದರ ಕಿ.ಮೀ. ವಿಸ್ತೀರ್ಣದ ಪ್ರದೇಶ ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾಗಿದ್ದು, ವಾರ್ಡ್‌ಗಳ ಪುನರ್ ವಿಂಗಡಣೆಯನ್ನೂ ಮಾಡಲಾಗಿದೆ. ಇದರಿಂದ ಆಸ್ತಿ ವಿವರಗಳ ನಿರ್ವಹಣೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಬಿಬಿಎಂಪಿಗೆ ಸೇರ್ಪಡೆಯಾದ ನಗರಸಭೆ ಮತ್ತು ಪುರಸಭೆಗಳು ತಮ್ಮ ವ್ಯಾಪ್ತಿಯ ಕಟ್ಟಡಗಳ ವಿವರವನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿದ್ದುದು ಸಹ ಕಂದಾಯ ವಿಭಾಗದ ತಲೆನೋವು ಹೆಚ್ಚುವಂತೆ ಮಾಡಿದೆ.

ತೆರಿಗೆ ಸಂಗ್ರಹ ಕಾರ್ಯಾಚರಣೆಯಲ್ಲಿ ಎದುರಾದ ಎಲ್ಲ ಸಮಸ್ಯೆ ಹೋಗಲಾಡಿಸಲು ಬಿಬಿಎಂಪಿ, ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಮೂಲಕ ಆಸ್ತಿ ದಾಖಲೆ ನಿರ್ವಹಿಸಲು ಮುಂದಾಗಿದೆ. ಅದಕ್ಕೆ ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ ಅಭಿವೃದ್ಧಿ ನಿಗಮ (ಕಿಯೋನಿಕ್ಸ್)ನಿಂದ ತಾಂತ್ರಿಕ ನೆರವು ಸಿಕ್ಕಿದೆ. `ಪ್ರತಿಯೊಂದು ಆಸ್ತಿಯನ್ನು ಜಿಐಎಸ್‌ಗೆ ಅಳವಡಿಸುವ ಪ್ರಕ್ರಿಯೆ ಈಗ ಮುಕ್ತಾಯದ ಹಂತದಲ್ಲಿದ್ದು, ಇನ್ನು ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ.

ಬಳಿಕ ಆಸ್ತಿ ತೆರಿಗೆ ಸಂಗ್ರಹದ ಕೆಲಸ ಇನ್ನಷ್ಟು ಸಲೀಸಾಗಲಿದೆ' ಎಂದು ಹೇಳುತ್ತಾರೆ ಬಿಬಿಎಂಪಿ ಮಾಹಿತಿ ತಂತ್ರಜ್ಞಾನ ಸಲಹೆಗಾರ ಟಿ.ಶೇಷಾದ್ರಿ.
`ಉಪಗ್ರಹ ಆಧಾರಿತ ಚಿತ್ರಗಳಿಂದ ಬಿಬಿಎಂಪಿ ನಕ್ಷೆಯನ್ನು ಸಿದ್ಧಪಡಿಸಲಾಗಿದೆ. ಕಂದಾಯ ವಿಭಾಗದಿಂದ ಮಾಡಲಾದ ಸಮೀಕ್ಷೆಗಳ ಮೂಲಕ ನಕ್ಷೆಯ ಪ್ರತಿ ವಿವರವನ್ನೂ ಪುನರ್ ಪರಿಶೀಲಿಸಲಾಗಿದೆ.

ADVERTISEMENT

ಕೇವಲ ಆಸ್ತಿ ಗುರುತಿನ (ಪಿಐಡಿ) ಸಂಖ್ಯೆಯನ್ನು ಹಾಕಿದರೆ ಸಾಕು, ಆ ಸಂಖ್ಯೆಯ ನಿವೇಶನ, ಅದರ ಮೂಲನಕ್ಷೆ, ಅಲ್ಲಿ ನಿರ್ಮಾಣವಾದ ಕಟ್ಟಡದ ಚಿತ್ರ, ಕಟ್ಟಡದ ವಿಸ್ತೀರ್ಣ, ಅದರ ಉಪಯೋಗ (ವಸತಿ, ವಾಣಿಜ್ಯ, ಸರ್ಕಾರಿ ಕಚೇರಿ ಇತ್ಯಾದಿ), ಮಾಲೀಕರ ಹೆಸರು, ಕೊನೆಯ ಸಲ ತೆರಿಗೆ ತುಂಬಿದ ದಿನಾಂಕ, ಬಾಕಿ ಉಳಿದಿರುವ ತೆರಿಗೆ, ಹಳೆಯ ಪಿಐಡಿ ಸಂಖ್ಯೆ ಸೇರಿದಂತೆ ಎಲ್ಲ ಮಾಹಿತಿಯೂ ಕಂಪ್ಯೂಟರ್ ಪರದೆ ಮೇಲೆ ಕಾಣಿಸಿಕೊಳ್ಳಲಿದೆ' ಎಂದು ವಿವರಿಸುತ್ತಾರೆ.

`ಈಗಿರುವ ಪಿಐಡಿ ಸಂಖ್ಯೆಯಲ್ಲಿ ಮೂರು ಭಾಗಗಳಿದ್ದು, ವಾರ್ಡ್, ಬೀದಿ ಮತ್ತು ಮನೆ ಗುರುತಿನ ಸಂಖ್ಯೆಗಳನ್ನು ಅದು ಹೊಂದಿದೆ. ಇಷ್ಟಾಗಿಯೂ ಪಿಐಡಿ ಸಂಖ್ಯೆ ಒಂದರಿಂದಲೇ ಯಾವುದೇ ಆಸ್ತಿಯನ್ನು ಸ್ಪಷ್ಟವಾಗಿ ಗುರುತಿಸುವುದು ಕಷ್ಟವಾಗಿದೆ. ಕೆಲವು ರಸ್ತೆಗಳು 2-3 ವಾರ್ಡ್‌ಗಳಲ್ಲಿ ಹಾಯ್ದು ಹೋಗುವುದರಿಂದ ಅದನ್ನು ಆಯಾ ವಾರ್ಡ್‌ಗೆ ವಿಭಜಿಸುವುದು ಸಹ ದುಸ್ಸಾಧ್ಯವಾಗಿದೆ. ಹೊಸ ವ್ಯವಸ್ಥೆಯಲ್ಲಿ ಎಲ್ಲ ಕೊರತೆಗಳನ್ನು ನೀಗಿಸಲಾಗಿದೆ' ಎಂದು ಶೇಷಾದ್ರಿ ಹೇಳುತ್ತಾರೆ.

ಬಿಬಿಎಂಪಿ ವ್ಯಾಪ್ತಿಯ ಎಲ್ಲ ರಸ್ತೆಗಳನ್ನು ಜಿಐಎಸ್‌ನಲ್ಲಿ ಈಗಾಗಲೇ ಅಳವಡಿಸಲಾಗಿದೆ. ಹೆದ್ದಾರಿ, ಅಡ್ಡರಸ್ತೆ, ಕವಲುದಾರಿ ಸೇರಿದಂತೆ ಒಟ್ಟಾರೆ 93,000 ರಸ್ತೆಗಳನ್ನು ಗುರುತಿಸಲಾಗಿದೆ. ರಸ್ತೆಗಳ ಸ್ವರೂಪದ ಆಧಾರದ ಮೇಲೆ ಅವುಗಳನ್ನು ವಾರ್ಡ್ ರಸ್ತೆ, ಹೆದ್ದಾರಿ ಹಾಗೂ ಎರಡು ವಾರ್ಡ್‌ಗಳನ್ನು ವಿಭಜಿಸುವ ಮಧ್ಯದ ರಸ್ತೆ ಎಂಬ ವಿಭಾಗ ಮಾಡಲಾಗಿದೆ. ವಾರ್ಡ್ ರಸ್ತೆಗೆ `ಡಬ್ಲ್ಯು', ಹೆದ್ದಾರಿಗಳಿಗೆ `ಎಂ' ಮತ್ತು ಮಧ್ಯದ ರಸ್ತೆಗಳಿಗೆ `ಐ' ಎಂಬ ಕೋಡ್‌ಗಳನ್ನು ನೀಡಲಾಗಿದೆ.

>ಈ ವರ್ಗೀಕರಣದ ಆಧಾರದ ಮೇಲೆ ಪ್ರತಿಯೊಂದು ಕಟ್ಟಡವನ್ನು ನಿಖರವಾಗಿ ಗುರುತಿಸಲು ಸಾಧ್ಯವಾಗುವಂತೆ ವ್ಯವಸ್ಥೆ ರೂಪಿಸಲಾಗಿದೆ. ಕಟ್ಟಡದ ಪಿಐಡಿ ಸಂಖ್ಯೆ ಗೊತ್ತಿದ್ದರೆ ಸಾಕು, ಜಿಐಎಸ್ ಆಸ್ತಿ ನಿರ್ವಹಣೆ ವ್ಯವಸ್ಥೆ ಅದರ ವಿಳಾಸ ಪತ್ತೆ ಹಚ್ಚುತ್ತದೆ. ತೆರಿಗೆ ಜಾಲದಿಂದ ಯಾವ ಆಸ್ತಿಯೂ ತಪ್ಪಿಸಿಕೊಳ್ಳದಂತೆ ಜಾಗೃತಿ ವಹಿಸಲು ಆಗ ಸಾಧ್ಯವಾಗಲಿದೆ. ಇಂತಹ ವ್ಯವಸ್ಥೆ ರೂಪಿಸಲು ಬಿಬಿಎಂಪಿಯಿಂದರೂ 5 ಕೋಟಿ ವೆಚ್ಚವಾಗಿದೆ.

`ಮಾಹಿತಿ ತಂತ್ರಜ್ಞಾನ ವಿಭಾಗ ಅಭಿವೃದ್ಧಿಪಡಿಸಿದ ಜಿಐಎಸ್ ಆಸ್ತಿ ನಿರ್ವಹಣೆ ವ್ಯವಸ್ಥೆಯಲ್ಲಿ ಅಳವಡಿಸಿದ ವಿವರಗಳನ್ನು ಕಂದಾಯ ವಿಭಾಗದ ದಾಖಲೆ ಜತೆ ಆರು ಸುತ್ತುಗಳಲ್ಲಿ ತಾಳೆಮಾಡಿ ನೋಡಲಾಗಿದೆ. ಕೊರತೆಗಳನ್ನು ನೀಗಿಸಿಕೊಳ್ಳಲಾಗಿದೆ. `ಈಗಾಗಲೇ 14,14,450 ಆಸ್ತಿಗಳ ವಿವರಗಳು ನಿಖರವಾಗಿವೆ ಎಂಬುದನ್ನು ಖಚಿತ ಮಾಡಿಕೊಳ್ಳಲಾಗಿದೆ. ಉಳಿದ 2 ಲಕ್ಷ ಆಸ್ತಿಗಳ ವಿವರದ ಪರಿಶೀಲನೆ ಕಾರ್ಯ ನಡೆದಿದೆ' ಎಂದು ಶೇಷಾದ್ರಿ ಮಾಹಿತಿ ನೀಡುತ್ತಾರೆ.

`ಎಲ್ಲ ಆಸ್ತಿಗಳ ವಿವರ ತಾಳೆ ನೋಡುವ ಕೆಲಸ ಮುಗಿದ ಕೂಡಲೇ ಆಸ್ತಿಗಳ ಮಾಲೀಕರಿಗೆ ಹೊಸ ಪಿಐಡಿ ಸಂಖ್ಯೆ ವಿಷಯವಾಗಿ ಪತ್ರ ಬರೆದು ಮಾಹಿತಿ ನೀಡಲಾಗುತ್ತದೆ. ಹಳೆಯ ಪಿಐಡಿ ಸಂಖ್ಯೆಯಿಂದಲೂ ಆ ಆಸ್ತಿಯ ವಿವರ ಪಡೆಯುವಂತೆ ವ್ಯವಸ್ಥೆ ರೂಪಿಸಲಾಗಿದೆ' ಎಂದು ಅವರು ಹೇಳುತ್ತಾರೆ. `ಬ್ಯಾಂಕ್‌ಗಳ ಮೂಲಕ ತೆರಿಗೆ ತುಂಬಿಸಿಕೊಳ್ಳಲು ಚಿಂತನೆ ನಡೆದಿದೆ. ನಾಗರಿಕರಿಗೆ ಆ ಸೌಲಭ್ಯ ಸಿಕ್ಕರೆ ಸಹಾಯ ಕೇಂದ್ರಗಳಲ್ಲಿ ತೆರಿಗೆ ತುಂಬಿಸಿಕೊಳ್ಳುವ ಪ್ರಸಂಗ ಎದುರಾಗುವುದಿಲ್ಲ. ಸದ್ಯ ಕೌಂಟರ್‌ನಲ್ಲಿ ಕೂಡಬೇಕಾದ ಕಂದಾಯ ಸಿಬ್ಬಂದಿಯನ್ನು ಆಗ ಆಸ್ತಿಗಳ ನಿರಂತರ ಸಮೀಕ್ಷೆಗೆ ಬಳಸಿಕೊಳ್ಳಬಹುದು' ಎಂದು ವಿವರಿಸುತ್ತಾರೆ.

ತೆರಿಗೆ ನೀಡದ ಕಂದಾಯ ಬಡಾವಣೆಗಳು
`ಬಿಬಿಎಂಪಿ ವ್ಯಾಪ್ತಿಯ ಕಂದಾಯ ಭೂಮಿಯಲ್ಲಿ ಸುಮಾರು 350 ಬಡಾವಣೆಗಳು ನಿರ್ಮಾಣವಾದ ಅಂದಾಜಿದ್ದು, ಮೂರು ಲಕ್ಷ ಕಟ್ಟಡಗಳನ್ನು ತೆರಿಗೆ ವ್ಯಾಪ್ತಿಗೆ ತರಬೇಕಿದೆ. ಆದರೆ, ಸರ್ಕಾರದಿಂದ ಈ ಸಂಬಂಧ ಯಾವುದೇ ನಿರ್ದೇಶನ ಸಿಗದ ಕಾರಣ ಈ ಕೆಲಸ ನೆನಗುದಿಗೆ ಬಿದ್ದಿದೆ' ಎಂದು ಕಂದಾಯ ವಿಭಾಗದ ಅಧಿಕಾರಿಗಳು ಹೇಳುತ್ತಾರೆ.

`ಕಂದಾಯ ಭೂಮಿಯಲ್ಲಿ ಕಟ್ಟಲಾದ ಆಸ್ತಿಗಳಿಂದ ಅಭಿವೃದ್ಧಿ ಶುಲ್ಕ ಪಡೆಯದ ಕಾರಣ ಬಿಬಿಎಂಪಿಯಿಂದ ಭಾರಿ ಪ್ರಮಾಣದ ಆದಾಯ ಕೈ ತಪ್ಪುತ್ತಿದ್ದು, ಶುಲ್ಕವನ್ನು ತಕ್ಷಣದಿಂದ ತುಂಬಿಸಿಕೊಳ್ಳಬೇಕು' ಎನ್ನುವುದು ಬಿಬಿಎಂಪಿ ಬಹುತೇಕ ಸದಸ್ಯರ ಆಗ್ರಹವಾಗಿದೆ. ಪದ್ಮನಾಭ ರೆಡ್ಡಿ ಸೇರಿದಂತೆ ಹಲವರು ಕೌನ್ಸಿಲ್‌ನಲ್ಲಿ ಈ ವಿಷಯವಾಗಿ ಪ್ರಸ್ತಾಪ ಮಾಡಿದ್ದಾರೆ.ಮೂಲಸೌಕರ್ಯ ನೀಡಲಾಗುತ್ತಿದ್ದರೂ ಈ ಬಡಾವಣೆಗಳ ನಿವಾಸಿಗಳಿಂದ ಬಿಬಿಎಂಪಿ ತೆರಿಗೆ ಸಂಗ್ರಹ ಮಾಡದೆ ಸರ್ಕಾರದ ನಿರ್ಧಾರಕ್ಕಾಗಿ ಎದುರು ನೋಡುತ್ತಿದೆ.

ಎಸ್‌ಎಎಸ್‌ನಿಂದ ತೆರಿಗೆ ವಂಚನೆ
ಬಿಬಿಎಂಪಿ ವ್ಯಾಪ್ತಿಯಲ್ಲಿ 2008-09ರಲ್ಲಿ ಸ್ವಯಂಘೋಷಿತ ಆಸ್ತಿ ತೆರಿಗೆ ವ್ಯವಸ್ಥೆ (ಎಸ್‌ಎಎಸ್) ಜಾರಿಗೆ ಬಂದ ಮೇಲೆ ಕಂದಾಯ ಅಧಿಕಾರಿಗಳು ಆಸ್ತಿ ಸಮೀಕ್ಷೆ ಕಾರ್ಯವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ ಪರಿಣಾಮ ಪ್ರತಿಷ್ಠಿತ ವಾಣಿಜ್ಯ ಸಂಸ್ಥೆಗಳು ತಪ್ಪು ಮಾಹಿತಿ ಒದಗಿಸಿ ಕೋಟ್ಯಂತರ ರೂಪಾಯಿ ತೆರಿಗೆ ವಂಚನೆ ಮಾಡಿವೆ ಎಂಬ ದೂರುಗಳು ವ್ಯಾಪಕವಾಗಿವೆ.

ಪ್ರತಿಷ್ಠಿತ ಐಟಿ ಕಂಪೆನಿಗಳು, ಹೋಟೆಲ್‌ಗಳು, ವಾಣಿಜ್ಯ ಸಂಸ್ಥೆಗಳು ತೆರಿಗೆ ವಂಚನೆ ಮಾಡಿದ ಪ್ರಕರಣಗಳು ಬೆಳಕಿಗೆ ಬಂದಿರುವುದು ಆ ದೂರುಗಳಿಗೆ ಪುಷ್ಟಿ ನೀಡಿದೆ. `ಎಸ್‌ಎಎಸ್ ಜಾರಿಗೆ ಬಂದ ಬಳಿಕ ಪ್ರತಿ ವರ್ಷ ಶೇ 15ರಷ್ಟು ಆಸ್ತಿಗಳ ಪರಿಶೀಲನೆ ನಡೆಸಿದ್ದರೂ ಸಾವಿರಾರು ವಂಚನೆ ಪ್ರಕರಣಗಳು ಆಗಲೇ ಬೆಳಕಿಗೆ ಬರುತ್ತಿದ್ದವು' ಎಂದು ಹಿಂದಿನ ಆಯುಕ್ತ ಸಿದ್ದಯ್ಯ ಕೌನ್ಸಿಲ್ ಸಭೆಯಲ್ಲೇ ಹೇಳಿದ್ದರು.ಕಳೆದ ಆರು ತಿಂಗಳ ಅವಧಿಯಲ್ಲಿ ವಾಣಿಜ್ಯ ಕಟ್ಟಡಗಳ ವಿಸ್ತೀರ್ಣ ಪರಿಶೀಲನೆ ಆರಂಭಿಸಿದ ಮೇಲೆ ನೂರಾರು ಕೋಟಿ ಹೆಚ್ಚುವರಿ ಆದಾಯ ಬಿಬಿಎಂಪಿಗೆ ಬಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.