ADVERTISEMENT

ಇಲ್ಲಿ ಮೂಲ ಸೌಕರ್ಯದ್ದೇ ಕೊರತೆ!

ರೂಪಾ .ಕೆ.ಎಂ.
Published 19 ಮಾರ್ಚ್ 2012, 19:30 IST
Last Updated 19 ಮಾರ್ಚ್ 2012, 19:30 IST

ಬೆಂಗಳೂರು:  ನಗರದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಂದಾದ ಯಶವಂತಪುರ ರೈಲು ನಿಲ್ದಾಣದ ಪ್ರವೇಶ ದ್ವಾರವೇ ಪೂರ್ಣ ಗೊಂದಲಮಯ! ವಿವಿಧ ಊರುಗಳಿಗೆ ಪ್ರಯಾಣ ಬೆಳೆಸುವ ಪ್ರಯಾಣಿಕರಿಗೆ ಆರಂಭದಲ್ಲೇ ಪ್ರವೇಶ ದ್ವಾರ ಯಾವುದೆಂಬ ಗೊಂದಲ ಕಾಡದಿರದು.

ಸಿಟಿ ರೈಲು ನಿಲ್ದಾಣದಿಂದ 10.ಕಿ.ಮೀ, ವಿಮಾನ ನಿಲ್ದಾಣದಿಂದ 65 ಕಿ.ಮೀ. ಅಂತರದಲ್ಲಿ ಯಶವಂತಪುರ ರೈಲು ನಿಲ್ದಾಣವಿದೆ. ನಗರದ ಎರಡನೇ ದೊಡ್ಡ ರೈಲು ನಿಲ್ದಾಣವಾದ ಇಲ್ಲಿ ಮೂಲ ಸೌಕರ್ಯಗಳ ಕೊರತೆ ಮೇಲ್ನೋಟಕ್ಕೆ ಎದ್ದು ಕಾಣುತ್ತದೆ.

ನಿಲ್ದಾಣದಲ್ಲಿ ಪ್ರವೇಶ ದ್ವಾರದ ಗೊಂದಲದಿಂದ ಟಿಕೆಟ್ ಮುಂಗಡ ಕಾಯ್ದಿರಿಸುವಿಕೆ ಕೇಂದ್ರವು ಯಾವ ಕಡೆಯಿದೆ ಎಂಬುದು ಸರಿಯಾಗಿ ತಿಳಿಯದೇ ನಿಲ್ದಾಣದೊಳಗೆ ಪ್ರವೇಶ ಪಡೆಯುವ ಪ್ರಯಾಣಿಕ ಅನಾವಶ್ಯಕವಾಗಿ ದಂಡ ತೆರುವ ಪರಿಸ್ಥಿತಿ ಎದುರಾಗಿದೆ. ನಿಲ್ದಾಣಕ್ಕೆ ಎದುರುಗೊಳ್ಳುತ್ತಿದ್ದಂತೆಯೇ ದೂಳು ತುಂಬಿದ `ಯಶವಂತಪುರ ರೈಲು ನಿಲ್ದಾಣ~ ಎಂಬ ಫಲಕ ಪ್ರಯಾಣಿಕರನ್ನು ಸ್ವಾಗತಿಸುತ್ತದೆ. ನಿಲ್ದಾಣದ ಮುಂಭಾಗದಲ್ಲೇ ಕುಂಟುತ್ತಾ ಸಾಗುತ್ತಿದೆ ನಿಲ್ದಾಣಕ್ಕೆ ಸಂಬಂಧಪಟ್ಟ ಕಟ್ಟಡ ಕಾಮಗಾರಿ.

ತುಸು ಮುಂದಕ್ಕೆ ತೆರಳಿ ರೈಲ್ವೆ ಪ್ಲಾಟ್ ಫಾರಂಗಳಲ್ಲಿ ಕಣ್ಣು ಹಾಯಿಸಿದಲ್ಲೆಲ್ಲಾ ಕೊಳಕು ಮತ್ತು ಮಲಿನಗೊಂಡ ನೆಲ. ಪ್ರವೇಶದ್ವಾರದ ಸ್ವಲ್ಪ ದೂರ ನೆಲಕ್ಕೆ ಟೈಲ್ಸ್ ಅಳವಡಿಸಲಾಗಿದೆ. ಉಳಿದಂತೆ ಎಲ್ಲವೂ ಸಿಮೆಂಟಿನಿಂದ ನಿರ್ಮಾಣಗೊಂಡ ನೆಲ. ಅಲ್ಲಲ್ಲಿ ಕಿತ್ತು ಬಂದ ಸಿಮೆಂಟಿನ ನೆಲ ನಿಲ್ದಾಣದ ಘನತೆಗೆ ಹಿಡಿದ ಕನ್ನಡಿ.

ಪ್ಲಾಟ್‌ಫಾರಂಗಳಿಗೆ ಕೊಂಡಿಯಾಗಿರುವ ಮೇಲ್ಸೇತುವೆಯ  ಟೈಲ್ಸ್‌ಗಳು ಅತಿ ನಯವಾಗಿರುವುದರಿಂದ ನೀರು ಬಿದ್ದರೆ ಜಾರಿ ಬೀಳುವುದಂತೂ ಖಂಡಿತ. ಪ್ರಯಾಣಿಕರು ಈ ಮೇಲ್ಸೇತುವೆಯಿಂದ ಹಾದುಹೋಗಲು ತ್ರಾಸಪಡದೇ ರೈಲು ಹಳಿಗಳ ಮೇಲೆ ಒಂದೆಡೆಯಿಂದ ಮತ್ತೊಂದೆಡೆಗೆ ತೆರಳುವ ದೃಶ್ಯ ಸಾಮಾನ್ಯ.

ಇನ್ನು, ಅಂಗವಿಕಲರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದಂತೆ ಈ ಮೇಲ್ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ಗಾಲಿ ಕುರ್ಚಿಯಲ್ಲಿ ಬರುವ ಅಂಗವಿಕಲರು ಈ ಮೇಲ್ಸೇತುವೆಯನ್ನು ಹತ್ತಿ ಇಳಿಯುವುದಕ್ಕೆ ತೀವ್ರ ಪ್ರಯಾಸ ಪಡುತ್ತಾರೆ. 

ಸ್ವಚ್ಛವಿಲ್ಲದ ಶೌಚಾಲಯ: ರೈಲು ನಿಲ್ದಾಣಗಳಲ್ಲಿ ಸ್ವಚ್ಛತೆಯೆಂಬುದು ಸದಾ ದೂರದ ಮಾತು. ಇದಕ್ಕೆ ಯಶವಂತಪುರ ನಿಲ್ದಾಣವೂ ಹೊರತಲ್ಲ. ಪ್ರತಿ ಪ್ಲಾಟ್‌ಫಾರಂಗೆ ಒಂದರಂತಿರುವ ಈ ಶೌಚಾಲಯಗಳಿಗೆ ಭೇಟಿ ಕೊಟ್ಟರೆ ಕೆಟ್ಟ ವಾಸನೆ ಮೂಗಿಗೆ ಬಡಿಯುತ್ತದೆ.

ಎಲ್ಲಿ ಶೌಚಾಲಯವಿದೆ ಎಂಬುದರ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ಒದಗಿಸಲು ಫಲಕಗಳನ್ನು ನೇತು ಹಾಕಿಲ್ಲ. ಆದರೂ ಗಬ್ಬುವಾಸನೆಯಿಂದಲೇ ಶೌಚಾಲಯ ಎಲ್ಲಿದೆ ಎಂದು ಗೊತ್ತಾಗುತ್ತದೆ. ಪ್ರಯಾಣಿಕರಿಗಾಗಿ ವಿಶ್ರಾಂತಿ ಪಡೆಯಲು ಹವಾನಿಯಂತ್ರಿತ ಕೊಠಡಿಗಳಿವೆ. ಆದರೆ ಅಲ್ಲೂ ಕೂಡ ಶೌಚಾಲಯದ ಕೊಳಕು ಎದ್ದು ಕಾಣುತ್ತದೆ.

ಪಾರ್ಕಿಂಗ್ ಎಂಬುದಿಲ್ಲ: ಪ್ರವೇಶ ದ್ವಾರದ ಮುಂಭಾಗದಲ್ಲೇ ಅಡ್ಡಾದಿಡ್ಡಿಯಾಗಿ ದ್ವಿಚಕ್ರವಾಹನಗಳು, ರಿಕ್ಷಾಗಳು ನಿಂತಿರುತ್ತವೆ. ವಾಹನಗಳನ್ನು ನಿಲ್ಲಿಸಲು ಅವಕಾಶವೇ ಇಲ್ಲದಿರುವುದು ಪಾರ್ಕಿಂಗ್ ವ್ಯವಸ್ಥೆಯ ಲೋಪವನ್ನು ಎತ್ತಿಹಿಡಿಯುತ್ತದೆ. 

ಕಿಷ್ಕಿಂಧೆಯಂತಿರುವ ರಸ್ತೆಯ ಆಜು ಬಾಜಿನಲ್ಲೇ ವ್ಯಾಪಾರ ಮಾಡುವ ಬೀದಿ ವ್ಯಾಪಾರಿಗಳೂ ಸಹ ಈ ಅಸ್ತವ್ಯಸ್ತದ ಭಾಗವಾಗಿದ್ದಾರೆ. ಪ್ರಯಾಣಿಕರನ್ನು ಬೀಳ್ಕೊಡಲು ಮತ್ತು ಸ್ವಾಗತಿಸಲು ಬರುವ ಸಂಬಂಧಿಕರ ವಾಹನಗಳಿಗೆ ಸದ್ಯದ ಮಟ್ಟಿಗೆ ಜಾಗವಿಲ್ಲ.

ನಗರದ ವಿವಿಧೆಡೆಗೆ ಸಂಚರಿಸುವ ಬಿಎಂಟಿಸಿ ಬಸ್ಸುಗಳು ಕೂಡ ರೈಲು ನಿಲ್ದಾಣ ಮುಂದೆ ಅವ್ಯವಸ್ಥಿತವಾಗಿಯೇ ನಿಂತಿರುತ್ತವೆ. ನಿಲ್ದಾಣಕ್ಕೆ ಆಗಮಿಸುವ ವೃದ್ಧರು, ಮಕ್ಕಳು, ಅಂಗವಿಕಲರು ಮತ್ತು ರೋಗಿಗಳಿಗಾಗಿ ತುರ್ತು ಚಿಕಿತ್ಸೆಯ ಕೇಂದ್ರದ ಸೌಲಭ್ಯವು ಕಂಡು ಬರುವುದಿಲ್ಲ.

ಸಾರ್ವಜನಿಕರ ಪಾತ್ರ: ಸರ್ಕಾರ ಅದೆಷ್ಟೇ ಸೌಕರ್ಯ ಪೂರೈಸಿದರೂ ಅದನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಸಾರ್ವಜನಿಕರ ಆದ್ಯ ಕರ್ತವ್ಯ. ಆದರೆ, ಯಶವಂತಪುರ ರೈಲು ನಿಲ್ದಾಣದಲ್ಲಿ ಈ ಕರ್ತವ್ಯ ಲೋಪವಾಗಿರುವುದು ಪ್ರತಿ ಹಂತದಲ್ಲೂ ಕಂಡು ಬರುತ್ತದೆ. ಅಲ್ಲಲ್ಲಿ ಉಗುಳಿರುವುದು, ಮಲ ಮೂತ್ರ ವಿಸರ್ಜನೆ, ತ್ಯಾಜ್ಯ ರಾಶಿಯಿಂದ ಪ್ರಯಾಣಿಕರು ಕಿರಿ-ಕಿರಿ ಅನುಭವಿಸುತ್ತಾರೆ.

 `ಪ್ರತಿ ದಿನ ಶೌಚಾಲಯ, ವಿಶ್ರಾಂತಿ ಕೊಠಡಿ ಹಾಗೂ ದಿನ ಬಿಟ್ಟು ದಿನ ಪ್ಲಾಟ್ ಫಾರಂಗಳನ್ನು ಶುಚಿಗೊಳಿಸುತ್ತೇವೆ. ಆದರೆ ಸಾರ್ವಜನಿಕರ ನಿರ್ಲಕ್ಷ್ಯ ಒಟ್ಟು ದುರಾವಸ್ಥೆಗೆ ಕಾರಣವಾಗಿದೆ~ ಎಂದು ಜಾಡಾಮಾಲಿ ಪಳನಿ ತಮಿಳು ಮಿಶ್ರಿತ ಕನ್ನಡದಲ್ಲಿ ಹೇಳಿದರು.   

                                                             =====

ರೈಲು ಇಲಾಖೆಯು ದೇಶದಲ್ಲೇ ದೊಡ್ಡ ಮಟ್ಟದ ಇಲಾಖೆ. ಆದರೆ ಯಶವಂತಪುರದಲ್ಲಿರುವ ರೈಲು ನಿಲ್ದಾಣವು ಬರೀ ಅವ್ಯವಸ್ಥೆ ಯಾಗಿದ್ದು, ಶುಚಿಯಾಗಿಡಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. 
-ನಳಿನಿ (ಗೃಹಿಣಿ)

ADVERTISEMENT

ಸರ್ಕಾರವು ಸ್ಪೀಡ್ ರೈಲುಗಳನ್ನು ನಿರ್ಮಿಸಲು ಮುಂದಾಗುತ್ತದೆ. ಆದರೆ ಇರುವ ರೈಲು ನಿಲ್ದಾಣದಲ್ಲಿ ಮೂಲ ಸೌಕರ್ಯಗಳನ್ನು ಪೂರೈಸುವಲ್ಲಿ ಎಡವಿದೆ. ಇತರೆ ದೇಶಗಳ ರೈಲು ನಿಲ್ದಾಣದ ಮಾದರಿಯನ್ನು ಗಮನಿಸಿ ಮೂಲ ಸೌಕರ್ಯಕ್ಕೆ ಆದ್ಯತೆ ನೀಡಬೇಕಿದೆ.
- ರಮೇಶ್ (ಅಂಗಡಿ ಮಾಲೀಕ)

ವಿದೇಶಗಳಲ್ಲಿರುವ ರೈಲು ನಿಲ್ದಾಣದಲ್ಲಿ ಯಂತ್ರ ಚಾಲಿತ ಟಿಕೆಟ್ ವ್ಯವಸ್ಥೆ, ಸಹಾಯವಾಣಿ ಸೇರಿದಂತೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿರುತ್ತದೆ. ಆದರೆ ಬೆಂಗಳೂರಿನಲ್ಲಿರುವ ರೈಲು ನಿಲ್ದಾಣದಲ್ಲಿ ಮೂಲ ಸೌಕರ್ಯಕ್ಕೆ ಕೊರತೆಯಿದೆ. ಉಳಿದಂತೆ ಇರುವ ಮೂಲಸೌಕರ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಾಗರಿಕರ ಜವಾಬ್ದಾರಿಯೂ ಹೆಚ್ಚೇ ಇದೆ.
 - ರಶ್ಮಿ (ಉದ್ಯೋಗಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.