ADVERTISEMENT

ಈಶ್ವರಪ್ಪ ವಿರುದ್ಧ ಮೊಕದ್ದಮೆಗೆ ಅನುಮತಿ ಅಗತ್ಯವಿಲ್ಲ: ಡಿಪಿಎಆರ್‌

​ಪ್ರಜಾವಾಣಿ ವಾರ್ತೆ
Published 3 ಜನವರಿ 2014, 20:07 IST
Last Updated 3 ಜನವರಿ 2014, 20:07 IST

ಬೆಂಗಳೂರು: ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಅವರ ವಿರುದ್ಧ ಖಾಸಗಿ ದೂರು ದಾಖಲಿಸಲು ಈಗ ಸಕ್ಷಮ ಪ್ರಾಧಿಕಾರದ ಅನುಮತಿ ಅಗತ್ಯ ಇಲ್ಲ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಸ್ಪಷ್ಟಪಡಿಸಿದೆ.

ಶಿವಮೊಗ್ಗದ ವಕೀಲ ಬಿ.ವಿನೋದ್ ಅವರು ಈ ಹಿಂದೆ ಈಶ್ವರಪ್ಪ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಈ ಕುರಿತು  ನ್ಯಾಯಾಲಯದ ಆದೇಶದ ಮೇಲೆ  ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ತನಿಖೆಯನ್ನೂ ಆರಂಭಿಸಿದ್ದರು.

ಆದರೆ, ತನಿಖೆ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ವಿನೋದ್‌ ಅವರು, ಈಶ್ವರಪ್ಪ ವಿರುದ್ಧ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಲು ಅನುಮತಿ ಕೋರಿ ರಾಜ್ಯಪಾಲ ಎಚ್‌.ಆರ್‌.ಭಾರದ್ವಾಜ್‌ ಅವರಿಗೆ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಡಿಸೆಂಬರ್‌ 5ರಂದು ಡಿಪಿಎಆರ್‌ಗೆ ವರ್ಗಾಯಿಸಿದ್ದ ರಾಜ್ಯಪಾಲರು, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.

ಡಿ.28ರಂದು ವಿನೋದ್‌ ಅವರಿಗೆ ಪತ್ರ ಬರೆದಿರುವ ಡಿಪಿಎಆರ್‌ ಅಧೀನ ಕಾರ್ಯದರ್ಶಿ ಎಸ್‌.ನಾಗರಾಜಪ್ಪ, ‘ಈಶ್ವರಪ್ಪ ಅವರು ಈಗ ಸಾರ್ವಜನಿಕ ಸೇವಕರಲ್ಲ. ಆದ್ದರಿಂದ ಅವರ ವಿರುದ್ಧ ಮೊಕದ್ದಮೆ ದಾಖಲಿಸಲು ಅನುಮತಿ ನೀಡುವ ಅಗತ್ಯ ಇರುವುದಿಲ್ಲ. ಅರ್ಜಿದಾರರು ಕಾನೂನಿನ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಬಹುದು’ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.