ADVERTISEMENT

ಉತ್ತರ ಕರ್ನಾಟಕ ಕೊಡುಗೆ:ಕಂಬಾರ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2011, 19:30 IST
Last Updated 6 ಅಕ್ಟೋಬರ್ 2011, 19:30 IST

ಬೆಂಗಳೂರು: `ಸ್ವಾತಂತ್ರ್ಯ ಚಳವಳಿ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಉತ್ತರ ಕರ್ನಾಟಕದ ಕೊಡುಗೆ ಅಪಾರ~ ಎಂದು ನಾಟಕಕಾರ ಡಾ.ಚಂದ್ರಶೇಖರ ಕಂಬಾರ ಇಲ್ಲಿ ಪ್ರಶಂಸಿದರು.

ಉತ್ತರ ಕರ್ನಾಟಕ ನಾಗರಿಕರ ಕ್ಷೇಮಾಭಿವೃದ್ಧಿ ಸಂಘವು ಬಸವೇಶ್ವರ ಪ್ರೌಢಶಾಲೆಯ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ `ಬನ್ನಿ- ಬಂಗಾರ- 2011~  ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

`ಉತ್ತರ ಕರ್ನಾಟಕ ಜನರಲ್ಲಿ ಹೋರಾಟದ ಮನೋಭಾವ ಹೆಚ್ಚಾಗಿದೆ. ಹಾಗಾಗಿ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಈ ಭಾಗದ ಜನತೆ ಕರ್ನಾಟಕದ ಬಗೆಗಿನ ಯಾವುದೇ ಹೋರಾಟಪವಿತ್ರ ಕೆಲಸ ಎಂದು ಭಾವಿಸಿದ್ದಾರೆ~ ಎಂದರು.

`ಸಂಗ್ಯಾಬಾಳ್ಯ ನಾಟಕ ಕುರಿತು, `ಅದೊಂದು ಕೇವಲ ನಾಟಕ ಮಾತ್ರವಾಗಿರಲಿಲ್ಲ. ಸ್ವಾತಂತ್ರ್ಯ ಚಳವಳಿಯನ್ನು ಪ್ರೇರೇಪಿಸುವ ಶಕ್ತಿ ಹಾಗೂ ಅಂಶಗಳು ಅದರಲ್ಲಿ ಅಡಕವಾಗಿದ್ದವು. ಈ ನಾಟಕ ಬ್ರಿಟಿಷರ ನಿದ್ರೆ ಭಂಗ ಮಾಡುವುಲ್ಲದೆ, ನಾಟಕ ಪ್ರದರ್ಶನ ರದ್ದು ಮಾಡುವಷ್ಟು ಬ್ರಿಟಿಷರ ಮೇಲೆ ಪ್ರಭಾವ ಬೀರಿತ್ತು~ ಎಂದು ನೆನೆದರು.

ಉತ್ತರ ಕರ್ನಾಟಕ ಸಂಸ್ಕೃತಿಗೆ ತನ್ನದೇ ವಿಶೇಷತೆ ಇದೆ. ದೂರದೂರಿಂದ ಬಂದು ನಗರದಲ್ಲಿ ನೆಲೆಸಿರುವ ಜನರು ಇಂದಿಗೂ ತಮ್ಮ  ಸಂಸ್ಕೃತಿ ಉಳಿಸಿಕೊಂಡಿರುವುದು ಹೆಮ್ಮೆಯ ಸಂಗತಿ. ಯಾವುದೇ ಭಾಗದ ಸಂಸ್ಕೃತಿ ಇರಲಿ, ಆ ಸಂಸ್ಕೃತಿ ಆಚರಣೆಗೆ ತಂದು ಬೆಳೆಸುವ ಅಗತ್ಯತೆ ಇದೆ ಅಭಿಪ್ರಾಯಪಟ್ಟರು.

ಕನ್ನಡ ತಂತ್ರಾಂಶದ ಅಭಿವೃದ್ಧಿಗೆ ಹಿಂದಿನ ಮುಖ್ಯಮಂತ್ರಿಗಳು ಹೆಚ್ಚಿನ ಆಸಕ್ತಿ ತೋರಿ ಕೆಲಸ ಮಾಡಿದ್ದರು. ಈ ಬಗ್ಗೆ ಇಂದಿನ ಸರ್ಕಾರ ಭರವಸೆ ನೀಡು ್ತ ಬಂದಿದೆ. ಹೋರಾಟ ಮಾಡಿಯಾದರೂ ತಂತ್ರಾಂಶ ಅಭಿವೃದ್ಧಿಪಡಿಸಲು ಮುಂದಾಗುತ್ತೇನೆ ಎಂದರು.

ವಿಧಾನ ಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ, `ಕಂಬಾರರು ದನಿಯಿಲ್ಲದ ವರ್ಗಕ್ಕೆ ಧ್ವನಿಯಾಗಿದ್ದರು. ಕನ್ನಡ ನಾಡು, ನುಡಿ ಹಾಗೂ ಸಾಹಿತ್ಯಕ್ಕೆ ನೀಡಿದ ಕೊಡುಗೆಗೆ ಈ ಕೀರ್ತಿ ಲಭಿಸಿದೆ~ ಎಂದು ನುಡಿದರು.

ಇದೇ ವೇಳೆ ಡಾ.ಚಂದ್ರಶೇಖರ ಕಂಬಾರ ಹಾಗೂ ಪತ್ನಿ ಸತ್ಯಭಾಮ ಕಂಬಾರ ಅವರನ್ನು ಸನ್ಮಾನಿಸಲಾಯಿತು. ವಿಜಯದಶಮಿ ಅಂಗವಾಗಿ ಬನ್ನಿ ಪತ್ರೆ ವಿನಿಮಯ ಮಾಡಿಕೊಳ್ಳಲುವ ಮೂಲಕ ವಿಜಯದಶಮಿಯನ್ನು ಸಾಂಪ್ರದಾಯಿಕವಾಗಿ ಆಚರಿಸಿದರು.

ಸಂಘದ ಅಧ್ಯಕ್ಷ ಡಾ.ಚಂದ್ರಶೇಖರ ಸಾಂಬ್ರಾಣಿ, ಉಪಾಧ್ಯಕ್ಷ ಚಂದ್ರಶೇಖರ ಶಾಂತಗಿರಿ, ಪ್ರಧಾನ ಕಾರ್ಯದರ್ಶಿ ಭೀಮರಾವ ಅವಟಿ, ಖಜಾಂಚಿ ವೀರಣ್ಣ ತಾಂಡೂರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.