ADVERTISEMENT

ಉತ್ತರ– ಕೇಂದ್ರದಲ್ಲಿ ‘ಹಿತಶತ್ರು’ಗಳ ಕಾಟ!

ಬಿಜೆಪಿಗೆ ಪಕ್ಷದ ನಾಯಕರೇ ಒಳ ಏಟು ನೀಡುವ ಆತಂಕ, ಉತ್ತರದಲ್ಲಿ ದೇವೇಗೌಡರ ಸ್ಪರ್ಧೆ ಕುತೂಹಲ

​ಪ್ರಜಾವಾಣಿ ವಾರ್ತೆ
Published 3 ಮೇ 2019, 14:36 IST
Last Updated 3 ಮೇ 2019, 14:36 IST
   

ಮುಖ್ಯಾಂಶಗಳು

*ಸರವಣ–ಗೋಪಿ ಸೇರ್ಪಡೆಗೆ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಕೋಪ

* ಬೆಂಗಳೂರು ಕೇಂದ್ರ ಹಾಗೂ ಉತ್ತರ ಕ್ಷೇತ್ರದತ್ತ ಸುಳಿಯದ ಕಟ್ಟಾ

ADVERTISEMENT

* ಎಸ್.ಸುರೇಶ್‌ ಕುಮಾರ್‌, ಅರವಿಂದ ಲಿಂಬಾವಳಿ ನಡೆಗೂ ಆಕ್ಷೇಪ

ಬೆಂಗಳೂರು: ಬೆಂಗಳೂರು ಕೇಂದ್ರ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಪಕ್ಷದ ನಾಯಕರೇ ಒಳ ಏಟು ನೀಡುವ ಆತಂಕ ಶುರುವಾಗಿದೆ.

ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ನಿರ್ಧರಿಸಲಾಗಿದೆ. ಇಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಕಣಕ್ಕೆ ಇಳಿಯಬೇಕು ಎಂದು ಇಬ್ಬರು ಶಾಸಕರು ಹಾಗೂ ಪಾಲಿಕೆ ಸದಸ್ಯರ ಒತ್ತಾಯ. ಆದರೆ, ಬೆಂಗಳೂರು ಉತ್ತರ ಅಥವಾ ತುಮಕೂರು ಕ್ಷೇತ್ರಗಳ ಮಧ್ಯೆ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲದಲ್ಲಿ ಗೌಡರಿದ್ದಾರೆ. ಬಿಜೆಪಿಯಿಂದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಕಣಕ್ಕಿಳಿಯಲಿದ್ದು, ಪ್ರಚಾರ ಶುರು ಮಾಡಿದ್ದಾರೆ. ಈ ಕ್ಷೇತ್ರ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿದ್ದು, ಬಿಜೆಪಿ ಶಾಸಕರು ಇರುವುದು ಒಂದು ಕ್ಷೇತ್ರದಲ್ಲಿ ಮಾತ್ರ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಸೋಲಲು ಕೆಲವು ಕಾರ್ಪೊರೇಟರ್‌ಗಳೇ ಕಾರಣ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ನಾಯಕರಿಗೆ ಅವರು ಮನವಿ ಮಾಡಿದ್ದರು. ಶಾಸಕ ಆರ್.ಅಶೋಕ್‌ ಹಸ್ತಕ್ಷೇಪದಿಂದ ಕ್ರಮ ಕೈಗೊಂಡಿಲ್ಲ ಎಂದು ಅವರು ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದರು. ಸದಾನಂದ ಗೌಡರು ಉಡುಪಿ–ಚಿಕ್ಕಮಗಳೂರು ಕ್ಷೇತ್ರಕ್ಕೆ ವಲಸೆ ಹೋಗಲಿದ್ದಾರೆ ಎಂಬ ಸುದ್ದಿ ಪಕ್ಷದ ವಲಯದಲ್ಲಿ ಹಬ್ಬಿತ್ತು. ‘ಈ ಸುದ್ದಿ ಹಬ್ಬಿಸುತ್ತಿರುವವರು ದೇಶದ್ರೋಹಿಗಳು’ ಎಂದು ಸದಾನಂದ ಗೌಡ ತೀಕ್ಷ್ಮವಾಗಿ ಪ್ರತಿಕ್ರಿಯೆ ನೀಡಿದ್ದರು. ಗೌಡರು ಹಸನ್ಮುಖರಾಗಿ ಪ್ರಚಾರ ನಡೆಸುತ್ತಿದ್ದರೂ ಪಕ್ಷದೊಳಗಿನ 'ಹಿತಶತ್ರು'ಗಳಿಂದ ಹಿನ್ನಡೆಯಾಗಬಹುದು ಎಂಬ ಆತಂಕ ಅವರನ್ನು ಕಾಡುತ್ತಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.

ಈ ಹಿಂದೆ ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಸಚಿವರೂ ಆಗಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು 2018ರ ಚುನಾವಣೆಯಲ್ಲಿ ಶಿವಾಜಿನಗರ ಕ್ಷೇತ್ರದಲ್ಲಿ ಸ್ಪರ್ಧಿಸಿ ಪರಾಜಯಗೊಂಡಿದ್ದರು. ಚುನಾವಣೆಗೆ ಕೆಲವೇ ದಿನಗಳು ಇರುವಾಗ ಕಾಂಗ್ರೆಸ್‌ಗೆ ಸೇರ್ಪಡೆಯಾದ ಪಾಲಿಕೆಯ ಮಾಜಿ ಸದಸ್ಯರಾದ ಗೋಪಿ ಹಾಗೂ ಸರವಣ ಸೋಲಿಗೆ ಕಾರಣ ಎಂದು ಕಟ್ಟಾ ಆಪ್ತರಲ್ಲಿ ಹೇಳಿಕೊಂಡಿದ್ದರು. ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ದೃಷ್ಟಿಯಿಂದ ಸಂಸದ ಪಿ.ಸಿ.ಮೋಹನ್‌ ಹಾಗೂ ಶಾಸಕ ಆರ್‌. ಅಶೋಕ್‌ ಅವರು ಗೋಪಿ ಹಾಗೂ ಸರವಣ ಅವರನ್ನು ಸೇರಿಸಿಕೊಳ್ಳಲು ಸಿದ್ಧತೆ ನಡೆಸಿದ್ದರು.

ಈ ವಿಷಯ ತಿಳಿದು ಕಟ್ಟಾ ಕೆಂಡಾಮಂಡಲರಾಗಿದ್ದರು. ಅವರಿಬ್ಬರು ಸೇರ್ಪಡೆಯಾದರೆ ನನಗೆ ಏನು ಮಾಡಬೇಕು ಎಂಬುದು ಗೊತ್ತಿದೆ ಎಂದು ಗುಟುರು ಹಾಕಿದ್ದರು. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಉಸ್ತುವಾರಿಯನ್ನು ಕಟ್ಟಾ ಅವರಿಗೆ ಪಕ್ಷ ವಹಿಸಿದೆ. ರಾಮನಗರದಲ್ಲಿ ನಡೆಯಬೇಕಿದ್ದ ಸಭೆಯನ್ನು ಸ್ವಪಕ್ಷೀಯರ ಮೇಲಿನ ಕೋಪದಿಂದ ರದ್ದು ಮಾಡಿದ್ದರು. ಕಳೆದ ನಾಲ್ಕೈದು ದಿನಗಳಿಂದ ಆ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಆದರೆ, ಬೆಂಗಳೂರು ಕೇಂದ್ರ ಹಾಗೂ ಉತ್ತರ ಕ್ಷೇತ್ರದ ಸಹವಾಸವೇ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಅವರ ಬೆಂಬಲಿಗ ಕಾರ್ಪೊರೇಟರ್‌ಗಳು ಇದೇ ನಿಲುವಿಗೆ ಬಂದಿದ್ದಾರೆ ಎಂದು ಗೊತ್ತಾಗಿದೆ. ಸುಬ್ರಹ್ಮಣ್ಯ ನಾಯ್ಡು ಅವರಿಗೆ ಶಿವಾಜಿನಗರ ಹಾಗೂ ಹೆಬ್ಬಾಳ ಕ್ಷೇತ್ರದಲ್ಲಿ ಉತ್ತಮ ಹಿಡಿತ ಇದೆ. ಅವರು ಮೌನಕ್ಕೆ ಶರಣಾದರೆ ಪಕ್ಷಕ್ಕೆ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿದ್ದು, ಐದರಲ್ಲಿ ಕಾಂಗ್ರೆಸ್‌ ಹಾಗೂ ಮೂರರಲ್ಲಿ ಬಿಜೆಪಿ ಶಾಸಕರಿದ್ದಾರೆ. ಶಾಸಕರಾದ ಎಸ್‌.ಸುರೇಶ್‌ ಕುಮಾರ್‌ ಹಾಗೂ ಅರವಿಂದ ಲಿಂಬಾವಳಿ ಅವರು ಇದುವರೆಗೂ ಚುನಾವಣಾ ಪ್ರಚಾರದಲ್ಲಿ ಸಕ್ರಿಯರಾಗಿಲ್ಲ ಎಂಬ ಆಕ್ಷೇಪ ಪಕ್ಷದಲ್ಲೇ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.