ADVERTISEMENT

ಉಸಿರುಗಟ್ಟಿ ಮೂವರು ಕಾರ್ಮಿಕರ ಸಾವು

ಆಯಿಲ್ ತುಂಬಿಕೊಳ್ಳಲು ಟ್ಯಾಂಕ್‌ಗೆ ಇಳಿದಿದ್ದಾಗ ಅವಘಡ

​ಪ್ರಜಾವಾಣಿ ವಾರ್ತೆ
Published 10 ಜನವರಿ 2013, 20:08 IST
Last Updated 10 ಜನವರಿ 2013, 20:08 IST
ಮೃತ ಕಾರ್ಮಿಕರು ಕೆಲಸ ಮಾಡುತ್ತಿದ್ದ ಟ್ಯಾಂಕ್‌ನ ಹೊರ ನೋಟ
ಮೃತ ಕಾರ್ಮಿಕರು ಕೆಲಸ ಮಾಡುತ್ತಿದ್ದ ಟ್ಯಾಂಕ್‌ನ ಹೊರ ನೋಟ   

ಬೆಂಗಳೂರು: ಆಯಿಲ್ (ತೈಲ) ತುಂಬಿಕೊಳ್ಳಲು ಟ್ಯಾಂಕ್‌ಗೆ ಇಳಿದಿದ್ದ ಮೂವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿರುವ ದಾರುಣ ಘಟನೆ ನಗರದ ಪೀಣ್ಯದಲ್ಲಿ ಬುಧವಾರ ರಾತ್ರಿ ನಡೆದಿದೆ.

ಪೀಣ್ಯ ಕೈಗಾರಿಕಾ ಪ್ರದೇಶ ಒಂದನೇ ಹಂತದ ಮೂರನೇ ಅಡ್ಡರಸ್ತೆಯಲ್ಲಿರುವ `ಹೈಟೆಕ್ ಫೋರ್ಜಿಂಗ್ಸ್ ಬೆಂಗಳೂರು ಪ್ರೈವೇಟ್ ಲಿಮಿಟೆಡ್' ಕಾರ್ಖಾನೆಯಲ್ಲಿ ಕಾರ್ಮಿಕರಾಗಿದ್ದ ಕಮ್ಮಗೊಂಡನಹಳ್ಳಿಯ ನಾಗರಾಜ್ (26), ಅವರ ತಮ್ಮ ಕೃಷ್ಣ (24) ಮತ್ತು ಜಾಲಹಳ್ಳಿ ಬಳಿಯ ಸಿದ್ದಾರ್ಥನಗರದ ಶ್ರೀನಿವಾಸ್ (20) ಮೃತಪಟ್ಟವರು. ಶ್ರೀನಿವಾಸ್, ಆಂಧ್ರಪ್ರದೇಶ ಮೂಲದವರು.

ಆ ಕಾರ್ಖಾನೆ ಆರಂಭವಾಗಿ ಸುಮಾರು 18 ವರ್ಷಗಳಾಗಿವೆ. ಕಾರ್ಖಾನೆಯಲ್ಲಿ ಉಕ್ಕು ಮತ್ತು ಕಬ್ಬಿಣ ಸಾಮಗ್ರಿಗಳು, ಟರ್ಬೈನ್ ಹಾಗೂ ಕೊಳವೆ ಬಾವಿ ಕೊರೆಯುವ ಲಾರಿಯ ಬಿಡಿ ಭಾಗಗಳನ್ನು ತಯಾರಿಸಲಾಗುತ್ತದೆ. ಮೃತ ಕಾರ್ಮಿಕರು ಅಲ್ಲಿ ನಾಲ್ಕೈದು ವರ್ಷಗಳಿಂದ ಕೆಲಸ ಮಾಡುತ್ತಿದ್ದರು.

ಕಾರ್ಖಾನೆಯ ಒಳ ಭಾಗದಲ್ಲಿ ಸುಮಾರು 15 ಅಡಿ ಆಳದ ಟ್ಯಾಂಕ್ ನಿರ್ಮಿಸಿ, ಫರ್ನೆಸ್ ಆಯಿಲ್ (ಕುಲುಮೆ ತೈಲ) ಸಂಗ್ರಹಿಸಲಾಗಿತ್ತು. ಪಂಪ್ ಮೂಲಕ ಫರ್ನೆಸ್ ತೈಲವನ್ನು ಕಾರ್ಖಾನೆಯ ಯಂತ್ರಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ಬುಧವಾರ ಬೆಳಿಗ್ಗೆ ಪಂಪ್ ಕೆಟ್ಟು ಹೋಗಿದ್ದ ಕಾರಣ ಕಾರ್ಖಾನೆಯ ವ್ಯವಸ್ಥಾಪಕ ಸುರೇಶ್ ಅವರು ಫರ್ನೆಸ್ ತೈಲವನ್ನು ಟ್ಯಾಂಕ್‌ನಿಂದ ತುಂಬಿ ಯಂತ್ರಗಳಿಗೆ ಹಾಕುವಂತೆ ಕಾರ್ಮಿಕರಿಗೆ ಸೂಚಿಸಿದ್ದರು. ಅಂತೆಯೇ ಆ ಮೂರು ಮಂದಿ ಫರ್ನೆಸ್ ತೈಲವನ್ನು ತುಂಬಿಕೊಳ್ಳುವ ಉದ್ದೇಶಕ್ಕಾಗಿ ಟ್ಯಾಂಕ್‌ಗೆ ಇಳಿದಿದ್ದಾಗ ರಾತ್ರಿ 12 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ.

ಮೊದಲು ಟ್ಯಾಂಕ್‌ಗೆ ಇಳಿದ ಶ್ರೀನಿವಾಸ್, ತುಂಬಾ ಹೊತ್ತಾದರೂ ಟ್ಯಾಂಕ್‌ನಿಂದ ಹೊರ ಬಂದಿಲ್ಲ. ಇದರಿಂದ ಗಾಬರಿಯಾದ ನಾಗರಾಜ್ ಹಾಗೂ ಕೃಷ್ಣ ಅವರು ಟ್ಯಾಂಕ್‌ಗೆ ಇಳಿದಿದ್ದಾರೆ. ನಂತರ ಅವರು ಸಹ ಟ್ಯಾಂಕ್‌ನಿಂದ ಹೊರ ಬರಲಿಲ್ಲ. ಈ ವೇಳೆ ಸ್ಥಳದಲ್ಲೇ ಇದ್ದ ಮತ್ತೊಬ್ಬ ಕಾರ್ಮಿಕ ಮರಿಯದಾಸ್ ಹಾಗೂ ಸೆಕ್ಯುರಿಟಿ ಗಾರ್ಡ್ ವಿನೋದ್‌ಕುಮಾರ್ ಅವರು ಅನುಮಾನಗೊಂಡು ಟ್ಯಾಂಕ್‌ನ ಬಳಿ ಹೋಗಿ ನೋಡಿದಾಗ, ಆ ಮೂರೂ ಮಂದಿ ತೈಲದೊಳಗೆ ಬಿದ್ದಿರುವುದು ಗೊತ್ತಾಗಿದೆ. ನಂತರ ಮರಿಯದಾಸ್ ಮತ್ತು ವಿನೋದ್‌ಕುಮಾರ್, ಪೊಲೀಸ್ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಬರುವ ವೇಳೆಗೆ ಆ ಮೂವರು ಉಸಿರುಗಟ್ಟಿ ಟ್ಯಾಂಕ್‌ನಲ್ಲೇ ಮೃತಪಟ್ಟಿದ್ದಾರೆ.

`ಮೊದಲು ಟ್ಯಾಂಕ್‌ಗೆ ಇಳಿದ ಶ್ರೀನಿವಾಸ್, ಏಳೆಂಟು ನಿಮಿಷ ಕಳೆದರೂ ಟ್ಯಾಂಕ್‌ನಿಂದ ಹೊರಗೆ ಬರಲಿಲ್ಲ. ಇದರಿಂದಾಗಿ ನಾಗರಾಜ್ ಹಾಗೂ ಕೃಷ್ಣ ಅವರು ಸಹ ಟ್ಯಾಂಕ್‌ನ ಒಳಗಿಳಿದು ಪರಿಶೀಲಿಸಲು ಹೋದರು. ಈ ವೇಳೆ ನಾನು ಪಕ್ಕದಲ್ಲೇ ಯಂತ್ರವೊಂದರ ಬಳಿ ಕೆಲಸ ಮಾಡುತ್ತಿದ್ದೆ. ಆ ಮೂರು ಮಂದಿ ಟ್ಯಾಂಕ್‌ನಿಂದ ಹೊರಗೆ ಬಾರದಿದ್ದರಿಂದ ಅನುಮಾನಗೊಂಡು, ಟ್ಯಾಂಕ್‌ನ ಬಳಿ ಹೋಗಿ ನೋಡಿದಾಗ ಅವರು ತೈಲದೊಳಗೆ ಬಿದ್ದಿರುವುದು ಗೊತ್ತಾಯಿತು' ಎಂದು ಘಟನೆಯ ಪ್ರತ್ಯಕ್ಷದರ್ಶಿ ಮರಿಯದಾಸ್ ಹೇಳಿದರು.

`ಕಾರ್ಖಾನೆಯ ಆಡಳಿತ ಮಂಡಳಿಯವರು ರಾತ್ರಿ ನನಗೆ ಕರೆ ಮಾಡಿ ಮಗನಿಗೆ ಅಪಘಾತವಾಗಿದೆ ಎಂದು ಹೇಳಿದರು. ವಿಷಯ ತಿಳಿದು ಆಸ್ಪತ್ರೆಗೆ ಹೋದಾಗ ಆತ ಸಾವನ್ನಪ್ಪಿರುವುದು ಗೊತ್ತಾಯಿತು' ಎಂದು ಶ್ರೀನಿವಾಸ್ ತಂದೆ ನರಸಪ್ಪ ತಿಳಿಸಿದರು.

`ಅಣ್ಣಂದಿರಾದ ನಾಗರಾಜ್ ಮತ್ತು ಕೃಷ್ಣ, ಇಡೀ ಕುಟುಂಬಕ್ಕೆ ಆಧಾರವಾಗಿದ್ದರು. ಅವರ ದುಡಿಮೆಯಿಂದಲೇ ಜೀವನ ಸಾಗಿಸುತ್ತಿದ್ದೆವು. ಅವರ ಸಾವಿನಿಂದ ದಿಕ್ಕು ತೋಚದಂತಾಗಿದೆ' ಎಂದು ಜಯಂತಿ ಅವರು ರೋದಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಿ ಶವಗಳನ್ನು ಕುಟುಂಬ ಸದಸ್ಯರಿಗೆ ಒಪ್ಪಿಸಲಾಗಿದೆ. ಘಟನೆ ಸಂಬಂಧ ಪೀಣ್ಯ ಪೊಲೀಸರು ಕಾರ್ಖಾನೆಯ ಮಾಲೀಕ ರಾಮ್‌ಬಾಬು ಮತ್ತು ವ್ಯವಸ್ಥಾಪಕ ಸುರೇಶ್ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸುರೇಶ್ ಅವರನ್ನು ಬಂಧಿಸಲಾಗಿದೆ.

ಆಮ್ಲಜನಕ ಕೊರತೆ
`ಫರ್ನೆಸ್ ತೈಲವನ್ನು ಯಂತ್ರಗಳಲ್ಲಿ ಶಾಖ ನಿರೋಧಕವಾಗಿ ಬಳಸಲಾಗುತ್ತದೆ. ಆ ಕಾರ್ಖಾನೆಯ ಒಳ ಭಾಗದಲ್ಲಿ ನಿರ್ಮಿಸಲಾಗಿರುವ ಟ್ಯಾಂಕ್ ಸುಮಾರು 12 ಸಾವಿರ ಲೀಟರ್ ತೈಲ ಸಂಗ್ರಹ ಸಾಮರ್ಥ್ಯ ಹೊಂದಿದೆ. ಟ್ಯಾಂಕ್‌ನ ಮುಚ್ಚಳವನ್ನು ಸದಾ ಮುಚ್ಚಿರುತ್ತಿದ್ದರಿಂದ ಒಳ ಭಾಗದಲ್ಲಿ ಮಿಥೇನ್ ಉತ್ಪತ್ತಿಯಾಗಿರುತ್ತದೆ ಮತ್ತು ಆಮ್ಲಜನಕದ ಕೊರತೆ ಇರುತ್ತದೆ. ಕಾರ್ಮಿಕರು ಮುಚ್ಚಳ ತೆರೆದು ಸ್ವಲ್ಪ ಸಮಯದ ಬಳಿಕ ಟ್ಯಾಂಕ್‌ಗೆ ಇಳಿದಿದ್ದರೆ ಈ ಅವಘಡ ಸಂಭವಿಸುತ್ತಿರಲಿಲ್ಲ. ಆದರೆ, ಆ ರೀತಿ ಮಾಡದ ಕಾರ್ಮಿಕರು ಮುಚ್ಚಳ ತೆರೆದು ಕೂಡಲೇ ಟ್ಯಾಂಕ್‌ಗೆ ಇಳಿದಿದ್ದಾರೆ. ಇದರಿಂದ ಉಸಿರಾಟಕ್ಕೆ ಸಮಸ್ಯೆಯಾಗಿ ಅವರು ಸಾವನ್ನಪ್ಪಿದ್ದಾರೆ' ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆ ನಿರ್ದೇಶಕ ಹಂಪಗೋಳ್ `ಪ್ರಜಾವಾಣಿ'ಗೆ ತಿಳಿಸಿದರು.

ಪೆಟ್ರೋಲಿಯಂ ಉತ್ಪನ್ನವಾದ ಫರ್ನೆಸ್ ತೈಲ ವಿಷಕಾರಿ ವಸ್ತು. ಆದ್ದರಿಂದ ಆ ತೈಲವನ್ನು ಗಾಳಿಯಾಡದ ಜಾಗದಲ್ಲಿ ಸಂಗ್ರಹಿಸಿಡಲಾಗಿರುತ್ತದೆ. ಅದರ ವಾಸನೆ ಗಾಳಿಯೊಂದಿಗೆ ಬೆರೆತರೆ ಉಸಿರಾಟಕ್ಕೆ ತೊಂದರೆಯಾಗುತ್ತದೆ. ಕಾರ್ಖಾನೆಯ ಆಡಳಿತ ಮಂಡಳಿಯವರು ಕಾರ್ಮಿಕರ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಂಡಿಲ್ಲ. ಕಾರ್ಮಿಕರಿಗೆ ಹೆಲ್ಮೆಟ್, ಆಕ್ಸಿಜನ್ ಮಾಸ್ಕ್ ಸಹ ಕೊಟ್ಟಿಲ್ಲ. ಕಾರ್ಖಾನೆಯಲ್ಲಿ ಅಗ್ನಿನಂದಕ ಸಲಕರಣೆಗಳು ಇಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪಂಪ್ ಹಳೆಯದಾಗಿತ್ತು
`ಫರ್ನೆಸ್ ತೈಲವನ್ನು ಯಂತ್ರಗಳಿಗೆ ಸರಬರಾಜು ಮಾಡುವ ಪಂಪ್ ತುಂಬಾ ಹಳೆಯದಾಗಿದ್ದರಿಂದ ಆಗಾಗ್ಗೆ ಕೆಟ್ಟು ಹೋಗುತ್ತಿತ್ತು. ಆದ್ದರಿಂದ ಹೊಸ ಪಂಪ್ ಅಳವಡಿಸುವಂತೆ ಮಾಲೀಕರಿಗೆ ಹಲವು ಬಾರಿ ಮನವಿ ಮಾಡಿದ್ದೆವು. ಮಾಲೀಕರು ಹೊಸ ಪಂಪ್ ಅಳವಡಿಕೆಗೆ ಕ್ರಮ ಕೈಗೊಂಡಿರಲಿಲ್ಲ. ಮಾಲೀಕರ ಬೇಜವಾಬ್ದಾರಿಯೇ ಅವರ ಸಾವಿಗೆ ಕಾರಣವಾಯಿತು' ಎಂದು ಕಾರ್ಖಾನೆಯ ಕೆಲ ಕಾರ್ಮಿಕರು ದೂರಿದರು.

ಶಿಸ್ತು ಕ್ರಮ
`ಘಟನೆಯ ಬಗ್ಗೆ  ತನಿಖೆ ನಡೆಸುವಂತೆ ಇಲಾಖೆಯ ಅಧಿಕಾರಿಗಳಿಗೆ ಆದೇಶಿಸಿದ್ದೇನೆ. ಕಾರ್ಮಿಕ ಕಾನೂನುಗಳ ಉಲ್ಲಂಘನೆ ಸಂಬಂಧ ಕಾರ್ಖಾನೆಗಳು ಮತ್ತು ಬಾಯ್ಲರ್ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ' ಎಂದು ಕಾರ್ಮಿಕ ಇಲಾಖೆ ಆಯುಕ್ತ ಪಂಕಜ್‌ಕುಮಾರ್ ಪಾಂಡೆ ತಿಳಿಸಿದ್ದಾರೆ.

ADVERTISEMENT

`ಕಾರ್ಖಾನೆಯ ಆಡಳಿತ ಮಂಡಳಿ ಕಾರ್ಮಿಕರ ಸುರಕ್ಷತೆಯನ್ನು ನಿರ್ಲಕ್ಷಿಸಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಇಲಾಖೆಯ ಜಂಟಿ ನಿರ್ದೇಶಕರ ನೇತೃತ್ವದಲ್ಲಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೈಗಾರಿಕಾ ಕಾಯ್ದೆ1948ರ ಉಲ್ಲಂಘನೆ ಹಾಗೂ ಕಾರ್ಮಿಕರ ಸುರಕ್ಷತೆಯನ್ನು ನಿರ್ಲಕ್ಷಿಸಿರುವ ಸಂಬಂಧ ಅಧಿಕಾರಿಗಳು ನೀಡುವ ವರದಿ ಆಧರಿಸಿ ಕಾರ್ಖಾನೆ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುತ್ತದೆ' ಎಂದು ಕಾರ್ಖಾನೆಗಳು ಮತ್ತು ಬಾಯ್ಲರ್ ಇಲಾಖೆ ನಿರ್ದೇಶಕ ಬಿ.ಎಸ್.ರಾಮಚಂದ್ರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.