ADVERTISEMENT

ಎಂಬಿಎ ವಿದ್ಯಾರ್ಥಿ ಸೇರಿ ನಾಲ್ವರ ಬಂಧನ

ಎಲೆಕ್ಟ್ರೀಷಿಯನ್ ಕೊಲೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 19:42 IST
Last Updated 22 ಮಾರ್ಚ್ 2014, 19:42 IST

ಬೆಂಗಳೂರು: ರಾಜಾಜಿನಗರ ಸಮೀಪದ ಮರಿಯಪ್ಪನಪಾಳ್ಯದಲ್ಲಿ ನಡೆದಿದ್ದ ಸುರೇಶ್‌ ಎಂಬ ಎಲೆಕ್ಟ್ರೀಷಿಯನ್‌ ಕೊಲೆ ಪ್ರಕರಣದ ಸಂಬಂಧ ಪೊಲೀಸರು ಎಂಬಿಎ ವಿದ್ಯಾರ್ಥಿ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ನಗರದ ಭೂಪಸಂದ್ರದಲ್ಲಿರುವ ಬೃಂದಾವನ ಕಾಲೇಜಿನ ದ್ವಿತೀಯ ವರ್ಷದ ಎಂಬಿಎ ವಿದ್ಯಾರ್ಥಿ ಲೋಚನ್‌ಕುಮಾರ್ ಅಲಿಯಾಸ್ ಮುನ್ನ (25), ಫೈನಾನ್ಸ್‌್ ಏಜೆನ್ಸಿಯೊಂದರ ಉದ್ಯೋಗಿ ರಾಕೇಶ್ ಅಲಿಯಾಸ್ ಲಂಕೆ (27), ವಿಡಿಯೋ ಗ್ರಾಫರ್‌ ರವಿಚಂದ್ರನಾಯಕ್‌ (21) ಹಾಗೂ ಪ್ರದೀಪ್‌ ಭಟ್‌ (21) ಬಂಧಿತರು.

ಆರೋಪಿಗಳು ಮಾ.18ರಂದು ಮರಿಯಪ್ಪನಪಾಳ್ಯದಲ್ಲಿ ಸುರೇಶ್‌ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಈ ಸಂಬಂಧ ಮೃತರ ಕುಟುಂಬ ಸದಸ್ಯರು, ‘ಸುರೇಶ್‌ ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದ. ಇದೇ ವಿಚಾರವಾಗಿ ಆತನ ಕೊಲೆ ನಡೆದಿರುವ ಸಾಧ್ಯತೆ ಇದೆ’ ಎಂದು ಆರೋಪಿಸಿ ದೂರು ಕೊಟ್ಟಿದ್ದರು. ದೂರಿನ ಅನ್ವಯ ಆರೋಪಿಗಳ ಪತ್ತೆ ಕಾರ್ಯ ಆರಂಭಿಸಲಾಯಿತು. ಘಟನಾ ದಿನ ಸುರೇಶ್‌ ಜತೆಗಿದ್ದ ಸ್ನೇಹಿತರ ವಿಚಾರಣೆ ನಡೆಸಿದಾಗ ಸುಳಿವು ದೊರೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ದಿನ ಆರೋಪಿಗಳು ರಾಜಾಜಿನಗರ ಎರಡನೇ ಬ್ಲಾಕ್‌ನಲ್ಲಿರುವ ಬಾರ್‌ಗೆ ಮದ್ಯಪಾನ ಮಾಡಲು ಹೋಗಿದ್ದರು.
ಕೊಲೆಯಾದ ಸುರೇಶ್‌ ಕೂಡ ಉಮೇಶ್, ಮುನಿಯಪ್ಪ ಹಾಗೂ ಕಾರ್ತಿಕ್‌ ಎಂಬ ಸ್ನೇಹಿತರೊಂದಿಗೆ ಅದೇ ಬಾರ್‌ಗೆ ಹೋಗಿದ್ದರು. ಈ ವೇಳೆ ಕುಡಿದ ಮತ್ತಿನಲ್ಲಿ ಎರಡೂ ಗುಂಪುಗಳ ನಡುವೆ ಜಗಳವಾಗಿತ್ತು. ಆಗ ಬಾರ್‌ನ ವ್ಯವಸ್ಥಾಪಕರು ಅವರನ್ನು ಹೊರಗೆ ಕಳುಹಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಈ ಜಗಳದ ನಂತರ ಸುರೇಶ್‌ ಅವರ ಕೊಲೆಗೆ ಸಂಚು ರೂಪಿಸಿದ ಆರೋಪಿ ರಾಕೇಶ್, ಸಹಚರರಿಗೆ ಕರೆ ಮಾಡಿ ಸ್ಥಳಕ್ಕೆ ಮಚ್ಚುಗಳನ್ನು ತರಿಸಿಕೊಂಡಿದ್ದ.

ಬಳಿಕ ಮನೆಗೆ ಹೋಗುತ್ತಿದ್ದ ಸುರೇಶ್‌ ಅವರನ್ನು  ಹಿಂಬಾಲಿಸಿದ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬೈಕ್‌ಗಳಲ್ಲಿ ಪರಾರಿಯಾಗಿದ್ದರು.
ತೀವ್ರ ರಕ್ತಸ್ರಾವವಾಗಿ ಸುರೇಶ್‌ ಸ್ಥಳದಲ್ಲೇ ಮೃತಪಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಯಾದ ರಾಕೇಶ್ ವಿರುದ್ಧ ನೆಲಮಂಗಲ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

ಆತ್ಮಹತ್ಯೆಗೆ ಯತ್ನಿಸಿದ ಆರೋಪಿ
‘ಸುರೇಶ್‌ ಸ್ನೇಹಿತರ ವಿಚಾರಣೆಯಿಂದ ಬಾರ್‌ನಲ್ಲಿ ಗಲಾಟೆ ನಡೆದಿದ್ದ ಸಂಗತಿ ತಿಳಿಯಿತು. ಜಗಳ ಮಾಡಿದ್ದವರು ಸಹ ಘಟನೆ ನಂತರ ತಲೆಮರೆಸಿಕೊಂಡಿದ್ದರಿಂದ ಅವರ ಮೇಲಿನ ಅನುಮಾನ ದಟ್ಟವಾಯಿತು. ಮಾ.20ರಂದು ರಾಕೇಶ್‌ನ ಅಣ್ಣನನ್ನು ಠಾಣೆಗೆ ಕರೆ ತಂದು ವಿಚಾರಣೆ ನಡೆಸಲಾಯಿತು.

ಈ ಸಂಗತಿ ತಿಳಿದ ರಾಕೇಶ್‌, ಪಿರಿಯಾಪಟ್ಟಣದಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ. ಆತನನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕುಟುಂಬ ಸದಸ್ಯರಿಂದ ಈ ಮಾಹಿತಿ ಸಂಗ್ರಹಿಸಿದ ಸಿಬ್ಬಂದಿ, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬಯಲಾಯಿತು’ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT