ADVERTISEMENT

ಎಚ್‌ಐವಿ ಸೋಂಕಿತರತ್ತ ಅಸಹನೆ ಬೇಡ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2012, 19:30 IST
Last Updated 16 ಏಪ್ರಿಲ್ 2012, 19:30 IST

ಬೆಂಗಳೂರು: `ಬೆಳಗಾವಿ, ವಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳೂ ಸೇರಿದಂತೆ ರಾಜ್ಯದ ವಿವಿಧೆಡೆ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿರುವ ಎಚ್‌ಐವಿ ಸೋಂಕನ್ನು ತಡೆಗಟ್ಟಲು ಸರ್ಕಾರ ತೀವ್ರ ಪ್ರಯತ್ನ ನಡೆಸುತ್ತಿದ್ದು, ಇದಕ್ಕೆ ಸಾರ್ವಜನಿಕರು ಕೂಡ ಅಗತ್ಯ ಸಹಕಾರ ನೀಡಬೇಕು~ ಎಂದು ಸಚಿವ ಎಸ್.ಸುರೇಶ್‌ಕುಮಾರ್ ಸಲಹೆ ನೀಡಿದರು.

ನಗರದ ದಂಡು ರೈಲು ನಿಲ್ದಾಣದಲ್ಲಿ 3ನೇ ಹಂತದ ರೆಡ್ ರಿಬ್ಬನ್ ಎಕ್ಸ್‌ಪ್ರೆಸ್ ರೈಲಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, `ಎಚ್‌ಐವಿ ಸೋಂಕಿತರ ಬಗ್ಗೆ ಅಸಹನೆ ತೋರ್ಪಡಿಸುವುದು ಬೇಡ. ಬದಲಿಗೆ ಅಂತಃಕರಣವಿರಲಿ. ಅಂತಹವರಿಗೂ ಬದುಕುವ ಹಕ್ಕಿದೆ ಎಂಬುದನ್ನು ಮನದಲ್ಲಿಟ್ಟುಕೊಂಡು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಬೇಕು. ಆ ಮೂಲಕ ಸ್ವಾಸ್ಥ್ಯ ಸಮಾಜ ಕಟ್ಟಬೇಕು~ ಎಂದು ಕರೆ ನೀಡಿದರು.

`ರೆಡ್ ರಿಬ್ಬನ್ ಎಕ್ಸ್‌ಪ್ರೆಸ್‌ನ ಮೂಲಕ ರೈಲು ನಿಲ್ದಾಣಕ್ಕೆ ಭೇಟಿ ನೀಡುವ ಲಕ್ಷಾಂತರ ಪ್ರಯಾಣಿಕರಿಗೆ ಎಚ್‌ಐವಿ ಮತ್ತು ಏಡ್ಸ್ ನ ಬಗ್ಗೆ ಮಾಹಿತಿ ನೀಡಬಹುದು. ಇದು ಎಚ್‌ಐವಿ ಬಗ್ಗೆ ಮಾತನಾಡಲು ಹಿಂಜರಿಯುವ ಸಾಮಾನ್ಯ ಜನರ ಸಣ್ಣ ಅನುಮಾನಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಉತ್ತಮ ಪ್ರಯತ್ನ~ ಎಂದು ಶ್ಲಾಘಿಸಿದರು.

ಚಿತ್ರನಟ ಜಗ್ಗೇಶ್, `ಒಂದೆಡೆ ವಿದ್ಯಾವಂತರು ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯಿಂದ ಎಚ್‌ಐವಿ ಸೋಂಕಿಗೆ ಬಲಿಯಾಗುತ್ತಿದ್ದರೆ, ಇನ್ನೊಂದೆಡೆ ಎಚ್‌ಐವಿ ಬಗ್ಗೆ ಅರಿವೇ ಇಲ್ಲದ ಮುಗ್ಧ ಜನರು ಸೋಂಕಿಗೆ ಒಳಪಡುತ್ತಿದ್ದಾರೆ. ಲೈಂಗಿಕ ಶಿಕ್ಷಣದ ಕೊರತೆಯೇ ಇದಕ್ಕೆಲ್ಲಾ ಕಾರಣ~ ಎಂದು ಹೇಳಿದರು.

ಶಾಸಕ ರೋಷನ್ ಬೇಗ್, `ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಎಚ್‌ಐವಿ ಸೋಂಕಿತರಿಗಾಗಿ ಏಡ್ಸ್ ಚಿಕಿತ್ಸಾ ಕೇಂದ್ರವನ್ನು ಆರಂಭಿಸಲು ರಾಜ್ಯ ಸರ್ಕಾರವು ಒಪ್ಪಿಗೆ ನೀಡಬೇಕು. ಈ ಪ್ರಸ್ತಾವ ಈಗಾಗಲೇ ಸಿದ್ಧಗೊಂಡಿದ್ದು, ವೈದ್ಯಕೀಯ ಶಿಕ್ಷಣ ಅಥವಾ ಆರೋಗ್ಯ ಇಲಾಖೆಯಿಂದ ಸಹಕಾರ ದೊರೆಯಬೇಕಿದೆ~ ಎಂದು ಮನವಿ ಮಾಡಿದರು.

ಚಿತ್ರ ನಟಿ ನೀತು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ರಾಮ್‌ಪ್ರಸಾದ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಎಂ.ಕೆ.ಅಯ್ಯಪ್ಪ, ಬೆಂಗಳೂರು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ತಿಮ್ಮಪ್ಪ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ನಿರ್ದೇಶಕ ಎಸ್.ಸೆಲ್ವಕುಮಾರ್, ಕರ್ನಾಟಕ ರಾಜ್ಯ ಏಡ್ಸ್  ಪ್ರಿವೆಷನ್ ಸೊಸೈಟಿಯ ಯೋಜನಾ ನಿರ್ದೇಶಕಿ ಸಲ್ಮಾ ಕೆ.ಪಾಹಿಮ್ ಉಪಸ್ಥಿತರಿದ್ದರು.
 

ಬೆಂಗಳೂರು ನಗರ ರೈಲು ನಿಲ್ದಾಣದಲ್ಲಿರುವ ಎಂಟು ಬೋಗಿಗಳಿರುವ ರೆಡ್ ರಿಬ್ಬನ್ ಎಕ್ಸ್‌ಪ್ರೆಸ್  ಮಂಗಳವಾರ ಸಂಜೆಯವರೆಗೆ ನಗರದಲ್ಲಿ ತಂಗಲಿದೆ.
ಎಚ್‌ಐವಿ /ಏಡ್ಸ್ ಸಂಬಂಧಿತ ಆರೈಕೆ, ಬೆಂಬಲ, ಚಿಕಿತ್ಸೆ, ಆರೋಗ್ಯ ಸಮತೋಲನ ಮತ್ತು ನೈರ್ಮಲ್ಯ ಸೇರಿದಂತೆ ವಿವಿಧ ಮಾಹಿತಿ ಒಳಗೊಂಡಿದೆ. ಒಟ್ಟು 60ಕ್ಕಿಂತ ಹೆಚ್ಚು ಮಂದಿ ಕಾರ್ಯಕರ್ತರು ಜನರಿಗೆ ಮಾಹಿತಿ ಒದಗಿಸಿದರು.
ಬೆಳಿಗ್ಗೆ 10 ರಿಂದ ಸಂಜೆ 7 ರವರೆಗೆ ಉಚಿತ ಪ್ರವೇಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.