ADVERTISEMENT

ಎರಡನೇ ದಿನವೂ ಮುಂದುವರಿದಿರುವ ಕುಸ್ಮಾ ಶಾಲಾ ಬಂದ್ ಹೋರಾಟ

​ಪ್ರಜಾವಾಣಿ ವಾರ್ತೆ
Published 17 ಜುಲೈ 2012, 19:30 IST
Last Updated 17 ಜುಲೈ 2012, 19:30 IST

ಬೆಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು (ಆರ್‌ಟಿಇ) ಅನುಷ್ಠಾನದ ಬಗ್ಗೆ ಇರುವ ಗೊಂದಲಗಳನ್ನು ನಿವಾರಿಸಬೇಕೆಂಬುದು ರಾಜ್ಯ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ಕುಸ್ಮಾ) ನಡೆಸುತ್ತಿರುವ ಶಾಲಾ ಬಂದ್ ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.

ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತರುವಲ್ಲಿ ಉಂಟಾಗಿರುವ ಗೊಂದಲಗಳ ಬಗ್ಗೆ ಶಿಕ್ಷಣ ಇಲಾಖೆ ಸಾರ್ವಜನಿಕವಾಗಿ ತನ್ನ ನಿಲುವನ್ನು ಪ್ರಕಟಿಸುವವರೆಗೂ ಬಂದ್ ಮುಂದುವರಿಯಲಿದೆ ಎಂದು `ಕುಸ್ಮಾ~ ಹೇಳಿದೆ.

ಭಾಷೆ ಮತ್ತು ಧರ್ಮದ ಆಧಾರದಲ್ಲಿ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ಖಾಸಗಿ ಶಾಲೆಗಳಲ್ಲಿ ಯಾವ ರೀತಿ ಪ್ರವೇಶ ನೀಡಬೇಕು ಎಂಬ ಬಗ್ಗೆ ಸರ್ಕಾರದ ನಿಲುವನ್ನು ಸ್ಪಷ್ಟ ಪಡಿಸಬೇಕೆಂಬ ಒತ್ತಾಯವೂ ಸೇರಿದಂತೆ 11 ಬಹಿರಂಗ ಪ್ರಶ್ನೆಗಳನ್ನು `ಕುಸ್ಮಾ~ ಎತ್ತಿದೆ. ಸರ್ಕಾರ ಈ ಪ್ರಶ್ನೆಗಳಿಗೆ ಸಾರ್ವಜನಿಕವಾಗಿಯೇ ಉತ್ತರ ನೀಡಬೇಕು ಎಂದು ಕುಸ್ಮಾ ಒತ್ತಾಯಿಸಿದೆ.

`ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಕಾಯ್ದೆ ಜಾರಿಗೆ ತರಲು ಕೆಲವು ಗೊಂದಲಗಳಿವೆ. ಹೀಗಾಗಿ ಮುಂದಿನ ವರ್ಷದಿಂದ ಕಾಯ್ದೆಯನ್ನು ಅನುಷ್ಠಾನಕ್ಕೆ ತರಬಹುದು ಎಂದು ಸರ್ಕಾರಕ್ಕೆ ತಿಳಿಸಿದ್ದೆವು. ಆದರೆ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ವರ್ಷದಿಂದಲೇ ಕಾಯ್ದೆಯನ್ನು ಅನುಷ್ಠಾನಕ್ಕೆ ತರಬೇಕು ಎಂದು ಒತ್ತಡ ತಂದಿದ್ದರು.
 
ವಿದ್ಯಾರ್ಥಿಗಳ ಭಾಷೆ, ಧರ್ಮ ಹಾಗೂ ಜಾತಿಗಳ ವಿಷಯವಾಗಿ ಇದ್ದ ಗೊಂದಲವನ್ನು ನಿವಾರಿಸುವಂತೆ ಸರ್ಕಾರಕ್ಕೆ ತಿಳಿಸಿದ್ದೆವು. ಆದರೆ, ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಸರಿಯಾಗಿ ಸ್ಪಂದಿಸಿಲ್ಲ. ಬಂದ್ ಕರೆ ನೀಡಲು ಇದೇ ಮುಖ್ಯ ಕಾರಣ~ ಎಂದು ಕುಸ್ಮಾ ಜಂಟಿ ಕಾರ್ಯದರ್ಶಿ ಸತ್ಯಮೂರ್ತಿ `ಪ್ರಜಾವಾಣಿ~ಗೆ ತಿಳಿಸಿದರು.

ಬಂದ್ ನಡೆಸದ ಶಾಲೆಗಳು : ನಗರದಲ್ಲಿ ಸೋಮವಾರ ಒಟ್ಟು 57 ಶಾಲೆಗಳು ಬಂದ್ ನಡೆಸಿದ್ದವು. ಮಂಗಳವಾರ ನಗರದ ಬಹುತೇಕ ಶಾಲೆಗಳು ಬಂದ್ ಕೈಬಿಟ್ಟಿವೆ. ಮಂಗಳವಾರ ನಗರದ ಏಳು ಖಾಸಗಿ ಶಾಲೆಗಳು ಮಾತ್ರ ಬಂದ್ ನಡೆಸಿವೆ. ಉಳಿದಂತೆ ಎಲ್ಲ ಶಾಲೆಗಳಲ್ಲೂ ತರಗತಿಗಳು ನಡೆದಿವೆ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿದಿದ್ದಾರೆ.

`ಬಂದ್ ನಡೆಸಲು ಕುಸ್ಮಾಗೆ ಯಾವುದೇ ಅಧಿಕಾರವಿಲ್ಲ. ಈ ವರ್ಷದಿಂದ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೆ ತರಲು `ಕುಸ್ಮಾ~ ಸದಸ್ಯರಿಗೆ ಇಷ್ಟವಿಲ್ಲ. ಹೀಗಾಗಿ ಅವರು ಬಂದ್‌ಗೆ ಕರೆನೀಡಿದ್ದಾರೆ. ಆದರೆ, ಬಂದ್‌ಗೆ ಕರೆನೀಡುವ ಅಧಿಕಾರ ಸಂಘಕ್ಕಿಲ್ಲ.
 
ಸಾವಿರಾರು ಮಕ್ಕಳ ಶಿಕ್ಷಣ ಹಕ್ಕನ್ನು ಕಸಿದುಕೊಳ್ಳಲು `ಕುಸ್ಮಾ~ಗೆ ಏನು ಹಕ್ಕಿದೆ. ರಾಜ್ಯದ ಬಹುತೇಕ ಕಡೆಗಳಲ್ಲಿ ಮಂಗಳವಾರ ಖಾಸಗಿ ಶಾಲೆಗಳಲ್ಲಿ ಎಂದಿನಂತೆ ತರಗತಿಗಳು ನಡೆದಿವೆ. ಇನ್ನೆರಡು ಮೂರು ದಿನಗಳಲ್ಲಿ `ಕುಸ್ಮಾ~ದ ಶಾಲಾಬಂದ್ ನಾಟಕ ತಾನೇ ತಾನಾಗಿ ಮುಗಿಯಲಿದೆ~ ಎಂದು ಶಿಕ್ಷಣ ಇಲಾಖೆಯ ಪ್ರಾಥಮಿಕ ಶಿಕ್ಷಣ ವಿಭಾಗದ ನಿರ್ದೇಶಕ ದೇವಪ್ರಕಾಶ್ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.