ADVERTISEMENT

ಎರಡು ದೇವಾಲಯಗಳಲ್ಲಿ ಕಳವು

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2018, 19:55 IST
Last Updated 27 ಏಪ್ರಿಲ್ 2018, 19:55 IST
ಹುಂಡಿಯ ಬೀಗ ಮುರಿದಿರುವುದು
ಹುಂಡಿಯ ಬೀಗ ಮುರಿದಿರುವುದು   

ಬೆಂಗಳೂರು: ಹೆಣ್ಣೂರಿನಲ್ಲಿರುವ ಬಂಡೆ ವಿನಾಯಕ ಹಾಗೂ ಮಧ್ವಾಂಜನೇಯ ಸ್ವಾಮಿ ದೇವಾಲಯಗಳ ಬೀಗ ಮುರಿದು ಒಳನುಗ್ಗಿರುವ ದುಷ್ಕರ್ಮಿಗಳು, ಬೆಳ್ಳಿ ವಸ್ತುಗಳು ಹಾಗೂ ಹುಂಡಿಗಳಲ್ಲಿದ್ದ ಹಣ ದೋಚಿದ್ದಾರೆ.

ಅರ್ಚಕರು ಶುಕ್ರವಾರ ಬೆಳಿಗ್ಗೆ ದೇವಸ್ಥಾನಗಳಿಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಹೆಣ್ಣೂರು ಠಾಣೆಗೆ ದೂರು ಕೊಟ್ಟಿದ್ದಾರೆ.

‘ಪ್ರಜಾವಾಣಿ’ ಜತೆ ಮಾತನಾಡಿದ ಮಧ್ವಾಂಜನೇಯ ಸ್ವಾಮಿ ದೇವಸ್ಥಾನದ ಟ್ರಸ್ಟಿ ನಾಗೇಶ್, ‘ಬಾಗಿಲಿಗೆ ಮೂರು ಬೀಗಗಳನ್ನು ಹಾಕಿದ್ದೆವು. ರಾತ್ರಿ 11 ಗಂಟೆ ನಂತರ ದೇವಸ್ಥಾನದ ಬಳಿ ಬಂದಿರುವ ಕಳ್ಳರು, ಆ ಬೀಗಗಳನ್ನು ಒಡೆದು ಒಳನುಗ್ಗಿದ್ದಾರೆ. ಹುಂಡಿ ಬೀಗ ಮುರಿಯಲು ಸಾಧ್ಯವಾಗದೆ, ಕಾಣಿಕೆ ಹಾಕಲು ಇರುವ ಜಾಗವನ್ನು ಹಾರೆಯಿಂದ ಅಗಲ ಮಾಡಿ, ಕೈಗೆ ಸಿಕ್ಕಷ್ಟು ಹಣ ತೆಗೆದುಕೊಂಡು ಹೊರಟು ಹೋಗಿದ್ದಾರೆ’ ಎಂದು ಹೇಳಿದರು.

ADVERTISEMENT

‘ಪ್ರತಿ ವರ್ಷ ರಾಮನವಮಿಯ ದಿನ ಹುಂಡಿಯ ಬೀಗ ತೆಗೆಯುತ್ತಿದ್ದೆವು. ಆದರೆ, ಕೀ ಕಳೆದು ಹೋಗಿದ್ದರಿಂದ ಈ ರಾಮನವಮಿಗೆ ಹುಂಡಿ ಪರಿಶೀಲಿಸಿರಲಿಲ್ಲ. ಕಾಣಿಕೆ ಹಣದಲ್ಲಿ ಇನ್ನೊಂದು ದೇವಸ್ಥಾನ ಕಟ್ಟಿಸಲು ನಿರ್ಧರಿಸಿದ್ದೆವು. ಎಷ್ಟು ಹಣ ಕಳುವಾಗಿದೆ ಎಂಬುದು ಗೊತ್ತಾಗಿಲ್ಲ’ ಎಂದರು.

ಈ ದೇವಸ್ಥಾನದಿಂದ ಅರ್ಧ ಕಿ.ಮೀ ದೂರದಲ್ಲಿರುವ ಬಂಡೆ ವಿನಾಯಕ ದೇವಾಲಯದಲ್ಲೂ ಗಣೇಶ ಮೂರ್ತಿಯ ಮೇಲಿದ್ದ ಆಭರಣ ಹಾಗೂ ಬೆಳ್ಳಿಯ ಪೂಜಾ ಸಾಮಗ್ರಿಗಳು ಕಳವಾಗಿವೆ. ಅವುಗಳ ಮೌಲ್ಯ ಗೊತ್ತಾಗಿಲ್ಲ.

‘ರಾತ್ರಿ 9.15ಕ್ಕೆ ಬಾಗಿಲು ಹಾಕಿಕೊಂಡು ಹೋಗಿದ್ದೆ. ಬೆಳಿಗ್ಗೆ  6.15ಕ್ಕೆ ಪೂಜೆಗೆ ಬಂದಾಗ ಆಭರಣಗಳೇ ಮಾಯವಾಗಿದ್ದವು. ಕೂಡಲೇ ಟ್ರಸ್ಟ್‌ನವರಿಗೆ ವಿಷಯ ತಿಳಿಸಿದೆ’ ಎಂದು ಅರ್ಚಕ ನವೀನ್‌ಶಾಸ್ತ್ರಿ ತಿಳಿಸಿದರು.

ಬೆರಳಚ್ಚು ಹಾಗೂ ಶ್ವಾನದಳದ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸುತ್ತಮುತ್ತಲ ಕಟ್ಟಡಗಳಲ್ಲಿರುವ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನೂ ಪರಿಶೀಲಿಸುತ್ತಿದ್ದಾರೆ. ಮೂವರು ಕಳ್ಳರು ಕೃತ್ಯ ಎಸಗಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.