ADVERTISEMENT

ಎಸ್ಕಾಂಗಳಲ್ಲಿ ಸಿಬ್ಬಂದಿ ಕೊರತೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 18:45 IST
Last Updated 28 ಅಕ್ಟೋಬರ್ 2011, 18:45 IST

ಬೆಂಗಳೂರು:  ವಿದ್ಯುತ್ ಗ್ರಾಹಕರಿಗೆ ಗುಣಮಟ್ಟದ ಸೇವೆಯನ್ನು ಒದಗಿಸುವ ದೃಷ್ಟಿಯಿಂದ ವಿದ್ಯುತ್ ಸರಬರಾಜು ಕಂಪೆನಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

`ಎಸ್ಕಾಂ~ಗಳಲ್ಲಿ ಮಂಜೂರಾದ 52,627 ಹುದ್ದೆಗಳಿದ್ದು, ಈ ಪೈಕಿ 19,856 ಹುದ್ದೆಗಳು ಖಾಲಿ ಇವೆ. ಎಲ್ಲ ಕಂಪೆನಿಗಳಲ್ಲಿ ಕನಿಷ್ಠ ಶೇ 50ರಷ್ಟು ಹುದ್ದೆಗಳನ್ನಾದರೂ ಕೂಡಲೇ ಭರ್ತಿ ಮಾಡಬೇಕು ಎಂದು ಆದೇಶ ನೀಡಿರುವುದಾಗಿ ಆಯೋಗದ ಅಧ್ಯಕ್ಷ ಎಂ.ಆರ್.ಶ್ರೀನಿವಾಸಮೂರ್ತಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಂಪೆನಿಗಳು ಸಿಬ್ಬಂದಿ ಕೊರತೆ ಎದುರಿಸುತ್ತಿರುವುದನ್ನು ಆಯೋಗ ಗಂಭೀರವಾಗಿ ಪರಿಗಣಿಸಿದೆ. ಜೂನಿಯರ್ ಎಂಜಿನಿಯರ್, ಲೈನ್‌ಮನ್, ಸಹಾಯಕ ಲೈನ್‌ಮನ್ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು ಮುಂದಾಗಿ ಎಂದು ಆಯೋಗ ಸೂಚಿಸಿದೆ.

ಸೇವಾ ಕೇಂದ್ರ: ಸಿಬ್ಬಂದಿಯನ್ನು ಮರು ವಿಂಗಡಣೆ ಮಾಡುವ ಮೂಲಕ ಗ್ರಾಹಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು. ಈ ಉದ್ದೇಶಕ್ಕಾಗಿ ಕಂಪೆನಿಗಳು ಸೇವಾ ಕೇಂದ್ರಗಳನ್ನು ತೆರೆಯಬೇಕು. ಪ್ರತಿ ಕೇಂದ್ರಕ್ಕೆ 4-5 ಮಂದಿ ಸಿಬ್ಬಂದಿಯನ್ನು ನೇಮಕ ಮಾಡಿ ಅವರಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಮಾಡಬೇಕು ಎಂದು ಆಯೋಗ ಆದೇಶಿಸಿದೆ.

ಪ್ರತಿ ವಿದ್ಯುತ್ ಕಂಪೆನಿಗಳು ಪ್ರಸಕ್ತ ವರ್ಷ ಕನಿಷ್ಠ ಎರಡು ಉಪ ವಿಭಾಗಗಳಲ್ಲಿ ಸೇವಾ ಕೇಂದ್ರಗಳನ್ನು ತೆರೆಯಬೇಕು. ಪ್ರಸರಣ ಮತ್ತು ವಿತರಣಾ ನಷ್ಟ ಶೇ 21.62ರಷ್ಟಿದ್ದು, ಎರಡು ವರ್ಷಗಳಲ್ಲಿ ವಿತರಣಾ ನಷ್ಟವನ್ನು ಕನಿಷ್ಠ ಶೇ 10ಕ್ಕೆ ಇಳಿಸಬೇಕು ಎಂದು ಸೂಚಿಸಲಾಗಿದೆ ಎಂದರು.

ಈ ಗುರಿ ಸಾಧಿಸಲು `ಹೈವೋಲ್ಟೆಜ್ ಡಿಸ್ಟ್ರಿಬ್ಯೂಷನ್ ಸಿಸ್ಟಂ~ ಅನ್ನು ಈ ವರ್ಷವೇ ಕನಿಷ್ಠ ಒಂದು ವಿಭಾಗದಲ್ಲಾದರೂ ಅನುಷ್ಠಾನಗೊಳಿಸಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಂಧ್ರಪ್ರದೇಶದಲ್ಲಿ ಈ ವ್ಯವಸ್ಥೆ ಜಾರಿ ಮಾಡಿರುವುದರಿಂದ ವಿತರಣಾ ನಷ್ಟ ಕಡಿಮೆಯಾಗಿದೆ ಎಂದು ಅವರು  ಹೇಳಿದರು.

ರೈತರು ಬಳಸುತ್ತಿರುವ ಕಳಪೆ ಮಟ್ಟದ ಪಂಪ್‌ಸೆಟ್‌ಗಳನ್ನು ಬದಲಾಯಿಸಿ ಗುಣಮಟ್ಟದ ಮತ್ತು ಕಡಿಮೆ ವಿದ್ಯುತ್ ಉಪಯೋಗಿಸುವ ಪಂಪ್‌ಸೆಟ್‌ಗಳನ್ನು ಅಳವಡಿಸಲು ಕಂಪೆನಿಗಳಿಗೆ ಸೂಚಿಸಲಾಗಿದೆ. ಬೆಸ್ಕಾಂ ವ್ಯಾಪ್ತಿಯ ದೊಡ್ಡಬಳ್ಳಾಪುರದಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೆ ಬಂದಿದ್ದು, ಇದರಿಂದ ಕಂಪೆನಿಗಳಿಗೆ ಅಥವಾ ರೈತರಿಗೆ ಆರ್ಥಿಕವಾಗಿ ಹೊರೆಯಾಗುವುದಿಲ್ಲ ಎಂದರು.

ಈ ರೀತಿ ಮಾಡುವುದರಿಂದ ವಾರ್ಷಿಕ 5 ಸಾವಿರ ದಶಲಕ್ಷ ಯೂನಿಟ್ ವಿದ್ಯುತ್ ಉಳಿತಾಯವಾಗಲಿದ್ದು, ಇದರಿಂದ ಸುಮಾರು ರೂ. 2 ಸಾವಿರ ಕೋಟಿ ಉಳಿಸಬಹುದಾಗಿದೆ. ನಿರಂತರ ಜ್ಯೋತಿ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಿ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಪಂಪ್‌ಸೆಟ್‌ಗಳನ್ನು ಹೊರತುಪಡಿಸಿ, ಬೇರೆ ಉದ್ದೇಶಗಳಿಗೆ 24 ಗಂಟೆ ವಿದ್ಯುತ್ ಪೂರೈಸುವಂತೆ ಆಯೋಗ ಸೂಚಿಸಿದೆ.

ಬಾಕಿ ವಸೂಲಿ: ಇದೇ ಮಾರ್ಚ್ 31ರವರೆಗೆ ವಿದ್ಯುತ್ ಕಂಪೆನಿಗಳಿಗೆ ಬರಬೇಕಾದ ಬಾಕಿ 7,065 ಕೋಟಿ ರೂಪಾಯಿ ಇದೆ. ಇದರಲ್ಲಿ 4,019 ಕೋಟಿ ರೂಪಾಯಿ 2008ಕ್ಕೂ ಮೊದಲು ರೈತರ ಪಂಪ್‌ಸೆಟ್‌ಗಳಿಂದ ಬರಬೇಕಾಗಿರುವುದಾಗಿದೆ. 1,832 ಕೋಟಿ ರೂಪಾಯಿ ಗ್ರಾಮ ಪಂಚಾಯಿತಿಗಳಿಂದ ಬರಬೇಕಾಗಿದೆ. ಇದನ್ನು ಮೂರು ವರ್ಷಗಳಲ್ಲಿ ವಸೂಲಿ ಮಾಡುವಂತೆ ಆಯೋಗ ನಿರ್ದೇಶನ ನೀಡಿದೆ.

ವಿದ್ಯುತ್ ಖರೀದಿ: ಯೂನಿಟ್‌ಗೆ ರೂ 4.63 ದರದಲ್ಲಿ 2013ರ ಜೂನ್‌ವರೆಗೂ 780 ಮೆಗಾವಾಟ್ ವಿದ್ಯುತ್ ಖರೀದಿಸಲು ಆಯೋಗ ಅನುಮತಿ ನೀಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಖರೀದಿ ದರ ಕಡಿಮೆಯಾಗಿದೆ. ಬೇಡಿಕೆಗೆ ಅನುಗುಣವಾಗಿ ಉತ್ಪಾದನೆಯಾಗದೆ ಇರುವುದರಿಂದ ಖರೀದಿಗೆ ಅನುಮತಿ ನೀಡಲಾಗಿದೆ ಎಂದರು.

ವಿದ್ಯುತ್ ದರ: ಮೆಟ್ರೊಗೂ ತಟ್ಟಿದ ಬಿಸಿ
`ನಮ್ಮ ಮೆಟ್ರೊ~ಗೆ ಪೂರೈಸುವ ವಿದ್ಯುತ್ ದರವನ್ನು ಯೂನಿಟ್‌ಗೆ 33 ಪೈಸೆ ಹೆಚ್ಚಿಸಲಾಗಿದೆ. ಇದುವರೆಗೆ ಯೂನಿಟ್‌ಗೆ ರೂ 4.07 ಇದ್ದ ದರವನ್ನು ಈಗ ರೂ 4.40ಕ್ಕೆ ಏರಿಸಲಾಗಿದೆ.

ಅದೇ ರೀತಿ ಖಾಸಗಿ ಶಿಕ್ಷಣ ಸಂಸ್ಥೆಗಳು ಬಳಸುವ ವಿದ್ಯುತ್ ದರದಲ್ಲೂ ಹೆಚ್ಚಳವಾಗಿದೆ. ಗ್ರಾಮಾಂತರ ಪ್ರದೇಶದಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ಒಂದರಿಂದ 100 ಯೂನಿಟ್‌ವರೆಗೆ, ಯೂನಿಟ್‌ಗೆ ರೂ 4.40 ಇದ್ದ ದರವನ್ನು ಈಗ ರೂ 5ಕ್ಕೆ ಏರಿಸಲಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ನಗರ ಪ್ರದೇಶದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ 100 ಯೂನಿಟ್‌ವರೆಗೆ ರೂ 4.95 ಇದ್ದ ದರವನ್ನು ಈಗ ರೂ 5.50ಕ್ಕೆ ಹೆಚ್ಚಿಸಲಾಗಿದೆ.

101ರಿಂದ 200 ಯೂನಿಟ್‌ವರೆಗೆ ಐದು ಪೈಸೆ, 201ರಿಂದ 400 ಯೂನಿಟ್‌ವರೆಗೆ 60 ಪೈಸೆ ದರ ಹೆಚ್ಚಳವಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಸರಾಸರಿ ಯೂನಿಟ್‌ಗೆ 60 ಪೈಸೆ ಹೆಚ್ಚಳ ಮಾಡಿದ್ದು, ಉಳಿದಂತೆ ಯೂನಿಟ್‌ಗೆ 10ರಿಂದ 50 ಪೈಸೆ ಹೆಚ್ಚಳವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.