ADVERTISEMENT

ಐತಿಹಾಸಿಕ ಅಣ್ಣಮ್ಮನ ಬೆಟ್ಟಕ್ಕೆ ಒತ್ತುವರಿ ಕಾಟ

​ಪ್ರಜಾವಾಣಿ ವಾರ್ತೆ
Published 12 ಜೂನ್ 2013, 20:26 IST
Last Updated 12 ಜೂನ್ 2013, 20:26 IST

ಬೆಂಗಳೂರು: ನಗರದ ಉತ್ತರಹಳ್ಳಿ ಸಮೀಪದ ಅಣ್ಣಮ್ಮನ ಬೆಟ್ಟ (ಹನುಮಗಿರಿ) ಕಲ್ಲು ಗಣಿಗಾರಿಕೆ ಹಾಗೂ ಕಟ್ಟಡ ನಿರ್ಮಾಣ ಕಂಪೆನಿಗಳ ಒತ್ತುವರಿಯಿಂದಾಗಿ ದಿನದಿಂದ ದಿನಕ್ಕೆ ಕರಗುತ್ತಿದೆ.

ಅಣ್ಣಮ್ಮ ಎಂಬ ಐತಿಹಾಸಿಕ ಕ್ರಿಶ್ಚಿಯನ್ ಮಹಿಳೆ ಸಾವನ್ನಪ್ಪಿದ್ದ ಜಾಗವಾದ ಬೆಟ್ಟ ಈವರೆಗೆ ಸಾಂಸ್ಕೃತಿಕ ಹಾಗೂ ಜನಪದ ಆಚರಣೆಗಳಿಂದ ಹೆಸರಾಗಿತ್ತು. ಆದರೆ, ಈಗ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆಯ ದೂಳು ಹಾಗೂ ಬೃಹತ್ ಕಟ್ಟಡಗಳ ನಿರ್ಮಾಣ ಕಾಮಗಾರಿಯ ಯಂತ್ರಗಳ ಸದ್ದು ಹೆಚ್ಚಾಗಿದೆ.

ಉತ್ತರಹಳ್ಳಿ ಹಾಗೂ ಇಟ್ಟಮಡು ಭಾಗದಲ್ಲಿ ಸಂಚರಿಸುವವರಿಗೆ ಈ ಬೆಟ್ಟದ ಮೇಲಿನ ಬೃಹತ್ ಶಿಲುಬೆ ಕಣ್ಣಿಗೆ ಬೀಳುತ್ತದೆ. ಬೆಟ್ಟದಲ್ಲಿ ಅಣ್ಣಮ್ಮನ ಸಮಾಧಿ ಹಾಗೂ ಪ್ರಾರ್ಥನಾ ಮಂದಿರಗಳಿವೆ. ಅಲ್ಲದೇ ಬೆಟ್ಟದ ಮತ್ತೊಂದು ಭಾಗದಲ್ಲಿ ಶಿವ ಹಾಗೂ ಹನುಮಂತ ದೇವರ ಗುಡಿಗಳಿವೆ. ಅಣ್ಣಮ್ಮನ ಸಮಾಧಿ, ಪೂಜಾ ಸ್ಥಳ ಹಾಗೂ ಪ್ರಾರ್ಥನಾ ಮಂದಿರದ ಜಾಗ ಉತ್ತರಹಳ್ಳಿಯ ಸೇಂಟ್ ಆಂಥೋನಿ ಚರ್ಚ್‌ಗೆ ಸೇರಿದ್ದಾಗಿದೆ.

ಪ್ರತಿ ವರ್ಷ ಬೆಟ್ಟದಲ್ಲಿ ಶಿವ ಹಾಗೂ ಹನುಮಂತ ದೇವರ ಜಾತ್ರೆಗಳು ನಡೆಯುತ್ತವೆ. ಅಲ್ಲದೇ ಅಣ್ಣಮ್ಮನ ವಾರ್ಷಿಕ ಉತ್ಸವವೂ ಬೆಟ್ಟದಲ್ಲಿ ನಡೆಯುತ್ತದೆ. ಹೀಗೆ ಧರ್ಮ ಹಾಗೂ ಜಾತಿಯ ಎಲ್ಲೆಗಳನ್ನು ಮೀರಿ ಬೆಟ್ಟದಲ್ಲಿ ನಡೆಯುತ್ತಿದ್ದ ಆಚರಣೆಗಳು ಇನ್ನುಮುಂದೆ ಮರೆಯಾಗುವ ಆತಂಕ ಇಲ್ಲಿನ ಸ್ಥಳೀಯರಲ್ಲಿ ಈಗ ಮನೆಮಾಡಿದೆ.

`ಬೆಟ್ಟದ ಹಿಂಭಾಗದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಬೆಟ್ಟದ ಜಾಗವನ್ನು ಆಕ್ರಮಿಸಿಕೊಂಡು ಖಾಸಗಿ ಕಟ್ಟಡ ನಿರ್ಮಾಣ ಕಂಪೆನಿಗಳು ತಡೆಗೋಡೆ ನಿರ್ಮಿಸುತ್ತಿವೆ. ಬೆಟ್ಟ ಹಿಂಭಾಗದಿಂದ ಒತ್ತುವರಿಯಾಗುತ್ತಿದೆ. ಇದು ಹೀಗೇ ಮುಂದುವರಿದರೆ ಬೆಟ್ಟದ ಐತಿಹಾಸಿಕ ಮಹತ್ವಕ್ಕೆ ಕುಂದುಂಟಾಗಲಿದೆ. ಅಲ್ಲದೇ ಪೂಜಾ ಸ್ಥಳಕ್ಕೆ ಧಕ್ಕೆಯಾಗಲಿದೆ' ಎಂದು ಪ್ರಾರ್ಥನಾ ಮಂದಿರದ ಉದಯಾ ಮೇರಿ ತಿಳಿಸಿದರು.

ಅಣ್ಣಮ್ಮ ಹಾಗೂ ಬೆಟ್ಟದ ಆಚರಣೆಗಳ ಬಗ್ಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಸಂಶೋಧಕ ಎಸ್.ಸಿ.ರಮೇಶ್ ಅವರ `ಕರ್ನಾಟಕ ಜನಪದ ಆಚರಣೆಗಳು' ಪುಸ್ತಕದಲ್ಲಿ ಉಲ್ಲೇಖವಿದೆ. `ಟಿಪ್ಪು ಸುಲ್ತಾನ್‌ನ ಸೈನ್ಯ ಬೆಟ್ಟದಲ್ಲಿ ಬಿಡಾರ ಹೂಡಿತ್ತು. ಕೆಲವು ಸೈನಿಕರು ಬೆಟ್ಟದ ಬುಡದಲ್ಲಿದ್ದ ಅಣ್ಣಮ್ಮನ ಮನೆಗೆ ದುರುದ್ದೇಶದಿಂದ ನುಗ್ಗುತ್ತಾರೆ. ಆ ವೇಳೆ ಅಣ್ಣಮ್ಮ ಅವರಿಂದ ತಪ್ಪಿಸಿಕೊಳ್ಳಲು ಬೆಟ್ಟದ ತುದಿಗೆ ಓಡಿಹೋಗುತ್ತಾಳೆ. ಬೆಟ್ಟದ ತುದಿ ತಲುಪಿದ ಆಕೆ ಬೆಟ್ಟದಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ನಂತರ ತಮ್ಮ ತಪ್ಪಿನ ಅರಿವಾದ ಸೈನಿಕರು ಬೆಟ್ಟದಲ್ಲಿ ಆಕೆ ಶವವನ್ನು ಹೂಳುತ್ತಾರೆ' ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

`ಬೆಟ್ಟದ ಜಾಗದಲ್ಲಿ ಎರಡು ಬೃಹತ್ ಕಟ್ಟಡ ಕಾಮಗಾರಿಗಳು ನಡೆಯುತ್ತಿವೆ. ಟಾಟಾ ಗೃಹ ನಿರ್ಮಾಣ ಕಂಪೆನಿ ನಿಯಮಬದ್ಧವಾಗಿ ಜಮೀನು ಖರೀದಿಸಿ ಕಟ್ಟಡ ನಿರ್ಮಿಸುತ್ತಿದೆ. ಆದರೆ, ಮತ್ತೊಂದು ಭಾಗದಲ್ಲಿ ಖಾಸಗಿ ಕಟ್ಟಡ ನಿರ್ಮಾಣ ಕಂಪೆನಿಯೊಂದು ನಿಯಮ ಬಾಹಿರವಾಗಿ ಕಾಮಗಾರಿ ನಡೆಸುತ್ತಿದೆ. ಶಿಲುಬೆ ಹಾಗೂ ಪೂಜಾ ಸ್ಥಳಕ್ಕೆ ಹೋಗಲು ಇದ್ದ ದಾರಿಯನ್ನು ಈ ಖಾಸಗಿ ಕಂಪೆನಿ ಒತ್ತುವರಿ ಮಾಡಿಕೊಂಡು ಆ ಜಾಗದಲ್ಲಿ ತಡೆಗೋಡೆ ನಿರ್ಮಿಸಿದೆ. ಇದರಿಂದ ಭಕ್ತರಿಗೆ ತೊಂದರೆಯಾಗುತ್ತಿದೆ' ಎಂದು ಉತ್ತರಹಳ್ಳಿಯ ಸೇಂಟ್ ಆಂಥೋನಿ ಚರ್ಚ್‌ನ ಫಾದರ್ ಎಲ್.ಜಯರಾಜ್ ಹೇಳಿದರು.

`ಅಣ್ಣಮ್ಮನ ಬೆಟ್ಟವನ್ನು ಚರ್ಚ್‌ಗೆ ಹಸ್ತಾಂತರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆವು. ಆದರೆ, ಬೆಟ್ಟದ ಜಾಗ ಹಸ್ತಾಂತರಿಸಲುರೂ.300 ಕೋಟಿ ಹಣ ಕಟ್ಟುವಂತೆ ಸರ್ಕಾರ ಕೇಳಿತ್ತು. ಅಷ್ಟು ಹಣ ನಮ್ಮ ಬಳಿ ಇಲ್ಲದ ಕಾರಣ ನಾವು ಬೆಟ್ಟದ ಜಾಗ ಖರೀದಿಸುವ ಚಿಂತನೆಯನ್ನು ಕೈಬಿಟ್ಟೆವು. ಆನಂತರ ಬೆಟ್ಟದ ಜಾಗವನ್ನು ಖರೀದಿಸಿದ ಕೆಲ ಖಾಸಗಿ ಕಂಪೆನಿಗಳು ಈಗ ಬೆಟ್ಟದಲ್ಲಿ ಕಾಮಗಾರಿಯನ್ನು ಆರಂಭಿಸಿವೆ' ಎಂದು ಅಣ್ಣಮ್ಮನ ಬೆಟ್ಟ ಅಭಿವೃದ್ಧಿ ಸಮಿತಿಯ ಸದಸ್ಯ ಶೇಖರ್ ತಿಳಿಸಿದರು.

`ಬೆಟ್ಟದ ಜಾಗವನ್ನು ಒತ್ತುವರಿ ಮಾಡಿಕೊಳ್ಳುತ್ತಿರುವ ಬಗ್ಗೆ ಪರಿಶೀಲನೆ ನಡೆಸಿ ಒತ್ತುವರಿ ತಡೆಯಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು, ಬೆಂಗಳೂರು ದಕ್ಷಿಣ ತಾಲ್ಲೂಕಿನ ತಹಶೀಲ್ದಾರ್ ಅವರಿಗೆ ಆದೇಶಿಸಿದ್ದಾರೆ. ಈ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ ಒತ್ತುವರಿಯನ್ನು ತಪ್ಪಿಸಬೇಕು' ಎಂದು ಅವರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.