ADVERTISEMENT

ಕಗ್ಗಂಟಾಗಿಯೇ ಉಳಿದ 11 ಕ್ಷೇತ್ರಗಳು...

ಬಿಜೆಪಿ ಮೂರನೇ ಪಟ್ಟಿ ಬಿಡುಗಡೆ: 37 ಕ್ಷೇತ್ರಗಳಿಗೆ ಅಭ್ಯರ್ಥಿಗಳು ಪ್ರಕಟ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2013, 19:48 IST
Last Updated 14 ಏಪ್ರಿಲ್ 2013, 19:48 IST

ಬೆಂಗಳೂರು: ತಡರಾತ್ರಿಯವರೆಗೂ ಸಭೆ ನಡೆಸಿದ ಬಿಜೆಪಿ ಮುಖಂಡರು ಮೂರನೇ ಪಟ್ಟಿಯಲ್ಲಿ 37 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಮಾತ್ರ ಪ್ರಕಟಿಸುವಲ್ಲಿ ಸಫಲರಾದರು. ಇನ್ನೂ 11 ಕ್ಷೇತ್ರಗಳು ಬಿಜೆಪಿಯ ಪಾಲಿಗೆ ಕಗ್ಗಂಟಾಗಿಯೇ ಉಳಿದಿವೆ.

ಪಕ್ಷೇತರರಾಗಿ ಕಣಕ್ಕಿಳಿಯುವುದಾಗಿ ಘೋಷಿಸಿ, ನಂತರ ಬಿಜೆಪಿಯಲ್ಲೇ ಉಳಿಯುವ ನಿರ್ಧಾರ ಕೈಗೊಂಡಿದ್ದ ಸಚಿವ ಆನಂದ್ ಸಿಂಗ್‌ಗೆ ಸದ್ಯ ಪ್ರತಿನಿಧಿಸುತ್ತಿರುವ ವಿಜಯನಗರ (ಬಳ್ಳಾರಿ) ಕ್ಷೇತ್ರದಲ್ಲೇ ಟಿಕೆಟ್ ನೀಡಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಡಿ.ವೆಂಕಟೇಶಮೂರ್ತಿ ಅವರನ್ನು ಬೆಂಗಳೂರಿನ ಶಾಂತಿನಗರ ಕ್ಷೇತ್ರದಲ್ಲಿ ಕಣಕ್ಕಿಳಿಸಲು ನಿರ್ಧರಿಸಲಾಗಿದೆ.

ಬಿಬಿಎಂಪಿ ಮಾಜಿ ಉಪ ಮೇಯರ್ ಎಸ್.ಹರೀಶ್ ಅವರಿಗೆ ಮಹಾಲಕ್ಷ್ಮಿ ಬಡಾವಣೆ ಕ್ಷೇತ್ರದಲ್ಲಿ ಟಿಕೆಟ್ ದೊರೆತಿದೆ. ಇತ್ತೀಚೆಗಷ್ಟೇ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ಪಾಲಿಕೆ ಸದಸ್ಯ ಪದ್ಮನಾಭ ರೆಡ್ಡಿ ಅವರಿಗೆ ಸರ್ವಜ್ಞನಗರ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಗರುಡಾ ಮಾಲ್ ಮಾಲೀಕ ಉದಯ ಗರುಡಾಚಾರ್ ಅವರಿಗೆ ಚಿಕ್ಕಪೇಟೆ ಕ್ಷೇತ್ರದಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಡಾ.ಡಿ.ಹೇಮಚಂದ್ರಸಾಗರ್ ಅವರು ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿದ್ದರು. ಏಪ್ರಿಲ್ 5ರಂದು ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಬಿಜೆಪಿ 176 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟಿಸಿತ್ತು. 48 ಕ್ಷೇತ್ರಗಳು ಬಾಕಿ ಉಳಿದಿದ್ದವು. ಭಾನುವಾರ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಹೆಬ್ಬಾಳ, ಮಾಲೂರು, ಕೆಜಿಎಫ್, ಬಿ.ಟಿ.ಎಂ.ಬಡಾವಣೆ, ಪುತ್ತೂರು ಸೇರಿದಂತೆ ಇನ್ನೂ 11 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಬೇಕಿದೆ.

ದಿನವಿಡೀ ಸಭೆ: ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಷಿ, ಮುಖಂಡರಾದ ಅನಂತಕುಮಾರ್, ಡಿ.ವಿ.ಸದಾನಂದ ಗೌಡ ಮತ್ತಿತರರು ಇಡೀ ದಿನ ಪಕ್ಷದ ಕಚೇರಿಯಲ್ಲಿ ಸಭೆ ನಡೆಸಿದರು. ವಿವಿಧ ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳ ಜೊತೆ ನೇರವಾಗಿ ಸಮಾಲೋಚಿಸಿ ಮಾಹಿತಿಯನ್ನೂ ಪಡೆದರು. ಪ್ರಬಲ ಪೈಪೋಟಿ ಇರುವ ಕಡೆಗಳಲ್ಲಿ ಆಕಾಂಕ್ಷಿಗಳ ನಡುವೆ ಸಹಮತ ಮೂಡಿಸುವ ಯತ್ನವೂ ಈ ಮುಖಂಡರಿಂದ ನಡೆಯಿತು.

ರಾಜ್ಯಸಭೆ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಮಧ್ಯಾಹ್ನ ಬೆಂಗಳೂರಿಗೆ ಬಂದರು. ನಂತರ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿಯ ಸದಸ್ಯರು ಜೇಟ್ಲಿ ಜೊತೆ ಚರ್ಚೆ ಆರಂಭಿಸಿದರು. ಆದರೂ, ಅಂತಿಮವಾಗಿ ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಅಖೈರುಗೊಳಿಸಲು ನಾಯಕರಿಗೆ ಸಾಧ್ಯವಾಗಲಿಲ್ಲ. ಕೆಲವೆಡೆ ಹೊರಗಿನಿಂದ ಬಂದವರಿಗೆ ಟಿಕೆಟ್ ನೀಡಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಈ ನಿಲುವನ್ನು ಪಕ್ಷದ ಸ್ಥಳೀಯ ಮುಖಂಡರು ತೀವ್ರವಾಗಿ ವಿರೋಧಿಸುತ್ತಿರುವುದು ನುಂಗಲಾರದ ತುತ್ತಾಗಿದೆ.

ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿರುವ ಶಾಸಕ ಸಂಪಂಗಿ ಮತ್ತು ನ್ಯಾಯಾಂಗ ಬಂಧನದಲ್ಲಿದ್ದ ಮಾಜಿ ಸಚಿವರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಅವರಿಗೆ ಟಿಕೆಟ್ ನೀಡಬೇಕೇ, ಬೇಡವೇ ಎಂಬುದು ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಈ ಮೂವರು ಪ್ರತಿನಿಧಿಸುವ ಕೆಜಿಎಫ್, ಹೆಬ್ಬಾಳ ಮತ್ತು ಮಾಲೂರು ಕ್ಷೇತ್ರಗಳಲ್ಲಿ ಪರ್ಯಾಯ ಅಭ್ಯರ್ಥಿಗಳ ಹುಡುಕಾಟ ನಡೆದಿದೆ. ಆದರೆ, ಮೂವರು ಹಾಲಿ ಶಾಸಕರು ಪಕ್ಷೇತರರಾಗಿಯೂ ಕಣಕ್ಕಿಳಿಯದಂತೆ ಮನವೊಲಿಸುವ ಕಸರತ್ತು ನಡೆಯುತ್ತಿದ್ದು, ಇನ್ನೂ ಖಾತರಿಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.