ADVERTISEMENT

ಕನ್ನಡದಲ್ಲಿ ಪ್ರಾರ್ಥನೆಗೆ ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2013, 20:16 IST
Last Updated 22 ಸೆಪ್ಟೆಂಬರ್ 2013, 20:16 IST

ಬೆಂಗಳೂರು: ನಗರದ ಕೋಲ್ಸ್‌ ಪಾರ್ಕ್‌ ಬಳಿಯ ಸೇಂಟ್ ಫ್ರಾನ್ಸಿಸ್‌ ಕ್ಷೇವಿಯರ್‌ ಚರ್ಚ್‌ ಆವರಣದಲ್ಲಿ ಭಾನುವಾರ ನಡೆದ ರಾಜ್ಯ ಕ್ರಿಶ್ಚಿಯನ್‌ ಧರ್ಮಕ್ಷೇತ್ರ ಸ್ಥಾಪನೆಯ ವಾರ್ಷಿಕೋತ್ಸವ ಸಂದರ್ಭದಲ್ಲಿ, ರಾಜ್ಯದ ಚರ್ಚ್‌ಗಳಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿ ಪ್ರಾರ್ಥನೆ ಸಲ್ಲಿಸಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ಕ್ರೈಸ್ತರ ಕನ್ನಡ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.

ಚರ್ಚ್‌ಗಳಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಲಾಗುತ್ತಿದೆ. ತಮಿಳು ಹಾಗೂ ಇಂಗ್ಲಿಷ್‌ ಭಾಷೆಯಲ್ಲಿ ಪ್ರಾರ್ಥನೆ ನಡೆಸಲಾಗುತ್ತಿದೆ. ಅಲ್ಲದೆ ಬೆಂಗಳೂರು ಧರ್ಮಕ್ಷೇತ್ರ ಸ್ಥಾಪನೆಗೊಂಡು 60 ವರ್ಷ ತುಂಬಿದೆ. ಆದರೆ, 75ನೇ ವರ್ಷದ ಆಚರಣೆ ನಡೆಸಲಾಗುತ್ತಿದೆ ಎಂದು ಪ್ರತಿಭಟನಾನಿರತರು ಆಕ್ಷೇಪಿಸಿದರು.

ಚರ್ಚ್‌ನಲ್ಲಿ ತಮಿಳು ಭಾಷೆಯಲ್ಲಿ ಪ್ರಾರ್ಥನೆ ಆರಂಭವಾಗುತ್ತಿದ್ದಂತೆ ಸಂಘದ ಸದಸ್ಯರು ಧರ್ಮಾಧ್ಯಕ್ಷರ ವಿರುದ್ಧ ಘೋಷಣೆಗಳನ್ನು ಕೂಗಿದರು. ಸುಮಾರು 30 ಮಂದಿ ಪ್ರತಿಭಟನಾನಿರತರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಸಂಜೆ ವೇಳೆಗೆ ಅವರನ್ನು ಬಿಡುಗಡೆ ಗೊಳಿಸಿದರು.

‘ರಾಜ್ಯದ ಚರ್ಚ್‌ಗಳಲ್ಲಿ ಕಡ್ಡಾಯ ವಾಗಿ ಕನ್ನಡದಲ್ಲಿ ಪ್ರಾರ್ಥನೆ ಸಲ್ಲಿಸಬೇಕು. ಆದರೆ, ಕೆಲವು ಚರ್ಚ್‌ಗಳಲ್ಲಿ ಇಂಗ್ಲಿಷ್‌ ಮತ್ತು ತಮಿಳು ಭಾಷೆಗಳಲ್ಲಿ ಮಾತ್ರ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಕೆಲವು ಚರ್ಚ್‌ಗಳಲ್ಲಿ ತಮಿಳು, ಇಂಗ್ಲಿಷ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಕೊನೆಗೆ ಕನ್ನಡದಲ್ಲಿ ಪ್ರಾರ್ಥನೆ ಸಲ್ಲಿಸ ಲಾಗುತ್ತಿದೆ. ಇದು ಧರ್ಮಾಧ್ಯಕ್ಷರ ಕನ್ನಡ ವಿರೋಧಿತನವನ್ನು ತೋರುತ್ತಿದೆ’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ರಫಾಯಲ್‌ ರಾಜ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.