ADVERTISEMENT

ಕನ್ನಡಿಗರ ನೇಮಕಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 19:30 IST
Last Updated 1 ಫೆಬ್ರುವರಿ 2012, 19:30 IST

ಬೆಂಗಳೂರು: ರಾಜ್ಯದ 13 ಧರ್ಮ ಕ್ಷೇತ್ರಗಳಿಗೂ ಕನ್ನಡಿಗರನ್ನೇ ಧರ್ಮಾಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ಕೆಥೋಲಿಕ್ ಕ್ರೈಸ್ತರ ಕನ್ನಡ ಸಂಘದ ಸದಸ್ಯರು ಕೋರಮಂಗಲದ 50 ಅಡಿ ರಸ್ತೆಯಲ್ಲಿರುವ ಬಿಬಿಎಂಪಿ ಆಟದ ಮೈದಾನದ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

`13 ಧರ್ಮ ಕ್ಷೇತ್ರಗಳ ಪೈಕಿ 12ರಲ್ಲಿ ಕನ್ನಡೇತರ ಧರ್ಮಾಧ್ಯಕ್ಷರಿದ್ದಾರೆ. ಬೆಂಗಳೂರು ಧರ್ಮಾಧ್ಯಕ್ಷ ಬರ್ನಾಡ್ ಮೊರೆಸ್ ಕನ್ನಡೇತರರನ್ನೇ ಧರ್ಮಾಧ್ಯಕ್ಷರನ್ನಾಗಿ ನೇಮಕ ಮಾಡುತ್ತಿದ್ದಾರೆ~ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

`ಈವರೆಗೆ ಪ್ರಾದೇಶಿಕ ಗುರುಮಠ ಸ್ಥಾಪನೆಗೂ ಅವರು ಕ್ರಮ ಕೈಗೊಂಡಿಲ್ಲ. ಈಗಲಾದರೂ ಕನ್ನಡಿಗರನ್ನೇ ಧರ್ಮಾಧ್ಯಕ್ಷರನ್ನಾಗಿ ನೇಮಿಸಬೇಕು~ ಎಂದು ಒತ್ತಾಯಿಸಿದರು. ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊ.ರು.ಚನ್ನಬಸಪ್ಪ, ಸಾಹಿತಿ ಜರಗನಹಳ್ಳಿ ಶಿವಶಂಕರ್, ಸಂಘದ ಮುಖಂಡರಾದ ರಫಾಯಲ್ ರಾಜ್, ಜೆ.ಆರ್. ಪೆರೇರಾ, ಜೆ.ಸೆಲ್ವರಾಜ್, ಜೆ.ಪಿ. ಅನಿಲ್ ದೇವಕುಮಾರ್ ಭಾಗವಹಿಸಿದ್ದರು.

ನಂತರ ನಿಯೋಗವೊಂದು ಬಿಷಪ್ಸ್ ಕಾನ್ಫೆರೆನ್ಸ್‌ಗೆ ತೆರಳಿ ಸಿಬಿಸಿಐ ಅಧ್ಯಕ್ಷ ಒಸ್ವಾಲ್ ಕಾರ್ಡಿನಲ್ ಗ್ರೇಷಿಯಸ್ ಅವರಿಗೆ ಮನವಿಪತ್ರ ಸಲ್ಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.