ADVERTISEMENT

ಕಬ್ಬನ್‌ ಪಾರ್ಕ್‌ನಲ್ಲಿ 2ನೇ ಶನಿವಾರವೂ ವಾಹನ ಸಂಚಾರ

ಸುತ್ತಮುತ್ತಲ ರಸ್ತೆಗಳಲ್ಲಿ ದಟ್ಟಣೆ ಹೆಚ್ಚಾಗಿರುವುದಕ್ಕೆ ಈ ಕ್ರಮ: ಕಮಿಷನರ್

​ಪ್ರಜಾವಾಣಿ ವಾರ್ತೆ
Published 8 ಜೂನ್ 2017, 19:47 IST
Last Updated 8 ಜೂನ್ 2017, 19:47 IST
ಕಬ್ಬನ್‌ ಪಾರ್ಕ್‌ನಲ್ಲಿ 2ನೇ ಶನಿವಾರವೂ ವಾಹನ ಸಂಚಾರ
ಕಬ್ಬನ್‌ ಪಾರ್ಕ್‌ನಲ್ಲಿ 2ನೇ ಶನಿವಾರವೂ ವಾಹನ ಸಂಚಾರ   

ಬೆಂಗಳೂರು: ಕಬ್ಬನ್ ಉದ್ಯಾನದಲ್ಲಿ ಭಾನುವಾರ ಹೊರತುಪಡಿಸಿ ಉಳಿದ ಎಲ್ಲ ದಿನಗಳಲ್ಲೂ ವಾಹನ ಸಂಚಾರಕ್ಕೆ ಅವಕಾಶ ನೀಡಿ ನಗರ ಪೊಲೀಸ್ ಕಮಿಷನರ್ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ. ಈ ನಡೆಯು ಉದ್ಯಾನ ಪ್ರೇಮಿಗಳ ಆಕ್ಷೇಪಕ್ಕೆ ಕಾರಣವಾಗಿದೆ.

2015ರ ಜೂನ್ ತಿಂಗಳಿನಿಂದ ಪ್ರತಿ ಭಾನುವಾರ ಹಾಗೂ ನವೆಂಬರ್‌ನಿಂದ  ಪ್ರತಿ ತಿಂಗಳ 2ನೇ ಶನಿವಾರ ಉದ್ಯಾನದಲ್ಲಿ ವಾಹನ ಓಡಾಟಕ್ಕೆ ನಿರ್ಬಂಧ ಹೇರಲಾಗಿತ್ತು. ಜತೆಗೆ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಾಂಧಿ ಜಯಂತಿಯಂದು ಸಂಚಾರ ನಿರ್ಬಂಧಿಸಲಾಗಿತ್ತು. ಈವರೆಗೂ ಇದೇ ಆದೇಶ ಪಾಲನೆಯಾಗುತ್ತಿದೆ.

ಆದರೆ, ತೋಟಗಾರಿಕಾ ಇಲಾಖೆಯ ಗಮನಕ್ಕೂ ತಾರದೇ ಕಬ್ಬನ್ ಉದ್ಯಾನದ ಸಂಚಾರ ವ್ಯವಸ್ಥೆಯಲ್ಲಿ  ಬದಲಾವಣೆ ಮಾಡಿ ಮೇ 9 ರಂದು ಆದೇಶ ಹೊರಡಿಸಿರುವ ಕಮಿಷನರ್, ಅದರ ಪ್ರತಿಯನ್ನು ಜೂನ್ 7ರಂದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರ (ಕಬ್ಬನ್‌ ಉದ್ಯಾನ) ಕಚೇರಿಗೆ ಕಳುಹಿಸಿದ್ದಾರೆ.

ADVERTISEMENT

‘ಅಗತ್ಯ ಹಾಗೂ ತುರ್ತು ಸಂದರ್ಭಗಳಲ್ಲಿ ಮಾತ್ರ ಭಾನುವಾರವೂ ಉದ್ಯಾನದ ರಸ್ತೆಗಳಲ್ಲಿ ವಾಹನಗಳ ಓಡಾಟಕ್ಕೆ ಅನುಮತಿ ನೀಡಲಾಗುತ್ತದೆ. ಈ ಸಂದರ್ಭಗಳಲ್ಲಿ ಉದ್ಯಾನದ ಗೇಟ್‌ಗಳನ್ನು ತೆಗೆಯುವ ಅಥವಾ ಮುಚ್ಚುವ ಅಧಿಕಾರ ಸಂಬಂಧಪಟ್ಟ ಠಾಣೆಯ ಪೊಲೀಸರಿಗೆ ಮಾತ್ರ ಇರುತ್ತದೆ’ ಎಂದು ಕಮಿಷನರ್ ಆದೇಶದಲ್ಲಿ ಹೇಳಿದ್ದಾರೆ.

ಚರ್ಚೆ ನಡೆಸದೇ ಆದೇಶ: ‘ಪೊಲೀಸರು ನಮ್ಮೊಂದಿಗೆ ಚರ್ಚಿಸದೆ ಏಕಪಕ್ಷೀಯವಾಗಿ  ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಕ್ರಮ ಸರಿಯಲ್ಲ’ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ ಜತೆ ಮಾತನಾಡಿ ಆಕ್ಷೇಪ ವ್ಯಕ್ತಪಡಿಸಿದರು.

‘ಉದ್ಯಾನಕ್ಕೆ ಸಂಬಂಧಿಸಿದ ವಿಚಾರದಲ್ಲಿ ಹೊಸ ಮಾರ್ಪಾಡು ತರುವಾಗ ಸಂಬಂಧಪಟ್ಟ ಇಲಾಖೆಯ ಜತೆ ಚರ್ಚೆ ನಡೆಸಿ ತೀರ್ಮಾನಕ್ಕೆ ಬರುವುದು ಸೌಜನ್ಯದ ನಡೆ. ಈಗ ಹಾಗಾಗಿಲ್ಲ. ಪೊಲೀಸರು ಮನಸೋಇಚ್ಛೆ ನಿರ್ಧಾರ ಕೈಗೊಂಡಿದ್ದಾರೆ. ಹೀಗಾದಲ್ಲಿ, ನಾವು ಇರುವುದಾದರೂ ಏತಕ್ಕೆ’ ಎಂದು ಪ್ರಶ್ನಿಸಿದರು.

‘ಉದ್ಯಾನದ ಸುತ್ತಮುತ್ತಲ ರಸ್ತೆಗಳ ಸಂಚಾರ ದಟ್ಟಣೆಗೆ ಕಡಿವಾಣ ಹಾಕಲು ಪೊಲೀಸರಿಗೆ ಕಷ್ಟವಾಗಿದೆ. ಹೀಗಾಗಿ, ಪರಿಸರದ ಕಾಳಜಿಯನ್ನು ಲೆಕ್ಕಿಸದೇ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಭಾನುವಾರವೂ ಪ್ರವೇಶ ಕಲ್ಪಿಸುವ ಷಡ್ಯಂತ್ರ ಇದರ ಹಿಂದಿದೆ’ ಎಂದು ಆರೋಪಿಸಿದರು.

‘ಹಿಂದಿನ ಎಲ್ಲ ಆದೇಶಗಳನ್ನು ಗಾಳಿಗೆ ತೂರಿರುವುದು ನಿಜಕ್ಕೂ ಆಶ್ಚರ್ಯ ತಂದಿದೆ. ಈ ಬಗ್ಗೆ ಇಲಾಖೆ ಆಯುಕ್ತರ ಗಮನಕ್ಕೆ ತಂದಿದ್ದು, ಸಭೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕ (ಕಬ್ಬನ್ ಉದ್ಯಾನ) ಮಹಾಂತೇಶ ಮುರಗೋಡ ಹೇಳಿದರು.

ಸಂಚಾರ ದಟ್ಟಣೆ ನೆಪ
ಕಬ್ಬನ್ ಉದ್ಯಾನದ ಸುತ್ತಮುತ್ತಲಿನ ಕ್ವೀನ್ಸ್ ರಸ್ತೆ, ಅಂಬೇಡ್ಕರ್ ವಿಧಿ, ನೃಪತುಂಗ ರಸ್ತೆ, ಕಬ್ಬನ್ ರಸ್ತೆ, ಕಸ್ತೂರಬಾ ರಸ್ತೆ, ವಿಠಲ್ ಮಲ್ಯ ಹಾಗೂ ಮಲ್ಯ ಆಸ್ಪತ್ರೆ ರಸ್ತೆಗಳಲ್ಲಿ ಇತ್ತೀಚೆಗೆ ವಾಹನ ದಟ್ಟಣೆ ಹೆಚ್ಚಾಗಿದೆ. ಇದನ್ನು ಸಹಜ ಸ್ಥಿತಿಗೆ ತರಲು ಪೊಲೀಸರಿಗೆ ಕಷ್ಟವಾಗಿದೆ. ಹೀಗಾಗಿ, ಹೊಸ ಮಾರ್ಪಾಡುಗಳನ್ನು ಮಾಡಲಾಗಿದೆ ಎಂದು ಪ್ರವೀಣ್ ಸೂದ್ ಅವರು ಆದೇಶದ ಪ್ರತಿಯಲ್ಲಿ ಉಲ್ಲೇಖಿಸಿದ್ದಾರೆ.
ನಗರ ವ್ಯಾಪ್ತಿಯಲ್ಲಿ 2009ರಲ್ಲಿ 24 ಲಕ್ಷಗಳಷ್ಟಿದ್ದ ವಾಹನ ಸಂಖ್ಯೆಯು ಈಗ 67 ಲಕ್ಷಕ್ಕೂ ಮೀರಿದೆ. ನಗರದ ರಸ್ತೆಗಳ ಮೇಲೆ ಸಾಮರ್ಥ್ಯಕ್ಕಿಂತ ಹೆಚ್ಚು ವಾಹನಗಳು ಓಡಾಟ ನಡೆಸುತ್ತಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಅತಿರೇಕದ ನಡೆ
‘ಶನಿವಾರ ಹಾಗೂ ಇತರ ದಿನಗಳಂದು ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿರುವುದು ಅತಿರೇಕದ ನಡೆ. ಇದನ್ನು ಪೊಲೀಸರು ಕೂಡಲೇ ಹಿಂಪಡೆಯಬೇಕು. ಇಲ್ಲವಾದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತೇವೆ’ ಎಂದು ಕಬ್ಬನ್ ಉದ್ಯಾನ ನಡಿಗೆದಾರರ ಸಂಘದ ಅಧ್ಯಕ್ಷ ಎಸ್.ಉಮೇಶ್ ಎಚ್ಚರಿಸಿದರು.

‘ಎರಡನೇ ಶನಿವಾರ ರಜೆ ಇರುವ ಕಾರಣದಿಂದ ಹೆಚ್ಚು ಜನರು ಉದ್ಯಾನಕ್ಕೆ ಬಂದು ಕಾಲ ಕಳೆಯುತ್ತಾರೆ. ಆದರೆ, ಈಗಿನ ಆದೇಶದಿಂದ ಜನರಿಗೆ ಕಿರಿಕಿರಿ ಉಂಟಾಗಲಿದೆ. ಪರಿಸರಕ್ಕೂ ಧಕ್ಕೆಯಾಗಲಿದೆ’ ಎಂದು ಹೇಳಿದರು.

ಕಬ್ಬನ್ ಉದ್ಯಾನದ ಪ್ರವೇಶ ದ್ವಾರಗಳು

ಹಡ್ಸನ್ ವೃತ್ತ ದ್ವಾರ

ಪ್ರೆಸ್‌ಕ್ಲಬ್ ದ್ವಾರ

ಸಿ.ಟಿ.ಒ ವೃತ್ತ ದ್ವಾರ

ಬಾಲಭವನ ದ್ವಾರ

ಸಿದ್ದಲಿಂಗಯ್ಯ ದ್ವಾರ

ಶಾಂತವೇರಿ ಗೋಪಾಲಗೌಡ ವೃತ್ತ ದ್ವಾರ

ಎನ್.ಜಿ.ಒ ದ್ವಾರ

ಸೆಂಚ್ಯುರಿ ಕ್ಲಬ್ ದ್ವಾರ

* ಕಮಿಷನರ್ ಪ್ರವೀಣ್ ಸೂದ್ ಅವರನ್ನು ಶುಕ್ರವಾರ ಭೇಟಿಯಾಗಿ ಆದೇಶವನ್ನು ಕೈಬಿಡುವಂತೆ ಮನವಿ ಮಾಡುತ್ತೇವೆ.
- ಅ.ನ.ಯಲ್ಲಪ್ಪ ರೆಡ್ಡಿ, ಪರಿಸರವಾದಿ

*ವಾರದ ಎಲ್ಲ ದಿನವೂ ಉದ್ಯಾನದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲು ನಾವು ಚಿಂತನೆ ನಡೆಸಿದ್ದೆವು. ಪೊಲೀಸ್‌ ಇಲಾಖೆಯ ಆದೇಶದಿಂದ ನಮ್ಮ  ಪ್ರಯತ್ನಕ್ಕೆ ಹಿನ್ನಡೆಯಾಗಿದೆ.
-ಮಹಾಂತೇಶ ಮುರಗೋಡ, ಉಪನಿರ್ದೇಶಕ (ಕಬ್ಬನ್ ಉದ್ಯಾನ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.