ಬೆಂಗಳೂರು: ರಾಜ್ಯದಲ್ಲಿ ಕಬ್ಬು ದರ ನಿಗದಿ ಪಡಿಸಲು ‘ರಾಜ್ಯ ಸಲಹಾ ಬೆಲೆ’ (ಎಸ್‌ಎಪಿ) ಅನ್ನು ಕೂಡಲೇ ಜಾರಿಗೆ ತರಬೇಕು ಎಂದು ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು ನಗರದ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಸೋಮವಾರ ಪ್ರತಿಭಟನಾ ರ್ಯಾಲಿ ನಡೆಸಿದರು.
ವಿಧಾನಸೌಧದವರೆಗೆ ಪ್ರತಿಭಟನಾ ರ್ಯಾಲಿ ನಡೆಸಲು ಮುಂದಾದ ಸಾವಿರಾರು ರೈತರನ್ನು ಪೊಲೀಸರು ಸ್ವಾತಂತ್ರ್ಯ ಉದ್ಯಾನದ ಬಳಿ ತಡೆದು ನಿಲ್ಲಿಸಿದರು. ಇದರಿಂದ ಆಕ್ರೋಶಗೊಂಡ ಪ್ರತಿಭಟನಾನಿರತ ರೈತರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರಿಂದ ಶೇಷಾದ್ರಿರಸ್ತೆ ರಸ್ತೆಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ‘2010-11ನೇ ಸಾಲಿನ ಕಬ್ಬಿನ ದರವನ್ನು ಸರ್ಕಾರ ತಕ್ಷಣವೇ ನಿಗದಿಪಡಿಸಬೇಕು. ಕಬ್ಬು ಪೂರೈಕೆ ಮಾಡಿರುವ ರೈತರಿಗೆ ಕಳೆದ ಮೂರು ವರ್ಷಗಳಿಂದ ಸಕ್ಕರೆ ಕಾರ್ಖಾನೆಗಳು ಹಣ ಪಾವತಿಸಿಲ್ಲ. ಇದರಿಂದ ರೈತರು ಕಂಗಾಲಾಗಿದ್ದು, ಜೀವನ ನಡೆಸಲು ಪರದಾಡುತ್ತಿದ್ದಾರೆ. ಹಾಗಾಗಿ ರೈತರಿಗೆ ನೀಡಬೇಕಿರುವ ಹಣವನ್ನು ತಕ್ಷಣ ನೀಡುವಂತೆ ಸರ್ಕಾರ ಕಾರ್ಖಾನೆಗಳ ಮಾಲೀಕರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
‘ಅಲ್ಲದೇ ಸಕ್ಕರೆ ಕಾರ್ಖಾನೆಗಳು 2009-10ನೇ ಸಾಲಿನಲ್ಲಿ ಬಾಕಿ ಉಳಿಸಿಕೊಂಡಿರುವ ಎರಡನೇ ಕಂತಿನ ಹಣವನ್ನು ಸಹ ಕೊಡಿಸಬೇಕು. ರೈತರು ಮತ್ತು ಕಾರ್ಖಾನೆಗಳ ನಡುವೆ ಉತ್ತಮ ಬಾಂಧವ್ಯಕ್ಕಾಗಿ ಕಾನೂನುಬದ್ಧ ದ್ವಿಪಕ್ಷೀಯ ಒಪ್ಪಂದ ಪತ್ರವನ್ನು ಜಾರಿಗೆ ತರಬೇಕು’ ಎಂದು ಒತ್ತಾಯಿಸಿದರು.‘ಹಾಗೆಯೇ ಕಬ್ಬಿನ ಬೆಳೆ ವಿಮೆಯನ್ನು ಜಾರಿಗೊಳಿಸಬೇಕು. ಹಲವು ಜಿಲ್ಲೆಗಳಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರು ಪಕ್ಷ ರಾಜಕಾರಣ ಮಾಡುತ್ತಿದ್ದು, ತಮ್ಮ ಪಕ್ಷಕ್ಕೆ ಸೇರಿದ ರೈತರ ಕಬ್ಬನ್ನು ಮಾತ್ರ ಅರೆಯುತ್ತಿದ್ದಾರೆ. ಇಂತಹ ಪಕ್ಷ ರಾಜಕಾರಣವನ್ನು ಬದಿಗಿಟ್ಟು ಎಲ್ಲ ರೈತರ ಕಬ್ಬನ್ನು ಕಾನೂನುಬದ್ಧವಾಗಿ ಅರೆಯಲು ಕ್ರಮ ಕೈಗೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಬೇಕು’ ಎಂದು ಅವರು ಹೇಳಿದರು.
‘ಸಚಿವ ಎಸ್.ಎ.ರವೀಂದ್ರನಾಥ್ ಮತ್ತು ಕಬ್ಬು ಅಭಿವೃದ್ಧಿ ಆಯುಕ್ತ ಎ.ಕೆ.ಮೊನ್ನಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಬಗ್ಗೆ ಚರ್ಚಿಸಲು ಮಂಗಳವಾರ ರೈತ ಮುಖಂಡರ ಸಭೆ ಕರೆದಿದ್ದಾರೆ. ಸಭೆಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ಭರವಸೆ ನೀಡದಿದ್ದಲ್ಲಿ ಮಂಗಳವಾರದಿಂದಲೇ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು’ ಎಂದು ಶಾಂತಕುಮಾರ್ ಎಚ್ಚರಿಸಿದರು.
ಸಂಘದ ಉಪಾಧ್ಯಕ್ಷ ಶಿವಾನಂದ ಗುರುಮಠ್, ಕಾರ್ಯದರ್ಶಿಗಳಾದ ವಿಠ್ಠಲ್ ಗಣಾಚಾರ್, ಚಂದ್ರಹಾಸ್ ಉಳ್ಳಾಗಡ್ಡಿ, ಚಂದ್ರೇಗೌಡ, ಕೆ.ಎಸ್.ಮಾದಪ್ಪ, ಭರಮಪ್ಪ ಉಪಾಸಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.