ಬೆಂಗಳೂರು: `ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕರಗ ಭವನ ನಿರ್ಮಾಣಕ್ಕೆ ಬಿಬಿಎಂಪಿ ವತಿಯಿಂದ 50 ಲಕ್ಷ ರೂಪಾಯಿ ಅನುದಾನ ನೀಡಲಾಗುವುದು~ ಎಂದು ಸಚಿವ ಆರ್.ಅಶೋಕ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ತಿಗಳ ಸರ್ಕಾರಿ ನೌಕರರ ಸಂಘವು ನಗರದ ಪುರಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
`ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಸಾಧಿಸುವುದರ ಜೊತೆಗೆ ತಿಗಳ ಜನಾಂಗವು ಶೈಕ್ಷಣಿಕವಾಗಿಯೂ ಮುಂದುವರಿಯಬೇಕಿದೆ. ಉನ್ನತ ಶಿಕ್ಷಣ ಗಳಿಸುವುದರಿಂದ ಮಾತ್ರ ಜನಾಂಗ ಅಭಿವೃದ್ಧಿ ಹೊಂದಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಶ್ರಮಿಸಬೇಕು~ ಎಂದು ಸಲಹೆ ನೀಡಿದರು.
`ಈ ರೀತಿಯ ಜಾತಿ ಸಮಾವೇಶಗಳು ಜಾಗೃತಿ ಸಮಾವೇಶವಾಗಿ ಮಾರ್ಪಾಡಾಗಬೇಕು. ಅಲ್ಲದೆ, ಜನಾಂಗವು ಎದುರಿಸುತ್ತಿರುವ ತೀವ್ರ ಸಮಸ್ಯೆಗಳ ಕುರಿತು ಚರ್ಚೆ ನಡೆಸಲು ಇಂತಹ ಸಮಾವೇಶಗಳು ಸೂಕ್ತ ವೇದಿಕೆಯಾಗಬೇಕು~ ಎಂದು ಹೇಳಿದರು.
`ನಾಡಪ್ರಭು ಕೆಂಪೇಗೌಡರ ಆಡಳಿತಾವಧಿಯಲ್ಲಿ ಸಾಮಾಜಿಕ ನ್ಯಾಯದ ಸಾಕ್ಷಿಯಾಗಿ ನಿರ್ಮಾಣಗೊಂಡ ತಿಗಳರ ಪೇಟೆ ಇಂದಿಗೂ ಅಸ್ತಿತ್ವದಲ್ಲಿದೆ. ಉನ್ನತ ಇತಿಹಾಸ ಮತ್ತು ಪರಂಪರೆ ಪಡೆದಿರುವ ಜನಾಂಗದ ಸಂಸ್ಕೃತಿಯನ್ನು ಉಳಿಸಲು ಎಲ್ಲರೂ ಮುಂದಾಗಬೇಕು~ ಎಂದು ಕರೆ ನೀಡಿದರು.
ಸಚಿವ ಬಿ.ಎನ್.ಬಚ್ಚೇಗೌಡ, `ಬೆಂಗಳೂರು ಮತ್ತು ಹೊಸಕೋಟೆಯಲ್ಲಿ ಹೆಚ್ಚಾಗಿ ನೆಲೆಸಿರುವ ತಿಗಳ ಜನಾಂಗವು ರಾಜ್ಯದಾದ್ಯಂತ ವಿವಿಧ ಹೆಸರಿನಲ್ಲಿ ಹಂಚಿಹೋಗಿದೆ. ಕ್ಷತ್ರಿಯ ಮೂಲದವರಾದ ತಿಗಳರು ಶ್ರಮಜೀವಿಗಳು~ ಎಂದು ಹೇಳಿದರು.
ಇದೇ ವೇಳೆ ಐಎಎಸ್ ಅಧಿಕಾರಿ ವಿ.ಪಿ.ಇಕ್ಕೇರಿ ಅವರಿಗೆ ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಂಸದ ಪಿ.ಸಿ. ಮೋಹನ, ಶಾಸಕ ನೆ.ಲ.ನರೇಂದ್ರಬಾಬು, ಮಾಜಿ ಮೇಯರ್ ಪಿ.ಆರ್.ರಮೇಶ್, ಪಾಲಿಕೆ ಸದಸ್ಯ ಎಚ್.ಬಸವರಾಜು ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.