ADVERTISEMENT

ಕರ್ನಾಟಕ ರತ್ನ ಮಾಚಿದೇವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2012, 19:30 IST
Last Updated 6 ಆಗಸ್ಟ್ 2012, 19:30 IST
ಕರ್ನಾಟಕ ರತ್ನ ಮಾಚಿದೇವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಿಎಸ್‌ವೈ
ಕರ್ನಾಟಕ ರತ್ನ ಮಾಚಿದೇವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಿಎಸ್‌ವೈ   

ಬೆಂಗಳೂರು: `ಆರ್ಥಿಕವಾಗಿ ಹಿಂದುಳಿದಿರುವ ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘವು ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ `ಕರ್ನಾಟಕ ರತ್ನ ಮಾಚಿದೇವ~ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

`ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಮಡಿವಾಳರ ಸ್ಥಿತಿಗತಿ ಅರಿಯುವಂತೆ ಸಮಿತಿ ರಚನೆಗೆ ಮುಖ್ಯಮಂತ್ರಿಯಾಗಿದ್ದಾಗ ಆದೇಶ ನೀಡಿದ್ದೆ. ಸಮಿತಿ ನೀಡಿರುವ ವರದಿಯು ಸದ್ಯಕ್ಕೆ ಸಂಪುಟದ ಮುಂದಿದ್ದು, ಪರಿಶಿಷ್ಟ ಜಾತಿಗೆ ಸೇರಿಸುವ ಬಗ್ಗೆ ಪ್ರಾಮಾಣಿಕವಾದ ಹೋರಾಟವನ್ನು ಮಾಡುತ್ತೇನೆ~ ಎಂದು ಸ್ಪಷ್ಟಪಡಿಸಿದರು.

`ಸುಮಾರು 25 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ಮಡಿವಾಳ ಜನಾಂಗದಲ್ಲಿ ಬಹುತೇಕರು ಬಡತನ ರೇಖೆಗಿಂತ ಕೆಳಗಿದ್ದಾರೆ. ಬಿಜೆಪಿ ಸರ್ಕಾರಕ್ಕಿಂತ  ಮೊದಲು ಬಂದ ಯಾವುದೇ ಸರ್ಕಾರ ಈ ಬಗ್ಗೆ ಗಮನ ನೀಡಲಿಲ್ಲ. ಕೆಲವು ರಾಜಕೀಯ ಮುಖಂಡರು ಭಾಷಣ ಬಿಗಿದರೇ ಹೊರತು ಶಿಕ್ಷಣ, ರಾಜಕೀಯ ಕ್ಷೇತ್ರದಲ್ಲಿ ಮಡಿವಾಳ ಜನಾಂಗಕ್ಕೆ ಪ್ರಾತಿನಿಧ್ಯ ಒದಗಿಸಬೇಕೆಂಬುದರ ಬಗ್ಗೆ ಚಿಂತನೆ ನಡೆಸಲಿಲ್ಲ. ಮಡಿವಾಳರೂ ಸೇರಿದಂತೆ ಹಿಂದುಳಿದ ವರ್ಗಗಳನ್ನು ಮುಖ್ಯವಾಹಿನಿಗೆ ತರುವಂತಹ ಪ್ರಯತ್ನ ನಡೆದಿರುವುದು ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾತ್ರ~ ಎಂದು ತಿಳಿಸಿದರು.

 `ಎಲ್ಲ ಜಾತಿ, ಜನಾಂಗದವರ ಬೆಂಬಲದಿಂದಲೇ ಮುಖ್ಯಮಂತ್ರಿಯಾಗಿ ಮೂರೂವರೆ ವರ್ಷಗಳ ಕಾಲ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡೆ. ನನ್ನಂತಹವರು ಬೇಗ ಮುಂದೆ ಬಂದಿದ್ದರಿಂದ ಕೆಲವರು ಅದನ್ನು ಸಹಿಸಲಿಲ್ಲ. ಜನರ ಅಭಿವೃದ್ಧಿಗೆ ಮುಖ್ಯಮಂತ್ರಿಯ ಸ್ಥಾನವೇ ಬೇಕು ಎಂದೇನೂ ಇಲ್ಲ. ಯಡಿಯೂರಪ್ಪ ಕೇವಲ ಭರವಸೆಯನ್ನು ನೀಡುವ ವ್ಯಕ್ತಿಯಲ್ಲ, ಹೇಳಿದ್ದನ್ನೇ ಮಾಡಿ ತೋರಿಸುವೆ~ ಎಂದು ಹೇಳಿದರು.

ಸಮಾರಂಭದಲ್ಲಿ ಯಡಿಯೂರು ಮೂಡಲಗಿರಿ (ವಚನ ಸಾಹಿತ್ಯ), ಡಾ.ಎಚ್.ರವಿಕುಮಾರ್ (ವೈದ್ಯಕೀಯ), ಸಿ.ರಾಮಚಂದ್ರ ( ಸಮಾಜ ಸೇವೆ), ಎಂ.ರಾಮಯ್ಯ (ಶಿಕ್ಷಣ), ಹೊಂ.ಸಿದ್ದಪ್ಪ (ಸಂಘಟನಾ ಕ್ಷೇತ್ರ), ಸಿದ್ದಗಂಗಯ್ಯ ( ಹಿಂದುಳಿದ ವರ್ಗಗಳ ಸುಧಾರಣೆ), ಬಸವಂತಪ್ಪ ಹೊನ್ನಪ್ಪ ಮಡಿವಾಳರ ( ಚಿತ್ರಕಲೆ) ಅವರಿಗೆ `ಕರ್ನಾಟಕ ರತ್ನ ಮಾಚಿದೇವ~ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸತ್ಯನಾರಾಯಣಪುರ ಆಶ್ರಮದ ಮುಕ್ತಾನಂದ ಸ್ವಾಮೀಜಿ, ಆಯುರ್ ಆಶ್ರಮದ ಸಂತೋಷ ಗುರೂಜಿ, ಕರ್ನಾಟಕ ಕೈಮಗ್ಗ ನಿಗಮ ಅಧ್ಯಕ್ಷ ಎಂ.ಡಿ.ಲಕ್ಷ್ಮಿನಾರಾಯಣ, ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಇತರರು ಇದ್ದರು.

ನೋವುಂಟು ಮಾಡಿದೆ: ಯಡಿಯೂರಪ್ಪ
`ಆರ್ಥಿಕ ತೊಡಕಿನಿಂದ ನನ್ನ ತಂಗಿ ಉತ್ತಮ ವಿದ್ಯಾಭ್ಯಾಸ ಪಡೆಯಲು ಸಾಧ್ಯವಾಗಲಿಲ್ಲ. ಅವಳನ್ನು ರೈತರೊಬ್ಬರಿಗೆ ಮದುವೆ ಮಾಡಿ ಕೊಡಲಾಯಿತು. ಈಗಲೂ ಆಕೆ ಅಣ್ಣ ನಾ ಓದಬೇಕಿತ್ತು ಎಂದು ಕಣ್ಣೀರು ಇಡುವುದನ್ನು ನೋಡಿದ್ದೇನೆ. ಈ ವಿಚಾರ ನನಗೆ ನೋವುಂಟು ಮಾಡಿದೆ. ಈ ಪರಿಸ್ಥಿತಿ ಬೇರೆ ಹೆಣ್ಣು ಮಕ್ಕಳಿಗೆ ಬರಬಾರದೆಂದು `ಭಾಗ್ಯಲಕ್ಷ್ಮಿ~ ಯೋಜನೆಯನ್ನು ಜಾರಿಗೆ ತಂದೆ~ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

`ಹೆಣ್ಣು ಎಂಬ ಕಾರಣಕ್ಕೆ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ತೊಂದರೆಯಾಗಬಾರದು. ಹೆಣ್ಣು ಹುಟ್ಟಿದರೆ ಭಾಗ್ಯ ಎಂಬುದು ಜನರಿಗೆ ತಿಳಿಯಬೇಕು~ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.