ADVERTISEMENT

ಕಲಾಲೋಕದ ಇತಿಹಾಸ ದಾಖಲು: ಮುಖ್ಯ ಪಾತ್ರ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2012, 19:55 IST
Last Updated 3 ಮಾರ್ಚ್ 2012, 19:55 IST

ಬೆಂಗಳೂರು: `ಕಲಾಲೋಕದ ಇತಿಹಾಸ ದಾಖಲಿಸುವಲ್ಲಿ ಅಂಚೆ ಚೀಟಿಗಳು ಮುಖ್ಯ ಪಾತ್ರವಹಿಸುತ್ತವೆ~ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ.ಎಸ್.ನಾಗಾಭರಣ ಹೇಳಿದರು.

ಕರ್ನಾಟಕ ಚಲನಚಿತ್ರ ಅಕಾಡೆಮಿಯು ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಶನಿವಾರ ಆಯೋಜಿಸಿದ್ದ ಚಲನಚಿತ್ರ ರಂಗದ ಅಂಚೆ ಚೀಟಿಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು,
`ಕನ್ನಡದ ಮೊದಲ ಚಲನಚಿತ್ರ ಸತಿ ಸುಲೋಚನಾ ಬಿಡುಗಡೆಯಾಗಿ ಇಂದಿಗೆ 78 ವರ್ಷಗಳು ಪೂರ್ಣಗೊಂಡಿವೆ.
 
ಈ ಹಿನ್ನೆಲೆಯಲ್ಲಿ ಅಂಚೆ ಚೀಟಿ ಪ್ರದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕನ್ನಡ ಚಿತ್ರರಂಗದ ಡಾ.ರಾಜ್‌ಕುಮಾರ್ ಒಬ್ಬರ ಅಂಚೆ ಚೀಟಿಯನ್ನಷ್ಟೇ ಅಂಚೆ ಇಲಾಖೆ ಬಿಡುಗಡೆ ಮಾಡಿದೆ. ಆದರೆ ಪ್ರಾದೇಶಿಕ ಚಲನಚಿತ್ರಗಳ ಕೊಡುಗೆಯನ್ನು ಗುರುತಿಸಿ ಜೀವಂತ ದಂತಕಥೆಗಳಾಗಿರುವ ಹಲವು ಕಲಾವಿದರ ನೆನಪಲ್ಲಿ ಅಂಚೆ ಚೀಟಿ ಬಿಡುಗಡೆ ಮಾಡುವತ್ತ ಅಂಚೆ ಇಲಾಖೆ ಗಮನ ಹರಿಸಬೇಕು~ ಎಂದು ಅವರು ಆಶಿಸಿದರು.

ಕನ್ನಡ ಚಿತ್ರರಂಗದ ಡಾ.ರಾಜ್‌ಕುಮಾರ್ ಅವರ ಅಂಚೆ ಚೀಟಿಗಳು ಸೇರಿದಂತೆ ಜಗತ್ತಿಗೆ ಚಲನಚಿತ್ರದ ಮಾಯಾ ಜಗತ್ತನ್ನು ಪರಿಚಯಿಸಿದ ಲೂಮಿರೆ ಸಹೋದರರು, ಭಾರತೀಯ ಚಲನಚಿತ್ರರಂಗದ ಪಿತಾಮಹ ದಾದಾ ಸಾಹೇಬ್ ಫಾಲ್ಕೆ, ನಟಿಯರಾದ ದೇವಿಕಾ ರಾಣಿ, ಮಧುಬಾಲಾ, ಮೀನಾ ಕುಮಾರಿ, ನೂತನ್, ಗಾಯಕರಾದ ಕೆ.ಎಲ್ ಸೆಹಗಲ್, ಎ.ಡಿ. ಬರ್ಮನ್, ನಟರಾದ ಗುರುದತ್, ಬಿಮಲ್ ರಾಯ್, ಎನ್‌ಟಿಆರ್, ಶಿವಾಜಿ ಗಣೇಶನ್, ಜೆಮಿನಿ ಗಣೇಶನ್ ಹೀಗೆ ಚಿತ್ರರಂಗದ ಹಲವು ಕಲಾವಿದರ ಅಂಚೆ ಚೀಟಿಗಳನ್ನು ಪ್ರದರ್ಶಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಚಲನಚಿತ್ರ ನಟಿ ಜಯಂತಿ ಅವರು ಪ್ರದರ್ಶನ ಏರ್ಪಡಿಸಿರುವ ಬಗ್ಗೆ ಮೆಚ್ಚುಗೆಯ್ನು ವ್ಯಕ್ತಪಡಿಸಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ಎಸ್.ಚಂದ್ರಶೇಖರ್ ಅವರು ಮಾತನಾಡಿ, `ದೇಶದ ಭವ್ಯ ಪರಂಪರೆಯನ್ನು ಉಳಿಸಲು ಇಂತಹ ಕಾರ್ಯಕ್ರಮಗಳು ಅಗತ್ಯ~ ಎಂದರು.

ಕರ್ನಾಟಕ ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್ ಜಗನ್ನಾಥ ಪ್ರಕಾಶ್ ಅವರು ಸಂಗ್ರಹಿಸಿದ್ದ 750ಕ್ಕೂ ಹೆಚ್ಚು ದೇಶ ವಿದೇಶಗಳ ಅಂಚೆ ಚೀಟಿಗಳನ್ನು ಪ್ರದರ್ಶನಕ್ಕಿಡಲಾಗಿದೆ. ಪ್ರದರ್ಶನ ಭಾನುವಾರ ಸಂಜೆಯವರೆಗೂ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.