ADVERTISEMENT

ಕಲಾವಿದರ ರಕ್ಷಣೆಗೆ ಬದ್ಧ- ಸಿ.ಎಂ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 19:59 IST
Last Updated 21 ಡಿಸೆಂಬರ್ 2012, 19:59 IST

ಯಲಹಂಕ: `ಯಾವುದೇ ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಕಲಾವಿದರ ಪಾತ್ರ ದೊಡ್ಡದು. ಅಂತಹ ಕಲಾವಿದರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ' ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.

ನಾಟಕರತ್ನ ಡಾ.ಗುಬ್ಬಿ ವೀರಣ್ಣ ರಂಗಭೂಮಿ ಕಲಾವಿದರ ರಾಜ್ಯ ಒಕ್ಕೂಟ ಹಾಗೂ ಬೆಂಗಳೂರು ನಗರ ಜಿಲ್ಲಾ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಉಪನಗರದ ಕೆಎಚ್‌ಬಿ ಮೈದಾನದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯ ಕಲಾವಿದರ ಶಕ್ತಿ ಸಂಗಮ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವೃತ್ತಿರಂಗಭೂಮಿ ಪುವಶ್ಚೇತನಕ್ಕಾಗಿ ಕಾಯಕಲ್ಪ ಎಂಬ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುತ್ತಿದ್ದು, ಆ ಮೂಲಕ ಹವ್ಯಾಸಿ ಮತ್ತು ವೃತ್ತಿ ರಂಗಭೂಮಿ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಕಲಾವಿದರ ಮಾಸಾಶನವನ್ನು  ಹೆಚ್ಚಿಸುವುದೂ ಸೇರಿದಂತೆ ಒಕ್ಕೂಟದ ವಿವಿಧ ಬೇಡಿಕೆಗಳ ಬಗ್ಗೆ ಪರಿಶೀಲಿಸಿ, ಸ್ಪಂದಿಸುವ ಮೂಲಕ ಸರ್ಕಾರ, ರಂಗಭೂಮಿ ಕಲಾವಿದರ ಅಭಿವೃದ್ಧಿಗೆ ಸಹಕರಿಸಲಿದೆ ಎಂದು ಭರವಸೆ ನೀಡಿದರು.

ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, `ಕ್ಷೇತ್ರ ವ್ಯಾಪ್ತಿಯಲ್ಲಿ ರಂಗಭೂಮಿಯಲ್ಲಿ ದುಡಿದಿರುವ ಕಲಾವಿದರಿಗೆ ನಿವೇಶನ ನೀಡಲಾಗುವುದು  ಎಂದು ಭರವಸೆ ನೀಡಿದ ಅವರು, ಯಲಹಂಕದಲ್ಲಿ 8 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್ ಭವನವನ್ನು ರಂಗ ಚಟುವಟಿಕೆಗಳಿಗೆ ಉಪಯೋಗವಾಗುವಂತೆ ವಿನ್ಯಾಸಗೊಳಿಸಲಾಗುತ್ತಿದೆ' ಎಂದರು. ಇದೇ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ 50 ಮಂದಿ ಹಿರಿಯ ರಂಗಭೂಮಿ ನಿರ್ದೇಶಕರಿಗೆ `ಕರ್ನಾಟಕ ರಂಗ ಕಲಾಕೇಸರಿ' ಬಿರುದು ನೀಡಿ ಸನ್ಮಾನಿಸಲಾಯಿತು.

ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸುಶೀಲ ವೆಂಕಟಾಚಲಪತಿ, ಅನ್ನಪೂರ್ಣ ವೀರಭದ್ರಯ್ಯ, ಒಕೂಟದ ರಾಜ್ಯ ಸಂಚಾಲಕ ಕೆ.ಎಂ.ಕೃಷ್ಣಮೂರ್ತಿ, ಕಾರ್ಯದರ್ಶಿ ರಬ್ಬನಹಳ್ಳಿ ಡಿ.ಕೆಂಪಣ್ಣ, ಬೆಂಗಳೂರು ಜಿಲ್ಲಾಧ್ಯಕ್ಷ ಎಂ.ಮಂಜುನಾಥ್, ಗೌರವಾಧ್ಯಕ್ಷ ಚಿಕ್ಕತಿಮ್ಮಾರೆಡ್ಡಿ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.