ADVERTISEMENT

ಕಾಂಗ್ರೆಸ್‌ ಪ್ರತಿಭಟನೆ; ಬೆಂಕಿ ತಗುಲಿ ಪ್ರಧಾನ ಕಾರ್ಯದರ್ಶಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2017, 19:30 IST
Last Updated 7 ಅಕ್ಟೋಬರ್ 2017, 19:30 IST
ಪ್ರತಿಭಟನೆ ವೇಳೆ ಬೆಂಕಿ ತಗುಲಿದ್ದ ಸುಮಂತಾ ಅವರನ್ನು ಕಾರ್ಯಕರ್ತರು ರಕ್ಷಿಸಿದರು – ಪ್ರಜಾವಾಣಿ ಚಿತ್ರ/ ಎಂ.ಎಸ್.ಮಂಜುನಾಥ್‌
ಪ್ರತಿಭಟನೆ ವೇಳೆ ಬೆಂಕಿ ತಗುಲಿದ್ದ ಸುಮಂತಾ ಅವರನ್ನು ಕಾರ್ಯಕರ್ತರು ರಕ್ಷಿಸಿದರು – ಪ್ರಜಾವಾಣಿ ಚಿತ್ರ/ ಎಂ.ಎಸ್.ಮಂಜುನಾಥ್‌   

ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್‌ ಕಾರ್ಯಕರ್ತರು ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ, ಬೆಂಕಿ ಅನಾಹುತ ಸಂಭವಿಸಿ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಸುಮಂತಾ ಗಾಯಗೊಂಡರು.

‘ಕೇಂದ್ರ ಸರ್ಕಾರವು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ’ ನಗರ ಘಟಕದ ಅಧ್ಯಕ್ಷ ರಘುವೀರ್ ಗೌಡ ನೇತೃತ್ವದಲ್ಲಿ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಚಿತ್ರವಿದ್ದ ಸಿಲಿಂಡರ್, ತರಕಾರಿಗಳನ್ನು ಪ್ರದರ್ಶಿಸಿ ಸ್ಥಳದಲ್ಲೇ ಅಡುಗೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಅಡುಗೆ ಮಾಡುವುದಕ್ಕಾಗಿ ಸ್ಥಳದಲ್ಲಿ ಕಟ್ಟಿಗೆಯ ಮೂರು ಒಲೆಗಳನ್ನು ನಿರ್ಮಿಸಿ, ಅವುಗಳ ಮೇಲೆ ದೊಡ್ಡ ಗಾತ್ರದ ಪಾತ್ರೆಗಳನ್ನು ಇರಿಸಲಾಗಿತ್ತು. ಕೆಲ ನಿಮಿಷ ಅದರ ಎದುರು ಘೋಷಣೆ ಕೂಗುತ್ತ ಪ್ರತಿಭಟನೆ ಮುಂದುವರಿಸಿದರು. ಸ್ಥಳದಲ್ಲಿದ್ದ ಮಾಧ್ಯಮದವರು, ಬೆಳಿಗ್ಗೆ 10.45 ಗಂಟೆಯ ಸುಮಾರಿಗೆ ಒಲೆಗಳಿಗೆ ಬೆಂಕಿ ಹಚ್ಚುವಂತೆ ಹೇಳಿದ್ದರು.

ADVERTISEMENT

ಆಗ ಕಾರ್ಯಕರ್ತೆಯೊಬ್ಬರು ಕಟ್ಟಿಗೆಗೆ ಸೀಮೆ ಎಣ್ಣೆ ಸುರಿದು ಬೆಂಕಿಕಡ್ಡಿ ಗೀರಿದ್ದರು.  ನಿಧಾನವಾಗಿ ಬೆಂಕಿ ಉರಿಯಲಾರಂಭಿಸಿತ್ತು. ಆಗ ಮತ್ತೊಬ್ಬ ಕಾರ್ಯಕರ್ತ, ಬೆಂಕಿ ಜೋರಾಗಿ ಉರಿಯಲು ಎಂದು ಬಾಟಲಿಯಲ್ಲಿ ತಂದಿದ್ದ ಪೆಟ್ರೋಲ್‌ ಅನ್ನು ಒಲೆಯೊಳಗೆ ಚೆಲ್ಲಿದ್ದ. ಆಗ ದಿಢೀರ್‌ ಬೆಂಕಿಯ ಕೆನ್ನಾಲಗೆ ಬಾಟಲಿಯತ್ತ ಬಂದು, ಕಾರ್ಯಕರ್ತನ ಕೈಗೆ ಆವರಿಸಿತ್ತು. ಆಗ ಆತ, ಪ್ರತಿಭಟನಾಕಾರರ ಗುಂಪಿನ ಮಧ್ಯೆಯೇ ಬಾಟಲಿಯನ್ನು ಕೈಬಿಟ್ಟಿದ್ದ. ಆ ಬಾಟಲಿ ಬಿದ್ದ ಸ್ಥಳದಲ್ಲಿ ಬೆಂಕಿ ಉರಿಯಲಾರಂಭಿಸಿ, ಅದರ ಪಕ್ಕದಲ್ಲಿ ನಿಂತಿದ್ದ ಸುಮಂತಾ ಅವರ ಕಾಲಿಗೆ ಬೆಂಕಿ ತಗುಲಿತ್ತು. 

ಅನಾಹುತ ಗಮನಿಸಿದ ಕಾರ್ಯಕರ್ತರು, ಸುಮಂತಾ ಅವರ ಎಡ ಕಾಲಿಗೆ ತಗುಲಿದ್ದ ಬೆಂಕಿಯನ್ನು ಆರಿಸಿದರು. ಅಪಾಯಕ್ಕೆ ಸಿಲುಕಿದ್ದ ಇನ್ನೊಬ್ಬ ಕಾರ್ಯಕರ್ತೆಯನ್ನು ರಕ್ಷಿಸಿದರು. ಘಟನೆ ವೇಳೆ ಸ್ಥಳದಲ್ಲಿದ್ದ ಮಾಧ್ಯಮದವರು, ಛಾಯಾಚಿತ್ರ ತೆಗೆಯಲು ಮುಂದಾದಾಗ ಕಾರ್ಯಕರ್ತರು ಅದಕ್ಕೆ ಅಡ್ಡಿಪಡಿಸಿದರು. ಕೆಲ ವಿದ್ಯುನ್ಮಾನ ಮಾಧ್ಯಮದವರ ಮೇಲೆ ಹಲ್ಲೆಗೆ ಯತ್ನಿಸಿದರು.

ಅದಾಗ ಬಳಿಕ ಯಾರೊಬ್ಬರು ಚಿತ್ರೀಕರಣ ಮಾಡಬಾರದೆಂದು, ಯುವ ಕಾಂಗ್ರೆಸ್‌ ಘಟಕದ ಬಾವುಟವನ್ನು ಸುಮಂತಾ ಅವರ ಮೈ ಮೇಲೆ ಹೊದಿಸಿ ಸ್ಥಳದಿಂದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ಬಗ್ಗೆ ಸ್ಥಳದಲ್ಲಿದ್ದ ಮುಖಂಡರ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಕೇಂದ್ರದ ವಿರುದ್ಧ ನಿರಂತರ ಪ್ರತಿಭಟನೆ: ಪ್ರತಿಭಟನೆಯಲ್ಲಿ ಅಧ್ಯಕ್ಷ ರಘುವೀರ್ ಗೌಡ ಮಾತನಾಡಿ, ‘ಬೆಲೆ ಏರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ, ಜನಸಾಮಾನ್ಯರ ಮೇಲೆ  ಬರೆ ಎಳೆಯುತ್ತಿದೆ. ಇಂಥ ಕ್ರಮವನ್ನು ಖಂಡಿಸಿ ನಿರಂತರವಾಗಿ ಹೋರಾಟ ನಡೆಸಲಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.